ದಿಕ್ಕು ತಪ್ಪುತ್ತಿರುವ ಕೆಪಿಎಸ್‌ಸಿ ವ್ಯವಸ್ಥೆ: ವಿಜಯೇಂದ್ರ ಆಕ್ರೋಶ | Harmful for Kannadiga candidates

B Y Vijayendra
Published on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆಯೇ ದಿಕ್ಕು ತಪ್ಪಿದೆ. ಇದು, ವಿವಿಧ ಇಲಾಖೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ದುರವಸ್ಥೆಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡು, ರಾಜ್ಯ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ, ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆ ದಿನೇ ದಿನೇ ದಿಕ್ಕು ತಪ್ಪುತ್ತಿದೆ, ತುಕ್ಕು ಹಿಡಿಯುತ್ತಿದೆ, ಗೊಂದಲಗಳ ಗೂಡಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯೋಗಾಕಾಂಕ್ಷಿತ ರಾಜ್ಯದ ಅಭ್ಯರ್ಥಿಗಳು ಕೆಪಿಎಸ್ಸಿ ಯ ಪರೀಕ್ಷೆಗಳು ಹಾಗೂ ಆಯ್ಕೆ ಕುರಿತು ಕನಸು ಕಟ್ಟಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯನ್ನು ಎದುರಿಸುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕನ್ನಡಿಗ ಅಭ್ಯರ್ಥಿಗಳಿಗೆ ಮಾರಕ

ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಸುಧಾರಣೆ ಮಾಡಬೇಕೆಂಬ ಉದ್ದೇಶದಿಂದ ನೀಡಿರುವ ಪಿಸಿ ಹೋಟಾ ಸಮಿತಿಯ ಕೆಲವು ಶಿಫಾರಸುಗಳೇ ಈಗ ಕನ್ನಡಿಗ ಅಭ್ಯರ್ಥಿಗಳಿಗೆ ಮಾರಕವಾಗಿದೆ, ಕೆಪಿಎಸ್ಸಿ ನಿರಂತರವಾಗಿ ದಕ್ಷತೆ, ಪ್ರಾಮಾಣಿಕತೆ ಮೆರೆಯುವಲ್ಲಿ ವಿಫಲವಾಗಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗೊಂದಲಗಳು ತಲೆ ಎತ್ತಲು ಎಡೆಮಾಡಿಕೊಟ್ಟಿದೆ. ನಾಡಿನ ಪ್ರತಿಭಾನ್ವಿತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಜರೂರು ಕ್ರಮ ವಹಿಸಲಿ ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net