ಮಾಸ್ತಮ್ಮ ದೇವಿ ಕೊಂಡೋತ್ಸವ ಸಂಪನ್ನ

23 SARAG 4
Published on

ಸರಗೂರು : ಗ್ರಾಮ ದೇವತೆ ಶ್ರೀ ಮಾಸ್ತಮ್ಮ ದೇವಿ ಜಾತ್ರಾ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದಲ್ಲಿ ಬೆಳಗಿನಿಂದಲೇ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಂತರ ಪಟ್ಟಣದ ನಾಯಕ ಸಮಾಜ ಬೀದಿಯ ಚಿಕ್ಕದೇವಮ್ಮನ ದೇವಸ್ಥಾನದಿಂದ ದೇವಿಯ ವಿಗ್ರಹ ಮತ್ತು ಚಿಕ್ಕದೇವಮ್ಮನ ಸಾಗರೆ, ಇಂದಿರಮ್ಮ, ಸುತ್ತಿಗೆ ಮಾಸ್ತಮ್ಮ ಅವರೊಂದಿಗೆ ತೆರಳಿ ಕಪಿಲಾ ನದಿಯಲ್ಲಿ ಗಂಗೆಗೆ ಪೂಜೆ ಸಲ್ಲಿಸಿ ನಂತರ ಅದೇ ಮಾರ್ಗವಾಗಿ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಗಂಗೆ ತರಲಾಯಿತು. ಹರಕೆ ಸಮರ್ಪಣೆ :ಮಾಸ್ತಮ್ಮನ ದೇವಿಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕೊಂಡೋತ್ಸವ ಸಿದ್ಧಪಡಿಸಿದ್ದರು. ನಂತರ ಉತ್ಸವ ಮೂರ್ತಿಯನ್ನು ದೇವಾಲಯ ಮುಂಭಾಗದ ತಂದು ವಿವಿಧ ಪೂಜೆ, ಪುನಸ್ಕಾರ ನೆರವೇರಿಸಿದ ಬಳಿಕ ಕೊಂಡೋತ್ಸವಕ್ಕೆ ಅನುವು ಮಾಡಿಕೊಡಲಾಯಿತು. ಈ ವೇಳೆ ನೂರಾರು ಭಕ್ತರು ಕೊಂಡ ಹಾಯ್ದರು. ನಂತರ ಭಕ್ತರು ಕೊಂಡಕ್ಕೆ ಉಪ್ಪು ಹಾಗೂ ಅರಳು ಸುರಿಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ವಿವಿಧ ಸಮುದಾಯದವರು ಒಗ್ಗೂಡಿ ನಡೆಸುವ ಜಾತ್ರೆಗೆ ಸರಗೂರು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಭಕ್ತರು ಭಾಗವಹಿಸಿದ್ದರು. ಪಪಂ ಸದಸ್ಯರಾದ ಎಸ್. ಎಲ್. ರಾಜಣ್ಣ, ಸಣ್ಣತಾಯಮ್ಮ ಅವರು ದೇವಸ್ಥಾನದ ಮುಂಭಾಗದಲ್ಲಿ ಭಕ್ತರಿಗೆ ಸಿಹಿ ಹಂಚಿದರು.ನಾಡ ದೇಶದ ಯಜಮಾನ ಗಣೇಶ, ಆದಿಕರ್ನಾಟಕ ಸಮುದಾಯದ ಯಜಮಾನ ಭೀಮಯ್ಯ, ಈಡಿಗ ಸಮಾಜದ ಮುಖಂಡ ನಾಗರಾಜು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net