ರೈತರ ಮನೆ ಬಾಗಿಲಿಗೆ ಬರಲಿದೆ ಕೃಷಿ ಸಂಜೀವಿನಿ

Anchor
Published on

ಬೆಂಗಳೂರು: ಕಾಲಕಾಲಕ್ಕೆ ಮಣ್ಣು, ಕೀಟ ರೋಗ, ನೀರು ಪರೀಕ್ಷೆ ಸೇರಿದಂತೆ ಇನ್ನಿತರ ತಾಂತ್ರಿಕ ನೆರವನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವದ ‘ಕೃಷಿ ಸಂಜೀವಿನಿ’ ಹೆಸರಿನ ಸಂಚಾರಿ ಕೃಷಿ ವಾಹನಗಳು ಜ.7ರಂದು ಲೋಕಾರ್ಪಣೆಗೊಳ್ಳಲಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಬೆಳಗ್ಗೆ ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಈ ವಾಹನಗಳನ್ನು ರೈತರಿಗೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಪರೀಕ್ಷಾ ಉಪಕರಣಗಳಿಗೆ ಚಾಲನೆ ನೀಡಲಿದ್ದಾರೆ. ಚಿಕ್ಕ ಜಿಲ್ಲೆಗಳಿಗೆ ಒಂದು, ದೊಡ್ಡ ಜಿಲ್ಲೆಗಳಿಗೆ ಎರಡರಂತೆ ರಾಜ್ಯಾದ್ಯಂತ ಒಟ್ಟು 40 ಕೃಷಿ ಸಂಜೀವಿನಿ ವಾಹನಗಳು ರೈತರ ಸೇವೆಗೆ ಮುಕ್ತವಾಗಲಿದೆ.

2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲು ಅನುದಾನ ಒದಗಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೃಷಿ ಸಂಜೀವಿನಿ ಲೋಕಾರ್ಪಣೆಗೊಳ್ಳಲಿದೆ.

ಏನಿದು ಕೃಷಿ ಸಂಜೀವಿನಿ?

ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ, ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ-ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ಒದಗಿಸಿ, ಸೂಕ್ತ ಬೆಳೆ ಬೆಳೆಯಲು ಪೋ›ತ್ಸಾಹಿಸುವುದು ಸರ್ಕಾರದ ಆಶಯ. ಕೀಟ, ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ಜಮೀನಿನಲ್ಲೇ ಹತೋಟಿ ಕ್ರಮಗಳ ಕುರಿತು ಮಾರ್ಗೆಪಾಯ ಒದಗಿಸಲು ಕೃಷಿ ಸಂಜೀವಿನಿ ರೂಪಿಸಲಾಗಿದೆ.

ಕಾರ್ಯನಿರ್ವಹಣೆ ಹೇಗೆ?: ಕೃಷಿ ಸಂಜೀವಿನಿ ಸಹಾಯವಾಣಿ 155313 ಟೋಲ್ ಫ್ರೀ ಆಗಿದೆ. ಈ ಸಂಖ್ಯೆಗೆ ಯಾವ ಜಿಲ್ಲೆಯಿಂದ ಕರೆ ಮಾಡಿದರೂ ಆ ಕರೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದಾಗಿದೆ. ಈ ಸಹಾಯವಾಣಿ ಆರೋಗ್ಯ ಇಲಾಖೆಯ ಆಂಬುಲೆನ್ಸ್ ನಿರ್ವಹಣಾ ರೀತಿ ಕೆಲಸ ಮಾಡುತ್ತದೆ.

ಉದ್ದೇಶವೇನು?

  • ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೆಕ್ಷಣೆ ಕೈಗೊಳ್ಳುವುದು, ಕೀಟ,ರೋಗ, ಕಳೆಗಳ ನಿರ್ವಹಣಾ ಮಾರ್ಗಗಳನ್ನು ರೈತರಿಗೆ ತಿಳಿಸುವುದು.
  • ಪೀಡೆ ಸರ್ವೆಕ್ಷಣಾ ಮತ್ತು ಸಲಹಾ ಘಟಕಗಳನ್ನು ಪರಿಣಾಮಕಾರಿಯನ್ನಾಗಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net