ಛಲವಾದಿ ಮಹಾಸಭಾ ಭವನಗಳು ಜಿಲ್ಲಾದ್ಯಂತ ನಿರ್ಮಾಣವಾಗಲಿ

25kglphoto-1...........
Published on

ಕೊಳ್ಳೇಗಾಲ: ಛಲವಾದಿ ಮಹಾಸಭಾ ಭವನಗಳು ಜಿಲ್ಲಾದ್ಯಂತ ನಿರ್ಮಾಣ ಆಗಬೇಕು. ಸಮುದಾಯದ ಜನರು ಸಂಘಟಿತರಾಗಬೇಕು ಎಂದು ರಾಜ್ಯ ಛಲವಾದಿ ಮಹಾಸಭಾ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಹೇಳಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಛಲವಾದಿ ಮಹಾಸಭಾ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಬಲ ಸಮುದಾಯಗಳ ಬೆಳವಣಿಗೆ ಆಗುತ್ತಲೇ ಇದೆ. ಸರ್ಕಾರಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಆದರೆ ಪರಿಶಿಷ್ಟ ಜಾತಿ ಜನರ ಅಭಿವೃದ್ಧಿಯಾಗುತ್ತಿಲ್ಲ. ಸರ್ಕಾರದ ಅಧೀನದಲ್ಲಿರುವ ಎಷ್ಟೋ ಸ್ವತ್ತು ಪ್ರಬಲ ಸಮುದಾಯಗಳ ಕೈಯಲ್ಲಿದೆ. ಆದರೆ ಎಸ್ಸಿ ಜನಾಂಗದ ಪರಿಸ್ಥಿತಿ ಚಿಂತಾಜನಕವಾಗಿದೆ. ಸಮುದಾಯದ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಮೇಲ್ವರ್ಗದ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಪ್ರಕರಣಗಳು ಇಂದಿಗೂ ಜೀವಂತವಾಗಿವೆ. ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯೇ ಇದಕ್ಕೆ ಮೂಲ ಕಾರಣ ಎಂದರು.

ರಾಜ್ಯದಲ್ಲಿ ಯಾವ ದಲಿತನೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ನಮಗೆ ಸಿಗಬೇಕಾದ ಸ್ಥಾನಮಾನಗಳು ಇನ್ನೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಛಲವಾದಿ ಮಹಾಸಭಾ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ. ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ನೌಕರರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. 2,100 ರೂ. ಶುಲ್ಕ ಕಟ್ಟುವ ಮೂಲಕ ಸದಸ್ಯತ್ವ ಪಡೆಯಬಹುದು ಎಂದರು. ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ರಮೇಶ್ ಮಾತನಾಡಿ, ಸಂಘಟಿತರಾದರೆ ನಮಗೆ ಕಾನೂನು ರೀತಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುತ್ತವೆ. ಧ್ವನಿ ಇಲ್ಲದ ನಮ್ಮ ಜನರ ಪರವಾಗಿ ಛಲವಾದಿ ಮಹಾಸಭಾ ನಿಲ್ಲುತ್ತದೆ ಎಂದರು.

ಪದಾಧಿಕಾರಿಗಳ ಆಯ್ಕೆ:
ತಾಲೂಕು ಛಲವಾದಿ ಮಹಾಸಭಾ ನೂತನ ಅಧ್ಯಕ್ಷರಾಗಿ ನಟರಾಜ್, ಗೌರವಾಧ್ಯಕ್ಷ-ಅಂಕಯ್ಯ, ಉಪಾಧ್ಯಕ್ಷ-ಅಶೋಕ್, ಪ್ರಧಾನ ಕಾರ್ಯದರ್ಶಿ-ಬಿ.ಶಾಂತರಾಜು, ಸಂಘಟನಾ ಕಾರ್ಯದರ್ಶಿ-ಲೋಕೇಶ್, ಖಂಜಾಚಿ-ಮುಕುಂದರಾಜು, ಸಹ ಕಾರ್ಯದರ್ಶಿಯಾಗಿ ಮರುಸಿದ್ದಯ್ಯ ಆಯ್ಕೆಯಾದರು.
ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಮಹದೇವ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಬಸವರಾಜು, ಖಂಜಾಚಿ ಜವರಪ್ಪ, ಉಪಾಧ್ಯಕ್ಷ ಮಂಟೇಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net