

ಬೆಂಗಳೂರು: ನಿಜ ಜೀವನದಲ್ಲಿ ರೌಡಿಗಳಾದವರು ಚಿತ್ರಗಳಲ್ಲಿ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಉದಾಹರಣೆಗಳು ಇದ್ದಿರಲಿಕ್ಕಿಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಂತೂ ಇಂಥದ್ದೊಂದು ಸಾಧ್ಯತೆ ಇರಲೇ ಇಲ್ಲ.
ಅಂಥ ಸಂದರ್ಭದಲ್ಲಿ ಮೂಡಿಬಂದದ್ದು ಹಲವು ದಾಖಲೆಗಳನ್ನು ಸೃಷ್ಟಿಸಿದ್ದ ಓಂ ಚಿತ್ರ.
ಈ ವಿಷಯ ಇಲ್ಲಿ ಹೇಳಲು ಕಾರಣವೆಂದರೆ, ಇಂದು ಮೃತಪಟ್ಟ ಕುಖ್ಯಾತ ರೌಡಿ ಕೊರಂಗು ಕೃಷ್ಣ ಇದೇ ಓಂ ಚಿತ್ರದಲ್ಲಿ ನಟನೆ ಮಾಡಿದ್ದ!
ಹೌದು. ಕೆಲವು ಅಪರಾಧ ಕೃತ್ಯಗಳಲ್ಲಿ ಸುಳಿವೇ ಕೊಡದೇ ಚೆನ್ನಾಗಿ ನಟನೆ ಮಾಡುತ್ತಿದ್ದ ಈ ರೌಡಿ, ಓಂ ಚಿತ್ರದಲ್ಲಿಯೂ ನಟಿಸಿ ಶಹಭಾಸ್ಗಿರಿ ಪಡೆದುಕೊಂಡಿದ್ದ.
1995ರಲ್ಲಿ ತೆರೆ ಕಂಡಿದ್ದ ಈ ಚಿತ್ರವನ್ನು ನಟ ಉಪೇಂದ್ರ ನಿರ್ದೇಶಿಸಿದ್ದರು. ಶಿವರಾಜ್‍ಕುಮಾರ್, ಪ್ರೇಮಾ ಮುಖ್ಯ ಪಾತ್ರದಲ್ಲಿದ್ದರು. ರೌಡಿ ಪಾತ್ರಧಾರಿಗಳಾಗಿ ಚಿತ್ರನಟದ ಬದಲು ನಿಜವಾದ ರೌಡಿಗಳ ಹುಟುಕಾಟದಲ್ಲಿದ್ದರು ಉಪೇಂದ್ರ. ಆಗ ಅವರಿಗೆ ಕೆಲವು ರೌಡಿಗಳ ಜತೆ ಕೊರಂಗು ಕೃಷ್ಣನೂ ಸಿಕ್ಕಿದ್ದ. ನಟನೆಗೆ ಈತ ಒಪ್ಪಿಕೊಂಡಿದ್ದ ಕಾರಣ, ಚಿತ್ರದಲ್ಲಿ ನಟಿಸಿದ್ದ.
ಈ ಚಿತ್ರ ಇದುವರೆಗೆ 632ಕ್ಕೂ ಹೆಚ್ಚು ಸಲ ಮರು ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಸಿನಿಮಾ ಕೂಡ ಇಷ್ಟು ಬಾರಿ ಬಿಡುಗಡೆಯಾಗಿಲ್ಲ ಎನ್ನುವ ದಾಖಲೆ ಬರೆದಿರುವ ಜತೆಗೆ, ನಿಜವಾದ ರೌಡಿಗಳನ್ನು ಹಾಕಿಕೊಂಡು ಚಿತ್ರ ಮಾಡಿರುವುದು ಕೂಡ ಇದೇ ಮೊದಲ ಚಿತ್ರ ಎಂದು ಹೆಸರು ಪಡೆದಿದೆ.
ಚಿತ್ರೀಕರಣದ ವೇಳೆ ನಟ ಡಾ. ರಾಜ್ಕುಮಾರ್ ಅವರು ಶೂಟಿಂಗ್ ಸ್ಪಾಟ್ಗೆ ಬರುತ್ತಾರೆ ಎಂದಾಗ ಕೊರಂಗು ಕೃಷ್ಣ ಸೇರಿದಂತೆ ಇತರ ರೌಡಿಗಳು ಹೆದರಿದ್ದರು ಎಂದು ಚಿತ್ರ ತಂಡ ಇಂದಿಗೂ ನೆನೆಪಿಸಿಕೊಳ್ಳುತ್ತದೆ.