

ಬೆಂಗಳೂರು: ಪರೀಕ್ಷೆ ಮುಂದೂಡುವಂತೆ ಹಲವಾರು ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದರೂ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ನಿಗದಿತ ದಿನಾಂಕದಂದೇ ಲೆಕ್ಕಪತ್ರ ಇಲಾಖೆ ಸಹಾಯಕ ನಿಯಂತ್ರಕರು ಮತ್ತು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.
ಈಗಾಗಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಇದೇ ಮಾದರಿಯಲ್ಲಿ ಕೆಪಿಎಸ್ಸಿ ಸಹ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿಯ ‘ಎ’ ವೃಂದದ ಸಹಾಯಕ ನಿಯಂತ್ರಕರ ಪೂರ್ವಭಾವಿ ಪರೀಕ್ಷೆ ಆಗಸ್ಟ್ 17 ಮತ್ತು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ‘ಎ’ ಮತ್ತು ‘ಬಿ’ ವೃಂದ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಆಗಸ್ಟ್ 24ರಂದು ನಿಗದಿಯಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ
ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳು ಮತ್ತು ಶೌಚಗೃಹಗಳನ್ನು ಪರೀಕ್ಷಾ ಹಿಂದಿನ ದಿನ ಸ್ಯಾನಿಟೈಸ್ ಮಾಡಲು ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೊಠಡಿ ಪ್ರವೇಶ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಪೊಲೀಸ್ ಸಿಬ್ಬಂದಿಯಿಂದ ನಿಗಾ ವಹಿಸುವುದಕ್ಕೆ ಸೂಚನೆ ನೀಡಲಾಗಿದೆ. ಪ್ರತಿ ಅಭ್ಯರ್ಥಿಗೂ ಎರಡು ಮೀಟರ್ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಒಂದು ಕೊಠಡಿ ಕಾಯ್ದಿರಿಸಲಾಗಿದ್ದು, ಕೆಮ್ಮು, ಉಸಿರಾಟದ ತೊಂದರೆ, ನೆಗಡಿಯಂತಹ ಲಕ್ಷಣಗಳು ಕಂಡು ಬರುವ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಪಡಿಸಲಾಗಿದೆ. ಅಲ್ಲದೆ, ಸಣ್ಣ ಸ್ಯಾನಿಟೈಸರ್ನ್ನು ಪರೀಕ್ಷಾ ಕೇಂದ್ರಕ್ಕೆ ತರುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಸತ್ಯವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ವಿರೋಧಿಸಿ ಅಭ್ಯರ್ಥಿಗಳಿಂದ ಪ್ರತಿಭಟನೆ
ಕರೊನಾ ಮಧ್ಯೆ ಪರೀಕ್ಷೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿರುವುದನ್ನು ವಿರೋಧಿಸಿ ಮಂಗಳವಾರ ನೂರಾರು ಆಕಾಂಕ್ಷಿಗಳು ಬೆಂಗಳೂರು ಮತ್ತು ಮೈಸೂರಿನ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಕಚೇರಿ ಮುಂದೆ ಪ್ರತಿಭಟಿಸಿದರು. ಬೆಂಗಳೂರಿನ ಕೆಪಿಎಸ್ಸಿ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಅಭ್ಯರ್ಥಿಗಳ ಜತೆಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. 2021ರ ಫೆಬ್ರವರಿ ತಿಂಗಳಲ್ಲಿ ಕೆಲ ಕೆಪಿಎಸ್ಸಿ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಅದಕ್ಕೂ ಮುನ್ನ ಎಲ್ಲ ಪ್ರಕ್ರಿಯೆ ಮುಗಿಸಲು ಕೆಪಿಎಸ್ಸಿ ಈ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಪರೀಕ್ಷೆಗೆ ಹಾಜರಾಗಲಿರುವ ಶೇ.20ಕ್ಕೂ ಹೆಚ್ಚು ಅಭ್ಯರ್ಥಿಗಳು ಸರ್ಕಾರಿ ಸಿಬ್ಬಂದಿಯಾಗಿದ್ದಾರೆ. ಈ ಸಿಬ್ಬಂದಿ ಕರೊನಾ ಸೋಂಕು ನಿವಾರಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಮನೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಪರೀಕ್ಷೆ ಹಾಜರಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
54 ಹುದ್ದೆಗೆ 9918 ಅಭ್ಯರ್ಥಿಗಳು
ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ಲೆಕ್ಕ ನಿಯಂತ್ರಕರ 54 ಹುದ್ದೆಗಳಿಗೆ 9,918 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಪರೀಕ್ಷೆ ಕೇಂದ್ರಗಳನ್ನು ಗರುತಿಸಲಾಗಿದೆ. 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 1,65,258 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ರಾಯಚೂರು ಮತ್ತು ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.