

| ಮರಿದೇವ ಹೂಗಾರ ಹುಬ್ಬಳ್ಳಿ
ವಿವಿಧ ಶಾಲೆಗಳ ಶಿಕ್ಷಕರ ಹುದ್ದೆಗಳ ಭರ್ತಿಗೆ ಮೂರು ವರ್ಷಗಳ ಹಿಂದೆ ಕೆಪಿಎಸ್ಸಿ ಮೂಲಕ ಪರೀಕ್ಷೆ ನಡೆಸಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಈವರೆಗೂ ನೇಮಕಾತಿ ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸದೆ, ಅಭ್ಯರ್ಥಿಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ನೌಕರಿ ಕೈಗೆ ಸಿಕ್ಕಿಯೇ ಬಿಟ್ಟಿತು ಎಂದು ಆಸೆ ಇಟ್ಟುಕೊಂಡಿದ್ದ ಅಭ್ಯರ್ಥಿಗಳು ಇದರಿಂದ ಕಂಗಾಲಾಗಿದ್ದು, ‘ವಿಜಯವಾಣಿ ಸಹಾಯವಾಣಿ’ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕ್ರೈಸ್ 2017ರಲ್ಲಿ ಕೆಪಿಎಸ್ಸಿ ಮೂಲಕ ನೇಮಕದ ಅಧಿಸೂಚನೆ ಹೊರಡಿಸಿತ್ತು. ಖಾಲಿ ಇರುವ 3,326 ವಿವಿಧ ಶಿಕ್ಷಕ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿತ್ತು. ಇದರಲ್ಲಿ ಹೈ-ಕ ಮತ್ತು ರಾಜ್ಯ ವೃಂದ ನೇಮಕಾತಿ ಸೇರಿದೆ. 2019ರ ನವೆಂಬರ್ನಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಿಂಧುತ್ವ ಪ್ರಮಾಣ ಪತ್ರ, ಮೂಲದಾಖಲಾತಿ ಪರಿಶೀಲನೆ, ಪೊಲೀಸ್ ಪ್ರಮಾಣೀಕರಣ ಇತರೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಶಾಲೆಗಳು ಆರಂಭವಾಗಲಿವೆ. ತರಬೇತಿ ನೀಡಿ ಶಿಕ್ಷಕರ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಇದನ್ನು ಆರ್ಥಿಕ ಇಲಾಖೆ ಗಮನಕ್ಕೆ ತರಲಾಗಿದೆ. ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ. ಆರ್ಥಿಕ ಇಲಾಖೆಯಿಂದ ಅನುಮತಿ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು.
| ಟಿ.ರಾಘವೇಂದ್ರ ಕಾರ್ಯನಿರ್ವಾಹಕ ನಿರ್ದೇಶಕ, ಕ್ರೈಸ್