

ಕೊಪ್ಪಳ: ಕುಷ್ಟಗಿ ತಾಲೂಕಿನ ರೈತ ಸಂಪರ್ಕ ಅಧಿಕಾರಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸಾಕಷ್ಟು ಚರ್ಚೆಯ ಜೊತೆಗೆ ಅನುಮಾನವನ್ನು ಹುಟ್ಟುಹಾಕಿದೆ.
ರಾಘವೇಂದ್ರ ಕೊಂಡಗುರಿ (37) ನಾಪತ್ತೆಯಾಗಿರುವ ಅಧಿಕಾರಿ. ಇವರು ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ನಿವಾಸಿ. ಡಿ. 1 ರಂದು ಕುಷ್ಟಗಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಅಂದಿನಿಂದ ಕಚೇರಿಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.
ರಾಘವೇಂದ್ರ ಅವರ ಪತ್ನಿ ವಿದ್ಯಾ ಅವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಯ ನಾಪತ್ತೆ ಪ್ರಕರಣ ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ರಾಘವೇಂದ್ರ ಅವರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)