ಇಷ್ಟಾರ್ಥ ನೆರವೇರಿಸುವ ವರದರಾಜ

7kglphoto-2,
Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ (ಸತ್ಯಾಗಾಲ) ಗ್ರಾಮದ ಕೋಟೆ ವರದರಾಜಸ್ವಾಮಿ ದೇವಾಲಯ 1,200 ವರ್ಷಗಳ ಇತಿಹಾಸ ಹೊಂದಿದ ಸನ್ನಿಧಿಯಾಗಿದೆ. ಉತ್ತಮ ಉದ್ದೇಶ ಇಟ್ಟುಕೊಂಡು ಭಕ್ತರು ಶ್ರದ್ಧಾಭಕ್ತಿಯಿಂದ ಬೇಡಿದ ವರ ಮತ್ತು ಇಷ್ಟಾರ್ಥಗಳನ್ನು ವರದರಾಜ ಸ್ವಾಮಿ ಕರುಣಿಸುವ, ಸಿದ್ಧಿಸುವ ಪುಣ್ಯ ಸ್ಥಳವಾಗಿದೆ.

ಗಂಗರ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ. ಕಾವೇರಿಯ ಬಲ ದಂಡೆಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು. ಈ ಸ್ಥಳವನ್ನು ಹಿಂದೆ ಸತ್ಯಾಗಾಲ ಎಂದು ಕರೆಯಲಾಗುತ್ತಿತ್ತು. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರನು ಅಪಹರಣಕ್ಕೆ ಒಳಗಾಗಿದ್ದ ಸೀತಾ ಮಾತೆಯನ್ನು ಹುಡುಕಿಕೊಂಡು ಈ ಸ್ಥಳಕ್ಕೆ ಆಗಮಿಸಿದ್ದನು. ಈ ವೇಳೆ ರಾಮ ತನ್ನ ತಂದೆ ದಶರಥನಿಗೆ ಪಿಂಡ ಪ್ರದಾನ ಮಾಡಿದ್ದ ಎಂಬ ಐತಿಹ್ಯವಿದೆ. ಈ ಕ್ಷೇತ್ರಕ್ಕೆ ವಿಶಿಷ್ಟಾದ್ವೈತ ಮತ ಸಿದ್ಧಾಂತಿಗಳಾದ ಶ್ರೀ ರಾಮಾನುಜಾಚಾರ್ಯರು 12ನೇ ಶತನಮಾನದಲ್ಲಿ ಭೇಟಿ ನೀಡಿದ್ದರು. ನಂತರ ಕೊಳ್ಳೇಗಾಲದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಹಾಗೂ ಮೇಲುಕೋಟೆಗೆ ತೆರಳಿದ್ದರು ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ವಿಶೇಷವಾಗಿ ವರದರಾಜ ಸ್ವಾಮಿ, ಆತನ ಪತ್ನಿ ಪೆರಂದೇವಿ, ವೇದಾಂತ ದೇಶಿಕರ್ ಸನ್ನಿಧಿ, ಶ್ರೀ ಲಕ್ಷ್ಮೀ ನಾರಾಯಣ ವಿಗ್ರಹ, ಆಂಜನೇಯ ಸ್ವಾಮಿ ಮತ್ತು ರಾಮನ ಮೂರ್ತಿಗಳಿವೆ.

ವರದರಾಜಸ್ವಾಮಿ ಕಂಡ ವೇದಾಂತ ದೇಶಿಕರ್:
ಈ ಪುಣ್ಯ ಕ್ಷೇತ್ರ ತಮಿಳುನಾಡು ಮೂಲದ ತೂಪಲ್‌ನ ವೇದಾಂತ ದೇಶಿಕರ್ ಅವರ ತಪೋ ಭೂಮಿಯಾಗಿದೆ. 13ನೇ ಶತಮಾನದಲ್ಲಿ ಸತ್ಯಾಗಾಲಕ್ಕೆ ಬಂದ ವೇದಾಂತ ದೇಶಿಕರ್ ಕಾವೇರಿ ನದಿಯ ಸಮೀಪವಿರುವ ಅರಳಿಮರದ ಕೆಳಗೆ ಕೂರ್ಮಾಸನದ ಮೇಲೆ ಕುಳಿತು 12 ವರ್ಷಗಳ ಕಾಲ ತಪಸ್ಸು ಮಾಡಿದ್ದರು ಎನ್ನಲಾಗಿದೆ. =ನಂತರ ಸಾಕ್ಷಾತ್ ವರದರಾಜಸ್ವಾಮಿ ಅವರಿಗೆ ಪ್ರತ್ಯಕ್ಷವಾಗಿದ್ದ ಎಂದು ಸ್ಥಳ ಪುರಾಣ ಹೇಳುತ್ತದೆ.
ವೇದಾಂತ ದೇಶಿಕರ್ ಅವರು ಭಯ ನಿವಾರಣೆಯ ಶ್ಲೋಕವನ್ನು (ಅಭೀಸ್ತಿತ್ವಂ) ವನ್ನು ರಚನೆ ಮಾಡಿದ್ದು ಈ ಸ್ಥಳದಲ್ಲೇ. ಹಾಗಾಗಿ ಇಂದಿಗೂ ದೇವಾಲಯದಲ್ಲಿ ವೇದಾಂತ ದೇಶಿಕರ್ ನಿಂತ ಭಂಗಿಯಲ್ಲಿರುವ ವಿಗ್ರಹಕ್ಕೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ.

ದೇವಿ ವಿಗ್ರಹ ವೈಶಿಷ್ಟ್ಯ:
ಈ ಭಾಗದ ಸುತ್ತ ಎರಡ್ಮೂರು ಗ್ರಾಮದಲ್ಲಿ ವರದರಾಜ ಸ್ವಾಮಿ ದೇವಾಲಯವಿದೆ. ಆದರೆ, ಪೆರಂದೇವಿ ಸಮೇತ ವರದರಾಜ ಸ್ವಾಮಿ ನೆಲೆಸಿರುವ ಏಕೈಕ ದೇವಾಲಯ ಇದು. ದೇವಿ ಮೂರ್ತಿಯ ಕೆತ್ತನೆ ವಿಶಿಷ್ಟವಾಗಿದೆ. ದೇವಿ ಕೈಯಲ್ಲಿ ಅಂಟಿಕೊಳ್ಳದ ರೀತಿ ಕಲ್ಲಿನ ಬಳೆಯನ್ನು ಕೆತ್ತನೆ ಮಾಡಿರುವುದು ವಿಶೇಷವಾಗಿದೆ. ಬಳೆ ಕೈ ಸುತ್ತ ತಿರುಗುವುದು ಅಂದಿನ ಶಿಲ್ಪ ಕಲಾ ಕೌಶಲಕ್ಕೆ ಸಾಕ್ಷಿಯಾಗಿದೆ.

ದಕ್ಷಿಣಾಭಿಮುಖ ಆಂಜನೇಯ ವಿಗ್ರಹ:
ತಮಿಳುನಾಡಿನಿಂದ ವೇದಾಂತ ದೇಶಿಕರ್ ಪ್ರಥಮ ಬಾರಿಗೆ ಸತ್ಯಾಗಾಲದ ಪೆರಂದೇವಿ ಸಮೇತ ವರದರಾಜ ಸ್ವಾಮಿ ದೇವಾಲಯಕ್ಕೆ ಬಂದಾಗ ದೇವರ ವಿಗ್ರಹವನ್ನು ನೋಡಿ ಪುಳಕಿತರಾದರಂತೆ. ಆದ್ದರಿಂದ ಈ ಸ್ಥಳದಲ್ಲೇ ಹಲವು ವರ್ಷಗಳಿದ್ದು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ವಿಶೇಷ ಶಕ್ತಿ ತುಂಬಿದರು. ಈ ವಿಗ್ರಹ ದಕ್ಷಿಣಾಭಿಮುಖವಾಗಿದೆ. ಈ ಕಾರಣಕ್ಕಾಗಿ ಕ್ಷೇತ್ರಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ತಮಿಳುನಾಡಿನ ಶ್ರೀರಂಗ ದೇವಾಲಯ ಅಭಿವೃದ್ಧಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇಂಥ ಪವಾಡಗಳು ಇಲ್ಲಿ ನಡೆದಿರುವ ಕಾರಣ ಸತ್ಯಾಗಾಲಕ್ಕೆ ವೇದಾಂತ ದೇಶಿಕರ್ ಅವರು ಸತ್ಯಾಕಾಲ ಎಂದೇ ಕರೆದಿದ್ದರು.

ಶನಿವಾರ ವಿಶೇಷ ಪೂಜೆ:
ದೇವಾಲಯದಲ್ಲಿ ವರ್ಷವಿಡಿ ಪೂಜಾ ಕೈಂಕರ್ಯ ನಡೆಯುತ್ತದೆ. ಬೆಳಗ್ಗೆ 9 ರಿಂದ 7 ಗಂಟೆವರೆಗೂ ದೇವಾಲಯ ತೆರೆದಿರುತ್ತದೆ. ಆದರೆ, ಶನಿವಾರ ದೇವರ ವಾರವಾಗಿದೆ. ಅಂದು ವಿಶೇಷ ಪೂಜೆ ನೆರವೇರುತ್ತದೆ. ವರ್ಷಕೊಮ್ಮೆ ದಿವ್ಯ ರಥೋತ್ಸವ ಹಾಗೂ ವೇದಾಂತ ದೇಶಿಕರ್ ವಾರ್ಷಿಕ ಮಹೋತ್ಸವ, ತುಲಾ ಮಾಸ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡು ಮೂದ ಭಕ್ತರು ಬಂದು ಸಂಗಮಿಸುತ್ತಾರೆ.

ಶ್ರೀ ದೇಶಿಕ ಸಭಾ ಸಂಸ್ಥೆಯಿಂದ ನಿರ್ವಹಣೆ
ಪುರಾಣ ಪ್ರಸಿದ್ಧ ಈ ದೇವಾಲಯ ನಿರ್ಲಕ್ಷ್ಯಕೊಳಗಾಗಿ ಶಿಥಿಲಾವಸ್ಥೆ ತಲುಪಿತ್ತು. 1900ರ ಆಸುಪಾಸು ಕೆಲ ವರ್ಷ ಪೂಜಾ ಕೈಂಕರ್ಯಗಳು ನಡೆಯುತ್ತಿರಲಿಲ್ಲ. ನಂತರ 1994ರಲ್ಲಿ ಮೈಸೂರಿನ ಶ್ರೀ ಪರಕಾಲ ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ದೇವಾಲಯ ಅಭಿವೃದ್ಧಿ ಪ್ರಾರಂಭಗೊಂಡಿತು. ಇದೀಗ ಸತ್ಯಾಗಾಲಂ ಶ್ರೀ ದೇಶಿಕ ಸಭಾ ಸಂಸ್ಥೆ ದೇವಾಲಯದ ನಿರ್ವಹಣೆಯನ್ನು ಮಾಡುತ್ತಿದೆ. ದಾನಿಗಳ ನೆರವಿನಿಂದ ಸುಂದರ ದೇವಾಲಯವಾಗಿ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net