

ಕೊಳ್ಳೇಗಾಲ: ಕೆಲಸದ ಒತ್ತಡದಲ್ಲಿ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯಬಾರದು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲೂಕಿನ ಚಿಕ್ಕಲೂರಿನ ಹೊಸ ಮಠದಲ್ಲಿ ಭಾನುವಾರ ಜೆಡಿಎಸ್ ವತಿಯಿಂದ ಕೆ.ಎಂ. ದೊಡ್ಡಿಯ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರಷ್ಟೇ ಜನರು ಏನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು. ಕೆಲಸದ ಒತ್ತಡದ ನಡುವೆ ಆರೋಗ್ಯ ಮರೆಯುವ ಜನರಿಗಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಇಂತಹ ಶಿಬಿರಗಳು ಹೆಚ್ಚಾದರೆ ಜನರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ನೀರಿಕ್ಷೆಯಂತೆ ಆರೋಗ್ಯ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಸಂತಸ ಮೂಡಿಸಿದೆ. ಹನೂರು ವಿಧಾನಸಭಾ ಕ್ಷೇತ್ರ ತುಂಬಾ ವಿಶಾಲವಾಗಿದ್ದು ಕ್ಷೇತ್ರದಲ್ಲಿ ಆರೋಗ್ಯ ಸೇವೆ ಪಡೆಯಲು ಜನರು ತೊಂದರೆ ಅನುಭವಿಸುವಂತಾಗಿದೆ. ರೋಗ ಹರಡುವ ಮುನ್ನ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಶಿಬಿರ ಸಹಕಾರಿಯಾಗಿದೆ ಎಂದರು. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ಶಿವಕುಮಾರ್, ಸುರೇಶ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಜೆಡಿಎಸ್ ಮುಖಂಡರಾದ ಶಿವಮೂರ್ತಿ, ಗೋಪಾಲ ನಾಯಕ, ನಿಂಗಶೆಟ್ಟಿ ಇತರರು ಇದ್ದರು.