ಕೆಪಿಎಸ್ಸಿ ನಿಯಮಗಳೇ ದ್ವಂದ್ವ! ಪರಭಾಷಿಕರಿಗೆ ಪರೀಕ್ಷಾ ನಿಯಂತ್ರಕ ಹುದ್ದೆ, ಕನ್ನಡಿಗರಿಗೆ ಅನ್ಯಾಯ

ವಿಜಯವಾಣಿ (8)
Published on

| ಎನ್.ಎಲ್.ಶಿವಮಾದು, ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಸುಧಾರಣೆ ಮಾಡಬೇಕೆಂಬ ಉದ್ದೇಶದಿಂದ ನೀಡಿರುವ ಪಿ.ಸಿ. ಹೋಟಾ ಸಮಿತಿಯ ಕೆಲವು ಶಿಫಾರಸುಗಳೇ ಈಗ ಕನ್ನಡಿಗರಿಗೆ ಮಾರಕವಾಗಿವೆ. ಈ ನಿಯಮಗಳ ಜಾರಿಯಲ್ಲಿ ದ್ವಂದ್ವ ಮತ್ತು ಜಿಜ್ಞಾಸೆ ಮೂಡಿಸಿದೆ. ಆಡಳಿತಾತ್ಮಕವಾಗಿ ಮತ್ತು ಆಯೋಗದಲ್ಲಿ ಸುಧಾರಣೆ ತರಲು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರು ಹೊರ ರಾಜ್ಯದ ಅಧಿಕಾರಿಗಳಾಗಿರಬೇಕೆಂಬ ಶಿಫಾರಸು ಇದೆ. ಕರ್ನಾಟಕ ಕೇಡರ್ ಅಧಿಕಾರಿಗಳನ್ನು ನೇಮಿಸಿದಾಗ ಸ್ಥಳೀಯ ರಾಜಕೀಯ ಪ್ರಭಾವ, ಸಂಪರ್ಕದಿಂದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲಿದೆ. ಈ ಸಂಪರ್ಕವು ಸಂಪೂರ್ಣವಾಗಿ ವೃತ್ತಿಪರ ಸಂಬಂಧವೆಂದು ಗ್ರಹಿಸಲಾಗುತ್ತದೆ.

ಉನ್ನತ ನಾಗರಿಕ ಸೇವೆಯ ಅಧಿಕಾರಿಗಳು ಅಂತಹ ಹುದ್ದೆಗಳಿಗೆ ನೇಮಕಗೊಳ್ಳಲು ಮತ್ತು ಹೆಚ್ಚುವರಿಯಾಗಿ ಸಾಂವಿಧಾನಿಕ ಅಧಿಕಾರ ಚಲಾಯಿಸಲು ತಮ್ಮ ಸಂಪರ್ಕವನ್ನು ಹೆಚ್ಚಾಗಿ ಬಳಸುತ್ತಾರೆ. ಸಾರ್ವಜನಿಕ ಸೇವೆಯ ಕಾರ್ಯಕ್ಷಮತೆ ಮತ್ತು ಸಮಗ್ರತೆಯನ್ನು ಸುಧಾರಿಸಲು ಜನಸ್ನೇಹಿ ಮತ್ತು ಪರಿಣಾಮಕಾರಿ ಆಡಳಿತವು ಎಲ್ಲ ಹಂತಗಳಲ್ಲಿ ನಾಗರಿಕ ಸೇವೆಗಳ ಶುದ್ಧೀಕರಣ, ನೈತಿಕ ಮಾನದಂಡಗಳ ಅನುಕರಣೆ, ಸಂವಿಧಾನದ ಮೂಲ ತತ್ವಗಳಿಗೆ ಬದ್ಧತೆ ಮತ್ತು ರಾಜಕಾರಣಿಗಳ ನಡುವಿನ ಸಂಬಂಧದ ಸ್ಪಷ್ಟ ತಿಳಿವಳಿಕೆ ಅವಲಂಬಿಸಿರುತ್ತದೆ. ಈ ಕಾರಣಗಳಿಂದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಹೊರ ರಾಜ್ಯದ ಅಧಿಕಾರಿಯನ್ನು ನೇಮಿಸಬೇಕೆಂದು ಹೋಟಾ ಸಮಿತಿಯು ಹೇಳುತ್ತದೆ. ಅಲ್ಲದೆ, ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ 2023-24ನೇ ಸಾಲಿನ ಕೆಎಎಸ್ ಪೂರ್ವಭಾವಿ ಪರೀಕ್ಷೆ ಅವಾಂತರಗಳು ಕನ್ನಡೇತರ ಅಧಿಕಾರಿ ಬೇಕೇ? ಅಥವಾ ಹೊರ ರಾಜ್ಯದ ಅಧಿಕಾರಿಗಳು ರಾಜ್ಯದಲ್ಲಿ ಎಷ್ಟರಮಟ್ಟಿಗೆ ನ್ಯಾಯ ಒದಗಿಸುತ್ತಿದ್ದಾರೆ ಎಂದು ಹುದ್ದೆ ಆಕಾಂಕ್ಷಿಗಳು ಪ್ರಶ್ನಿಸುತ್ತಿದ್ದಾರೆ.

ಸಾಧಕ- ಬಾಧಕಗಳೇನು?

  • ಸುಧಾರಣೆ ದೃಷ್ಟಿಯಿಂದ ಕನ್ನಡೇತರರು ಪರೀಕ್ಷಾ ನಿಯಂತ್ರಕರಾಗಿರುವುದು ಸ್ಥಳೀಯ ಸಂಪರ್ಕವಿರುವುದಿಲ್ಲ. ಆದರೆ, ದಕ್ಷತೆ ಮೆರೆಯದಿರುವುದು ನೇರವಾಗಿ ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
  •  ಕರ್ನಾಟಕದಲ್ಲಿ ರಾಜ್ಯದವರಿಗಾಗಿ ನೇಮಿಸಿ ರುವ ಆಯೋಗವೊಂದರಲ್ಲಿ ಕನ್ನಡೇತರರಿಗೆ ಹೆಚ್ಚು ಅನುಕೂಲವಾಗಿ ಸ್ಥಳೀಯ ಅರ್ಹ ಅಭ್ಯರ್ಥಿಗಳು ಹುದ್ದೆಗಳಿಂದ ವಂಚಿತ.
  • ಕೆಪಿಎಸ್ಸಿಯು ನಿರಂತರವಾಗಿ ದಕ್ಷತೆ, ಪ್ರಾಮಾಣಿಕತೆ ಮೆರೆಯುವಲ್ಲಿ ವಿಫಲವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು.

ಕನ್ನಡೇತರರಿಂದ ಸಮಸ್ಯೆ ಏನು?

ಕೆಎಎಸ್ ಪರೀಕ್ಷೆ ಮಾತ್ರವಲ್ಲ, ಸಾಮಾನ್ಯ ಕಿರಿಯ ದರ್ಜೆ ಸಹಾಯಕ (ಎಸ್​ಡಿಎ), ಹಿರಿಯ ದರ್ಜೆ ಸಹಾಯಕ (ಎಫ್​ಡಿಎ), ಕೆಎಎಸ್ ಸೇರಿ ಎಲ್ಲ ಪರೀಕ್ಷೆಗಳಲ್ಲಿಯೂ ಆಯೋಗದ ಸಾಮಾನ್ಯ ಸೂಚನೆ ಏನೆಂದರೆ, ‘ಪ್ರಶ್ನೆಯು ಕನ್ನಡದಲ್ಲಿ ಅರ್ಥವಾಗದಿದ್ದರೆ, ಇಂಗ್ಲಿಷ್​ನಲ್ಲಿ ಓದಿಕೊಂಡು ಅರ್ಥೈಸಿಕೊಳ್ಳುವುದು’ ಎಂಬ ಒಕ್ಕಣೆ ನೀಡಿರುತ್ತಾರೆ. ಕೆಎಎಸ್ ಪರೀಕ್ಷೆಯಾದರೆ, ಉನ್ನತ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಅರ್ಥೈಸಿಕೊಳ್ಳುವವರಾಗಿರುತ್ತಾರೆ. ಆದರೆ, ಎಸ್​ಡಿಎ, ಎಫ್​ಡಿಎ ಪರೀಕ್ಷೆಗಳಲ್ಲಿಯೂ ಇಂಗ್ಲಿಷ್​ನಿಂದ ಏಕೆ ಭಾಷಾಂತರ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ.

ದಕ್ಷತೆ ಮೆರೆಯದ ಪರೀಕ್ಷಾ ನಿಯಂತ್ರಕರು

ಯಾವುದೇ ವಿದ್ಯಾರ್ಹತೆ ಪರೀಕ್ಷೆಯಾದರೂ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು. ಆದರೆ, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಕನ್ನಡ ಭಾಷಾಂತರದಲ್ಲಿ ತಪು್ಪಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸುವಲ್ಲಿ ಹಾಗೂ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಪರೀಕ್ಷಾ ನಿಯಂತ್ರಕರು ಸೋಲುತ್ತಿದ್ದಾರೆ ಎನ್ನುವುದಕ್ಕಿಂತ ದಕ್ಷತೆ, ಮತ್ತು ಸೃಜನಶೀಲತೆಯಿಂದ ಕೆಲಸ ನಿರ್ವಹಿಸದೆ, ಆಲಸ್ಯ ವಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಉದಾಹರಣೆಗೆ ಯಾವುದೇ ಪರೀಕ್ಷೆ ನಡೆಸುವ ವೇಳೆ 100 ಪ್ರಶ್ನೆಗಳನ್ನು ಆಯ್ಕೆ ಮಾಡುತ್ತಾರೆ ಎಂದರೆ, 500ರಿಂದ 800 ಪ್ರಶ್ನೆಗಳನ್ನು ಆಯ್ಕೆ ಮಾಡಿ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಭಾಷಾಂತರ ಮಾಡಿಸಿ ಸರಿಯಾಗಿಟ್ಟುಕೊಳ್ಳಬೇಕು. ಆದರೆ, ಕೆಲವೇ ಪ್ರಶ್ನೆಗಳನ್ನು ಆಯ್ಕೆ ಮಾಡಿ ಆ ಪ್ರಶ್ನೆಗಳನ್ನು ಯಾರಿಗೂ ತೋರಿಸದೆ ಮುದ್ರಣಕ್ಕೆ ಕಳುಹಿಸಲಾಗುತ್ತಿದೆ. ಇಂಗ್ಲಿಷ್​ನಲ್ಲಿರುವ ಪ್ರಶ್ನೆಗಳನ್ನಷ್ಟೇ ಪರಿಶೀಲಿಸಿ, ಕನ್ನಡಕ್ಕೆ ಭಾಷಾಂತರಗೊಂಡಿರುವ ಪ್ರಶ್ನೆಗಳನ್ನು ಪರಿಶೀಲಿಸುತ್ತಿಲ್ಲ. ಇದರಿಂದ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಈ ಹಿಂದೆ ಆಯೋಗದಲ್ಲಿ ನಿರ್ವಹಿಸಿದ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net