ನನ್ನೇಕೆ ಈ ರೀತಿ ನೋಡ್ತಿಯಾ? ನಾನಂದ್ರೆ ಇಷ್ಟಾನಾ? ಭಾರತೀಯ ವ್ಯಕ್ತಿ ಕೊಟ್ಟ ಉತ್ತರಕ್ಕೆ ಕೊರಿಯನ್​ ಯುವತಿ ಶಾಕ್​! Korean woman

Korean woman
Published on

Korean woman : ಒಂದೇ ಒಂದು ಭಾಷೆಯನ್ನು ಕಲಿಯಲು ಕೆಲವರು ಹರಸಾಹಸ ಪಡುವಾಗ ಕೆಲವೊಬ್ಬರು ಐದಾರು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ನೋಡಿ ನಾವು ಹುಬ್ಬೇರಿಸಿದ್ದುಂಟು. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದನ್ನು ನೋಡಿದ್ದೇವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಇದೀಗ ಸೇರ್ಪಡೆಗೊಂಡಿದೆ.

ಭಾರತೀಯ ವ್ಯಕ್ತಿಯೊಬ್ಬನ ಭಾಷಾ ಕೌಶಲ್ಯವನ್ನು ನೋಡಿದ ಕೊರಿಯನ್ ಯುವತಿ, ಒಂದು ಕ್ಷಣ ಹುಬ್ಬೇರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವ್ಲಾಗರ್​ ಆಗಿರುವ ಕೊರಿಯನ್​ ಯುವತಿ, ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದರು. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಈ ವಿಶೇಷ ಘಟನೆ ನಡೆದಿದೆ.

ಹಲವಾರು ಜನ ನನ್ನನ್ನೇ ನೋಡುತ್ತಿದ್ದಾರೆ ಎಂದು ಹೇಳುವ ಮೂಲಕ ಕೊರಿಯನ್​ ಯುವತಿ ವಿಡಿಯೋವನ್ನು ಪ್ರಾರಂಭಿಸುತ್ತಾಳೆ. ಈ ವೇಳೆ ತನ್ನ ಪಕ್ಕದಲ್ಲಿದ್ದ ಭಾರತೀಯ ಪುರುಷನೊಂದಿಗೆ ಕೊರಿಯನ್ ಭಾಷೆಯಲ್ಲಿ ಆ ಯುವತಿ ಮಾತನಾಡುತ್ತಾಳೆ. ನೀನು ನನ್ನನ್ನೇ ಏಕೆ ಈ ರೀತಿ ನೋಡುತ್ತಿದ್ದೀಯ? ನಾನಂದ್ರೆ ನಿನಗೆ ಇಷ್ಟಾನಾ? ಎಂದು ಯುವತಿ ಕೇಳುತ್ತಾಳೆ. ಆತನಿಗೆ ನನ್ನ ಭಾಷೆ ಅರ್ಥವಾಗುವುದಿಲ್ಲ ಎಂದು ಆ ಮಹಿಳೆ ಅಂದುಕೊಳ್ಳುತ್ತಾಳೆ. ಆದರೆ, ಅಲ್ಲಿ ನಡೆದಿದ್ದೇ ಬೇರೆ.

ಆ ಭಾರತೀಯ ವ್ಯಕ್ತಿ ಮುಗುಳ್ನಗುತ್ತಾ ಕೊರಿಯನ್ ಭಾಷೆಯಲ್ಲಿ "ನಾನು ಇಲ್ಲಿ ಕೆಲಸ ಮಾಡುತ್ತೇನೆ" ಎಂದು ಉತ್ತರಿಸುತ್ತಾನೆ. ಇದನ್ನು ಕೇಳಿದ ಮಹಿಳೆ ಒಂದು ಕ್ಷಣ ಹುಬ್ಬೇರಿಸುತ್ತಾಳೆ. ಮೂಖನ್ನನಾಗಿ ಮಾಡಲು ಹೋಗಿ ತಾನೇ ಮೂರ್ಖಳಾಗುತ್ತಾಳೆ. ಇದಾದ ಬಳಿಕ ಆ ಮಹಿಳೆ "ನೀವು ಕೊರಿಯನ್ ಭಾಷೆಯನ್ನು ಹೇಗೆ ಇಷ್ಟು ವೇಗವಾಗಿ ಮಾತನಾಡುತ್ತೀರಿ? ಎಂದು ಕೇಳುತ್ತಾಳೆ.

ಇದಕ್ಕೆ ಉತ್ತರಿಸಿದ ಭಾರತೀಯ ವ್ಯಕ್ತಿ, ನಾನು ಕೊರಿಯಾದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಿದ್ದೇನೆ. ಆದ್ದರಿಂದ, ನಾನು ಕೊರಿಯನ್ ಭಾಷೆಯನ್ನು ಕಲಿತಿದ್ದೇನೆ ಎಂದು ಉತ್ತರಿಸುತ್ತಾನೆ. ಬಳಿಕ ಆ ಮಹಿಳೆ ಕ್ಷಮೆಯಾಚಿಸಿ ಅಲ್ಲಿಂದ ಹೊರಟುಹೋಗುತ್ತಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಗನೆ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net