ಕೊಪ್ಪಳ:ನಗರ ಸೇರಿ ಜಿಲ್ಲಾದ್ಯಂತ ಗುರುವಾರ ಮೂರು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಬಿತ್ತನೆಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ತೇವಾಂಶ ಕೊರತೆ ಕಾರಣ ಬಿತ್ತಿದ ಬೆಳೆಗಳೂ ಒಣಗುವ ಸ್ಥಿತಿ ತಲುಪಿದ್ದವು. ಗುರುವಾರ ವರುಣನ ಕೃಪೆಯಾಗಿದ್ದು, ಆತಂಕದಲ್ಲಿದ್ದ ರೈತರಿಗೆ ಕೊಂಚ ನೆಮ್ಮದಿ ಮೂಡಿಸಿದೆ. ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಸಂಜೆ 6 ಗಂಟೆವರೆಗೂ ಸುರಿಯಿತು. ಕೊಪ್ಪಳ ನಗರದಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿಯಿತು. ಕುವೆಂಪು ನಗರ, ದೇವರಾಜ ಅರಸು ಕಾಲನಿಗಳಲ್ಲಿ ಚರಂಡಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಸಂಚಾರಕ್ಕೆ ತೊಂದರೆಯಾಯಿತು.
ಜವಾಹರ ರಸ್ತೆ, ಶಾರದಾ ಚಿತ್ರಮಂದಿರ ರಸ್ತೆ ಸೇರಿ ಪ್ರಮುಖ ರಸ್ತೆಗಳೆಲ್ಲ ಕೆಲ ಗಂಟೆ ಜಲಾವೃತವಾದವು. ರಾಜ ಕಾಲುವೆ ತುಂಬಿ ಹರಿಯಿತು. ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳ ಸಭೆ ನಡೆಸಿ ಚರಂಡಿ ಸ್ವಚ್ಛಗೊಳಿಸಲು ಸೂಚಿಸಿದರು ನಗರಾಡಳಿತ ಚರಂಡಿ ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ. ಪರಿಣಾಮ ಚರಂಡಿಗಿಂತ ರಸ್ತೆಗಳಲ್ಲೇ ಅಧಿಕ ನೀರು ಹರಿಯುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ಈಗಾಗಲೇ ಬಿತ್ತನೆ ಕೈಗೊಂಡ ರೈತರು ವರುಣನ ಕೃಪೆಯಾಗತ್ತಲೇ ನಿಟ್ಟುಸಿರು ಬಿಟ್ಟರು. ಜಿಲ್ಲಾದ್ಯಂತ ಜೂನ್ ತಿಂಗಳವರೆಗೆ ವಾಡಿಕೆ ಮಳೆ ಆಗಿಲ್ಲ. ಪರಿಣಾಮ ಬರಗಾಲ ಸ್ಥಿತಿ ಎದುರಿಸುವಂತಾಗಿತ್ತು. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರೈತರು ಮಳೆ ಬಾರದ ಕಾರಣ ಬುಧವಾರವಷ್ಟೇ ಮೆಕ್ಕೆಜೋಳ ಬೆಳೆ ಹರಗಿದ್ದರು. ಒಂದೆರೆಡು ದಿನ ಮಳೆಯಾಗದಿದ್ದಲ್ಲಿ ಮತ್ತಷ್ಟು ರೈತರು ಬಿತ್ತಿದ ಬೆಳೆ ನಾಶಪಡಿಸುವ ಸಂದರ್ಭ ಎದುರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಮಳೆಯಾಗಿದ್ದು ಎಲ್ಲ ಆತಂಕ ನಿವಾರಣೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಮಳೆ ಮುಂದುವರಿದಲ್ಲಿ ಬರ ಪರಿಸ್ಥಿತಿಯಿಂದ ಪಾರಗಬಹುದು.