

ಬೆಂಗಳೂರು: ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಲಕ್ಷಾಂತರ ಯುವಕರ ಕನಸು ಸಾಕಾರ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗವೇ (ಕೆಪಿಎಸ್ಸಿ) ಕಂಟಕವಾಗಿ ಮಾರ್ಪಟ್ಟಿದೆ. 2016 ರಿಂದ 2021ರವರೆಗೆ ವಿವಿಧ ಇಲಾಖೆಗಳ 7 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಪರೀಕ್ಷೆ ನಡೆಸಿದೆಯಾದರೂ ಒಬ್ಬರಿಗೂ ಉದ್ಯೋಗ ಸಿಕ್ಕಿಲ್ಲ! 2016 ಫೆಬ್ರವರಿಯಿಂದ 2021ರ ಅ.13ರವರೆಗೆ ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಕೃಷಿ, ಕಾಲೇಜು ಶಿಕ್ಷಣ, ಸಚಿವಾಲಯ ಸೇರಿ 16 ಇಲಾಖೆಗಳ 7000ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಪಿಎಸ್ಸಿ ಪರೀಕ್ಷೆ ನಡೆಸಿದೆ. ಪರೀಕ್ಷೆ ಬರೆದು ಕಾಯುತ್ತಿರುವ ಅಭ್ಯರ್ಥಿಗಳು ಆಯ್ಕೆಯ ಅಂತಿಮ ಪಟ್ಟಿ ಬಿಡುಗಡೆ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಿವಿಧ ಇಲಾಖೆಗಳಲ್ಲಿ ಅನೇಕ ಪ್ರಮುಖ ಹುದ್ದೆಗಳು ಖಾಲಿ ಉಳಿದ್ದಿದ್ದು, ನೇಮಕಾತಿ ವಿಳಂಬದಿಂದಾಗಿ ಜನರಿಗೆ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಆಯೋಗ ಮಾತ್ರ ಆಮೆಗತಿಯಲ್ಲಿ ಪ್ರಕ್ರಿಯೆ ನಡೆಸುತ್ತಿರುವುದು ಇಲಾಖೆಗಳು ಹಾಗೂ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆಯ್ಕೆಗೆ ಅಭ್ಯರ್ಥಿಗಳ ಕೊರತೆ!: 2016ರ ನವೆಂಬರ್ನಲ್ಲಿ ಅಧಿಸೂಚನೆಗೊಂಡ ಕರ್ನಾಟಕ ವಸತಿ ಶಿಕ್ಷಣ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ಕಲಾ ಶಿಕ್ಷಕರು (ಡಿಪ್ಲೊಮಾ) 230 ಹುದ್ದೆಯ ಆಯ್ಕೆ ಪಟ್ಟಿಗೆ ಕೊರತೆ ಇರುವ ಕೆಳ ಜ್ಯೇಷ್ಠತೆ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಂತದಲ್ಲಿದ್ದರೆ, 230 ಪದವೀಧರ ಆಯ್ಕೆ ಸಂಬಂಧ ವಿದ್ಯಾರ್ಹತೆ ಬಗ್ಗೆ ಸ್ಪಷ್ಟೀಕರಣ ಕೋರಿದ್ದು, ಈ ವರೆಗೂ ಸಂಬಂಧಪಟ್ಟ ಇಲಾಖೆಯಿಂದ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂಬ ಸಬೂಬು ಆಯೋಗದಿಂದ ಬಂದಿದೆ.
ಕೋರ್ಟ್ ಆದೇಶ ಅಂತಿಮ: ಅರಣ್ಯ ಇಲಾಖೆಯ 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳಿಗೆ ಆಯೋಗ ಪರೀಕ್ಷೆ ನಡೆಸಿದೆ. ಆದರೆ, ನೇಮಕಾತಿ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರಿಂದ ವಿಳಂಬವಾಗಿತ್ತು. ಇತ್ತೀಚೆಗೆ ಕೆಎಟಿ ಅಂತಿಮ ತೀರ್ಪಿಗೆ ಒಳಪಟ್ಟಿರುವಂತೆ ಕೆಪಿಎಸ್ಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಸಾರಿಗೆ ಇಲಾಖೆಯ 150 ಆರ್ಟಿಒ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ರೂಪಿಸಿರುವ ನಿಯಮಾವಳಿ ಅನ್ವಯವೇ ಮುಂದುವರಿಸುವಂತೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದರೂ ನೇಮಕ ಪ್ರಕ್ರಿಯೆ ಆರಂಭಿಸಿಲ್ಲ. ವಾಹನ ದುರಸ್ತಿ ಸೇವಾನುಭವ ಪತ್ರ ಕಡ್ಡಾಯಗೊಳಿಸದೆ ಅರ್ಹತೆ (ಮೆರಿಟ್) ಹಾಗೂ ಮೀಸಲಾತಿ ಆಧಾರದಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕೆಎಟಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2021ರ ಅಕ್ಟೋಬರ್ನಲ್ಲಿ ರದ್ದುಗೊಳಿಸಿತ್ತು.
ಅಧಿಕಾರಿಗಳಿಗೆ ಲೀಗಲ್ ನೋಟಿಸ್: ಆರ್ಟಿಒ ಹುದ್ದೆಗಳ ನೇಮಕಾತಿ ಮುಂದುವರಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ಪಾಲಿಸದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು, ಹೆಚ್ಚುವರಿ ಆಯುಕ್ತರು (ಆಡಳಿತ) ಹಾಗೂ ಕೆಪಿಎಸ್ಸಿ ಕಾರ್ಯದರ್ಶಿಗೆ ಪ್ರಮೋದ್ ಮಂಜುನಾಥ್ ಭಟ್, ಶಿವಾನಂದ ಕಾರಜೋಳ, ಮಂಜುನಾಥ ಕೆ. ಮುಂತಾದ ಅಭ್ಯರ್ಥಿಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ವಕೀಲರ ಮೂಲಕ ಇದೇ ಜ.5ರಂದು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.