

ತಿರುವನಂತಪುರ: ಕೋಳಿಕ್ಕೋಡ್ನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನ ಕರೊನಾ ಸಂಕಷ್ಟದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರ ನ್ನು ಮರಳಿ ತಾಯ್ನೆಲಕ್ಕೆ ಕರೆತರುವ ಕಾರ್ಯಾಚರಣೆಯ 'ವಂದೇ ಭಾರತ' ವಿಮಾನವಾಗಿತ್ತು.
ಇದರಲ್ಲಿ 10 ಹಸುಗೂಸುಗಳು ಸೇರಿ 174 ಪ್ರಯಾಣಿಕರು, ಇಬ್ಬರು ಪೈಲಟ್ಗಳು ಸೇರಿ 6 ಸಿಬ್ಬಂದಿ ಇದ್ದರು. ದುರಂತ ಸಂಭವಿಸಿದಾಗ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳದಿರುವುದು ಸಾವು ನೋವಿನ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ನ ಬೋಯಿಂಗ್ 737 ಮಾದರಿ ವಿಮಾನ ಸಂಜೆ 7.40ರಲ್ಲಿ ಇಳಿಯುವ ಪ್ರಯತ್ನದಲ್ಲಿತ್ತು. ರನ್ ವೇ ಗೊತ್ತಾಗದೇ 35 ಅಡಿಗೂ ಹೆಚ್ಚು ಆಳದ ಕಮರಿಗೆ ಬಿದ್ದಿದೆ. ಹೀಗಾಗಿ ವಿಮಾನ ಎರಡು ತಂಡಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಹಲವರನ್ನು ರಕ್ಷಿಸಲಾಗಿದೆ.
ಕೋಳಿಕ್ಕೋಡ್ ವಿಮಾನ ಬೆಟ್ಟದ ಮೇಲಿನ ವಿಮಾನ ನಿಲ್ದಾಣವಾಗಿದೆ. ಇದನ್ನು ಟೇಬಲ್ ಟಾಪ್ ವಿಮಾಣ ನಿಲ್ದಾಣ ಎಂದು ಕರೆಯಲಾಗುತ್ತದೆ. ಮಂಗಳೂರು ವಿಮಾಣ ನಿಲ್ದಾಣ ಕೂಡ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದೆ. ಇಂಥ ವಿಮಾನ ನಿಲ್ದಾಣಗಳಲ್ಲಿ ಅದರಲ್ಲೂ ರಾತ್ರಿ ವೇಳೆ ರನ್ವೇಯನ್ನು ಗುರುತಿಸುವುದು ಸವಾಲಿನ ಕೆಲಸವೇ ಸರಿ ಏಕೆಂದರೆ, ರನ್ವೇ ಬೆಟ್ಟದ ಕೆಳಗಿರುವಂತೆಯೇ ದೃಷ್ಟಿಭ್ರಮೆಯನ್ನು ಉಂಟು ಮಾಡುತ್ತವೆ (ಆಪ್ಟಿಕಲ್ ಇಲ್ಯೂಷನ್).
ಕೋಳಿಕ್ಕೋಡ್ ಈ ದುರಂತ ಹತ್ತು ವರ್ಷಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ವಿಮಾನ ದುರಂತದ ನೆನಪನ್ನು ಮರುಕಳಿಸಿದೆ.