

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಹುದ್ದೆ ಅಂಗಡಿಯಲ್ಲೂ ಸಿಗುವುದಿಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧದ ಆವರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಚರ್ಚೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾಡುವ ಕೆಲಸ, ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಅದಕ್ಕೆ ಸೂಕ್ತವಾಗಿ ಹುದ್ದೆ ನೀಡುತ್ತಾರೆ. ಮಾಧ್ಯಮಗಳ ಮುಖಾಂತರ ಯಾರಾದರೂ ಹುದ್ದೆ ಕೇಳುತ್ತಾರೆಯೇ? ಇದನ್ನೆಲ್ಲಾ ಹೊಸದಾಗಿ ಕೇಳುತ್ತಿರುವೆ ಎಂದರು.
ಈ ಪಕ್ಷವನ್ನು ಕೇವಲ ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿಲ್ಲ. ಕಾರ್ಯಕರ್ತರು, ಮತದಾರರು ನಮ್ಮ ಮೇಲೆ ಅಪಾರವಾದ ವಿಶ್ವಾಸ ಇಟ್ಟು ನಮಗೆ ಅಧಿಕಾರ ನೀಡಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು, ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಈಗ ನಮ್ಮ ಪಕ್ಷ ಸಂಘಟನೆ ಮಾಡಿ, ಪಕ್ಷ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ನಮ್ಮ ಮುಖ್ಯಮಂತ್ರಿಯವರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಬುದ್ಧಿವಾದ ಹೇಳಿದ್ದಾರೆ. ಯಾವುದೇ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡದಂತೆ ಸೂಚಿಸಿದ್ದಾರೆ ಎಂದು ತಿಳಿಸಿದರಲ್ಲದೇ, ಪಕ್ಷದ ವಿಚಾರದ ವಿಚಾರವಾಗಿ ಯಾವುದೇ ಬೆಳವಣಿಗೆ ಇದ್ದರೂ ನಾನೇ ಮಾಧ್ಯಮಗೋಷ್ಠಿ ಕರೆದು ಮಾಹಿತಿ ನೀಡುತ್ತೇನೆ ಎಂದರು
ಪಕ್ಷದ ವಿಚಾರ ಮಾಧ್ಯಮಗಳ ಮುಂದೆ ಮಾತನಾಡುವಂತಹದಲ್ಲ. ಏನೇ ಇದ್ದರೂ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಥವಾ ನನ್ನ ಬಳಿ ಬಂದು ಮಾತನಾಡಲಿ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ. ಬಿಜೆಪಿ, ಜೆಡಿಎಸ್, ರೈತ ಸಂಘ ಸೇರಿದಂತೆ ಯಾವುದೇ ಪಕ್ಷವಾದರೂ ಪಕ್ಷದ ವಿಚಾರವನ್ನು ಆಂತರಿಕವಾಗಿ ಚರ್ಚೆ ಮಾಡಬೇಕು ಎಂದು ಹೇಳುತ್ತೇನೆ ಎಂದು ತಿಳಿಸಿದರು.
ನಾನು ಯಾವುದಾದರೂ ಹುದ್ದೆ ಬಯಸಿದರೆ ನೀವು (ಮಾಧ್ಯಮಗಳು) ಆ ಸ್ಥಾನ ನನಗೆ ಕೊಡಿಸುತ್ತೀರಾ? ಅಥವಾ ಈ ಹುದ್ದೆಗಳು ಅಂಗಡಿಯಲ್ಲಿ ಸಿಗುತ್ತದೆಯೇ? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟರು ಅವರು ಯಾವ ಅಧಿಕಾರ ಪಡೆದಿದ್ದಾರೆ? ನಾವು ಅವರನ್ನೆಲ್ಲ ಸ್ಮರಿಸಬೇಕು. ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಪಕ್ಷ ಬಹಳ ಮುಖ್ಯ ಎಂದು ನಾನು ಬಹಳ ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದರು.
ಯಾರಿಗಾದರೂ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಲಿ. ಸಧ್ಯಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆಯಲ್ಲಿದ್ದು, ಇದರ ಪರಿಶೀಲನೆಗೆ ಸುರ್ಜೆವಾಲ ಅವರು ಶುಕ್ರವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಪ್ರಶ್ನೆಗಳು ಏನೇ ಇದ್ದರೂ ಅವರನ್ನು ಕೇಳಿಕೊಳ್ಳಲಿ ಎಂದು ತಿಳಿಸಿದರು.
ಪಕ್ಷದ ಸಂಘಟನೆ ಕುಂಠಿತವಾಗಿದೆ, ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರಲ್ಲ ಎಂದು ಪತ್ರಕರ್ತರು ಗಮನ ಸೆಳೆದಾಗ, ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ನಾನಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು. ವಿಚಾರವಾಗಿ ಅವರ ಬಳಿ ಕೇಳಲಿ. ಖರ್ಗೆಯವರ ನಿರ್ಧಾರವನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ರೀತಿ ಮಾಡಬಾರದು ಎಂದು ತಿಳಿಸಿದರು.