ದ್ವೇಷ ಸಾಧಿಸುವ ಪ್ರವೃತ್ತಿ ನಿಂತಿಲ್ಲ

26-KGL-2.,
Published on

ಕೊಳ್ಳೇಗಾಲ: ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದಿವೆ. ಆದರೂ ಪರಿಪೂರ್ಣವಾಗಿ ಸಹಬಾಳ್ವೆ, ಸಹೋದರತೆ ಭಾವನೆಯಲ್ಲಿ ಜೀವನ ನಡೆಸಲು ಸಾಧ್ಯವಾಗಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ವಿಷಾದಿಸಿದರು.

ಪಟ್ಟಣದ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಮನುಷ್ಯ ಮನುಷ್ಯನ ಮೇಲೆ ದ್ವೇಷ ಸಾಧಿಸುವ ಪ್ರವೃತ್ತಿ ನಿಂತಿಲ್ಲ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಇದು ನಾಚಿಕೆಯ ಸಂಗತಿಯಾಗಿದೆ ಎಂದರು.

ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭಾತೃತ್ವ ಸಂವಿಧಾನದ ಪ್ರಮುಖ ಆಶಯವಾಗಿದ್ದರೂ ಸಹ ಇಂತಹ ಕೃತ್ಯಗಳು ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತಿಲ್ಲ, ನೊಂದವರಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಭಾರತ ದೇಶದ ಸರ್ವೋಚ್ಛ ಕಾನೂನು. ಡಾ.ಅಂಬೇಡ್ಕರ್ ಅವರ ಶ್ರಮದಿಂದ ಇಂದು ಭಾರತ ಪ್ರಜೆಗಳಾದ ನಾವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದೇವೆ. ನಾವು ಸಂವಿಧಾನವನ್ನು ಗೌರವಿಸಬೇಕು. ಮೂಲಭೂತ ಕರ್ತವ್ಯಗಳನ್ನು ಪಾಲಿಸ ಬೇಕೆಂದು ತಿಳಿಸಿದರು.

ದೇಶವು ಬಡತನ, ಭ್ರಷ್ಟಾಚಾರ, ಕೋಮುವಾದ, ಅಸ್ಪಶ್ಯತೆ, ಭಯೋತ್ಪಾದನೆ ಎದುರಿಸುತ್ತಿದೆ. ಇದನ್ನು ಬಗೆಹರಿಸಲು ನಾವೆಲ್ಲರೂ ವಿಶಾಲವಾದ ಮನೋಭಾವನೆಯಿಂದ ಒಗ್ಗೂಡಬೇಕಿದೆ. ವಿದ್ಯಾರ್ಥಿಗಳು ನಾಗರಿಕ ಜವಾಬ್ದಾರಿಯನ್ನು ಹೊಂದಿ ಸಂವಿಧಾನಕ್ಕೆ ಗೌರವಿಸಬೇಕು. ಎಲ್ಲರೂ ಸೇರಿ ದೇಶದ ಭವಿಷ್ಯವನ್ನು ರೂಪಿಸೋಣ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ಧ್ವಜಾರೋಹಣ ನೆರವೇರಿಸಿದರು. ನಂತರ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಾಮರಾಜನಗರದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ದೇವರಾಜು ಮಾತನಾಡಿದರು. ತಹಸೀಲ್ದಾರ್ ಮಂಜುಳಾ, ಇಒ ಶ್ರೀನಿವಾಸ್, ಆರಕ್ಷಕ ಉಪಾಧೀಕ್ಷಕ ಜಿ.ಯು. ಸೋಮೇಗೌಡ, ಬಿಇಒ ಮಂಜುಳಾ, ನಗರಸಭೆ ಪೌರಯುಕ್ತ ರಮೇಶ್, ಬಿಆರ್‌ಸಿ ಮಹದೇವು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net