

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವನ್ನು (ಕೋಚಿಮುಲ್) ವಿಭಜನೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದು ಶೀಘ್ರದಲ್ಲೇ ವಿಭಜನೆಯ ಜತೆಗೆ ಆಡಳಿತಾಧಿಕಾರಿ ನೇಮಕವೂ ಆಗಲಿದೆ ಎಂದು ಮಾಲೂರು ಶಾಸಕರೂ ಆದ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವಿಭಜನೆಯಾಗಬೇಕು ಎಂಬುದು ಎರಡೂ ಜಿಲ್ಲೆಯ ಪ್ರತಿಷ್ಠೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅದು ವೈಜ್ಞಾನಿಕವಾಗಿ ಆಗಿರಲಿಲ್ಲ, ನಮ್ಮ ಸರ್ಕಾರ ಈಗ ವೈಜ್ಞಾನಿಕವಾಗಿ ವಿಭಜನೆ ಮಾಡುವ ತೀರ್ಮಾನ ಕೈಗೊಳ್ಳಲಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಕೆ.ಸುಧಾಕರ್ ಅವರು ಮಂತ್ರಿ ಆಗಿದ್ದಾಗ ಎರಡೂ ಜಿಲ್ಲೆಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಭಜನೆ ಮಾಡಿದ ಕಾರಣ ಅದು ಕೋರ್ಟ್ ಮೆಟ್ಟಿಲೇರಿತು. ಇನ್ನೇನು ಕೆಲವೇ ದಿನಗಳಲ್ಲಿ ವೈಜ್ಞಾನಿಕವಾಗಿ ವಿಭಜನೆ ಮಾಡಿ ಸರ್ಕಾರ ಆದೇಶಿಸಲಿದೆ, ಎರಡೂ ಒಕ್ಕೂಟಗಳಿಗೆ ಆಡಳಿತಾಽಕಾರಿಗಳ ನೇಮಕ ಆಗಲಿದೆ. ಆಗ ಎರಡೂ ಜಿಲ್ಲೆಯ ಒಕ್ಕೂಟಗಳಿಗೂ ಪ್ರತ್ಯೇಕ ಚುನಾವಣೆ ನಡೆಯಲಿದೆ ಎಂದರು.
ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಲು ಯಾವ ಆಡಳಿತ ಮಂಡಳಿಗೂ ಸಿಗದ ಅವಕಾಶ ನಮ್ಮ ಆಡಳಿತ ಮಂಡಳಿಗೆ ಸಿಕ್ಕಿದೆ. ಹೆಚ್ಚಿನ ಅವಧಿ ಕೆಲಸ ಮಾಡಲು ಎರಡೂ ಜಿಲ್ಲೆಯ ನಾಯಕರು ಅವಕಾಶ ಕಲ್ಪಿಸಿದ್ದಾರೆ. ನಮ್ಮ ಅವಧಿಯಲ್ಲಿ ಎಂವಿಕೆ ಗೋಲ್ಡನ್ ಡೇರಿ, ಐಸ್ ಕ್ರೀಂ ಘಟಕ, ಪ್ಯಾಕಿಂಗ್ ಘಟಕ ನಿರ್ಮಾಣ, ಉತ್ಪಾದಕರ ಮಕ್ಕಳಿಗಾಗಿ ವಸತಿ ನಿಲಯ ನಿರ್ಮಾಣ ಹೀಗೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. 4 ಕಾರ್ಯಕ್ರಮ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಿಂದ ಕೋಲಾರ ಒಕ್ಕೂಟ ವಿಭಜನೆಯಾಗಿ 38-40 ವರ್ಷವಾಯಿತು. ಆನಂತರ ಅಧಿಕಾರಕ್ಕೆ ಬಂದ ಯಾವುದೇ ಆಡಳಿತ ಮಂಡಳಿಯು ನಮ್ಮ ಹಾಗೆ ಕೆಲಸ ಮಾಡಲು ಆಗಿಲ್ಲ, ಅದರಲ್ಲೂ ಕಾಂಗ್ರೆಸ್ ಸರ್ಕಾರದ ಅವಽಯಲ್ಲಿ ಸಿಕ್ಕಿದ್ದು ವಿಶೇಷವಾಗಿತ್ತು ಎಂದು ಹರ್ಷ ವ್ಯಕ್ತಪಡಿಸಿದರು.