ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ

28-kgl-5,
Published on

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ 4ನೇ ದಿನವಾದ ಭಾನುವಾರ ಗಜವಾಹನೋತ್ಸವ (ಪಂಕ್ತಿ ಸೇವೆ)ದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಭಕ್ತರು ಸಾಂಪ್ರದಾಯಿಕವಾಗಿ ಪಂಕ್ತಿ ಸೇವೆಯನ್ನು ನೆರವೇರಿಸಿದರು.

ಶ್ರೀ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಹೈಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನಿಂದ ಪ್ರಾಣಿ ಬಲಿ ಆಗದಂತೆ ಸಕಲ ವ್ಯವಸ್ಥೆ ಮಾಡಿತ್ತು. ಪೊಲೀಸ್ ಇಲಾಖೆ ಶ್ರೀ ಕ್ಷೇತ್ರದ ಸುತ್ತಲೂ ಐದು ಕಡೆ ಚೆಕ್‌ಪೋಸ್ಟ್ ತೆರೆದು ಕ್ಷೇತ್ರಕ್ಕೆ ಕುರಿ, ಕೋಳಿ ತರದಂತೆ ನಿಗಾ ವಹಿಸಿದ್ದರು. 700ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿತ್ತು. ಹೀಗಿದ್ದರೂ, ಭಕ್ತರು ಕ್ಷೇತ್ರದ ಹೊರಭಾಗದಲ್ಲಿರುವ ಜಮೀನು, ತೋಟದ ಮನೆಗಳಲ್ಲಿ ಕುರಿ, ಕೋಳಿಯ ಮಾಂಸದೂಟ ತಯಾರಿಸಿ ಸಂಪ್ರದಾಯ ಮೆರೆದರು. ಬಿಗಿ ಪೊಲೀಸ್ ವ್ಯವಸ್ಥೆಯಿದ್ದ ಕಾರಣ ಜಮೀನು, ಕಾಲುದಾರಿಗಳ ಮೂಲಕ ಹೊರಗಿನಿಂದ ಮಾಂಸ ಖರೀದಿ ಮಾಡಿ, ತಮ್ಮ ಬಿಡಾರಗಳಲ್ಲಿ ಅಡುಗೆ ಸಿದ್ಧಪಡಿಸಿ ಕಂಡಾಯ ಹಾಗೂ ದೇವರ ಗುಡ್ಡರ ಬೆತ್ತಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಇಟ್ಟು ನಂತರ ಸಹಪಂಕ್ತಿ ಭೋಜನ ನಡೆಸಿದರು.

ಚಾಮರಾಜನಗರ ಜಿಲ್ಲೆ ಸೇರಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ನಂಜನಗೂಡು, ಮೈಸೂರು, ತುಮಕೂರು, ಮದ್ದೂರು, ಕನಕಪುರ, ಮಳವಳ್ಳಿ ಇನ್ನಿತರ ಕಡೆಗಳಿಂದ ಬಂದ ಲಕ್ಷಾಂತರ ಭಕ್ತರು ದೇವರಿಗೆ ಭಕ್ತಿ-ಭಾವದಿಂದ ಧೂಪ, ಸಾಂಬ್ರಾಣಿ, ಕರ್ಪೂರ, ಹಣ್ಣು-ಕಾಯಿ ಪೂಜೆ ಸಲ್ಲಿಸಿ, ಶ್ರೀ ಸಿದ್ದಪ್ಪಾಜಿ ಗದ್ದುಗೆ ದರ್ಶನ ಪಡೆದರು.

ಭೇದ-ಭಾವ ಹೋಗಲಾಡಿಸುವ ಪಂಕ್ತಿಸೇವೆ:
ಶ್ರೀ ಮಂಟೇಸ್ವಾಮಿ ಪರಂಪರೆ ಜಾತ್ಯತೀತ ನೆಲೆಗಟ್ಟಿನಿಂದ ಕೂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ಪರಂಪರೆಗೆ ನಡೆದುಕೊಳ್ಳುವ ಭಕ್ತರಿದ್ದಾರೆ. ಕುಲೇಳು-ಅದಿನೆಟ್ಟು ಜಾತಿಗಳು ಈ ಒಕ್ಕಲಿನ ಪದ್ಧತಿಯ ಆಚರಣೆಯನ್ನು ಮಾಡುತ್ತದೆ ಎಂಬುದು ಇತಿಹಾಸ. ಪ್ರತಿ ವರ್ಷದ ಐದು ದಿನ ಸಿದ್ದಪ್ಪಾಜಿ ಜಾತ್ರೆಯಲ್ಲಿ 4ನೇ ದಿನದ ಪಂಕ್ತಿ ಸೇವೆ ಮಹತ್ವವಾದದ್ದು, 5 ದಿನದ ಜಾತ್ರೆಯಲ್ಲಿ ಇಂದು ಭಕ್ತರ ಸಂಖ್ಯೆ ದುಪ್ಪಟ್ಟು ಆಗುವುದು ಈ ದಿನದ ವಿಶೇಷ. ಕೆಲವು ವರ್ಷ ಕೋವಿಡ್‌ನಿಂದಾಗಿ ಜಾತ್ರೆ ಕಳೆಗುಂದಿತ್ತು. ಆದರೆ, ಈ ಬಾರಿ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಮೀರಿದ್ದ ಜನಸ್ತೋಮ ಜಾತ್ರೆಯಲ್ಲಿ ನೆರೆದಿತ್ತು. ಭಕ್ತರು ತಮ್ಮ ಆಹಾರ ಪದ್ಧತಿಯಂತೆ ಸಸ್ಯಾಹಾರ ಹಾಗೂ ಮಾಂಸಾಹಾರವನ್ನು ತಯಾರಿಸಿ ನೈವೇದ್ಯಯಿಟ್ಟು ಸೇವಿಸಿದರು. ಜಾತಿ-ತಾರತಮ್ಯವಿಲ್ಲದೆ ಹಸಿದವರಿಗೆ ಪ್ರಸಾದ ನೀಡುತ್ತಿದ್ದ ದೃಶ್ಯ ಕಂಡಬಂತು. ಒಟ್ಟಾರೆ ಕಳೆದ ಆರು ವರ್ಷಗಳ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಜನರು ಜಾತ್ರೆಗೆ ಆಗಮಿಸಿದ್ದಾರೆ.

ಭಯದ ವಾತಾವರಣ:
ಹೈಕೋರ್ಟ್ ಆದೇಶದಂತೆ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಇಡೀ ಜಾತ್ರೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಕುರಿ, ಕೋಳಿ ತಂದರೆ ಪೊಲೀಸರು ವಶಕ್ಕೆ ಪಡೆಯುತ್ತಾರೆ ಎಂಬ ಭಯ ಭಕ್ತರನ್ನು ಆವರಿಸಿತ್ತು. ಆತಂಕದಲ್ಲಿಯೇ ಭಕ್ತರು ಪಂಕ್ತಿ ಸೇವೆ ಮಾಡಿದರು. ಸಣ್ಣ-ಪುಟ್ಟ ಬಿಡಾರಗಳಲ್ಲಿ ಸಹಪಂಕ್ತಿ ಆಚರಣೆ ಮಾಡಲಾಯಿತು. ಆದರೆ ಬಹಿರಂಗವಾಗಿ ಬಾಡೂಟದ ಅಬ್ಬರ ಕಂಡುಬರಲಿಲ್ಲ.

ಭಂಗಿ ಸೊಪ್ಪಿನ ಘಮಲಿಲ್ಲ:
ಪಂಕ್ತಿಸೇವೆಯಲ್ಲಿ ಮಾಡುವ ಬಾಡೂಟಕ್ಕೆ ಭಂಗಿ ಸೊಪ್ಪು ಮಿಶ್ರಣ ಮಾಡಿ, ದೇವರಿಗೆ ಎಡೆ ಹಾಕುವುದು ಪ್ರತೀತಿ. ಆದರೆ, ಜಿಲ್ಲಾಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಯಿಂದ ಎಲ್ಲೂ ಭಂಗಿ ಸೊಪ್ಪಿನ ಘಮಲು ಬರಲಿಲ್ಲ. 5 ದಿನಗಳ ಜಾತ್ರೆಯಲ್ಲಿ ಪಂಕ್ತಿಸೇವೆ ದಿನ ಜಾತ್ರೆಯಲ್ಲಿ ವ್ಯಾಪಾರ- ವಹಿವಾಟು ಜೋರಾಗಿತ್ತು. ಇದು ವ್ಯಾಪಾರಸ್ಥರ ಮೊಗದಲ್ಲಿ ಹರ್ಷ ಮೂಡಿಸಿತು.

ಸ್ವಚ್ಛತೆ ಮರಿಚೀಕೆ:
ಜಾತ್ರೆ ಸಂಬಂಧ ಹಲವು ಶೌಚಗೃಹಗಳನ್ನು ನಿರ್ಮಿಸಲಾಗಿತ್ತು. ಆದರೂ ಕೆಲವು ಶೌಚಗೃಹಗಳಿಗೆ ನೀರಿನ ವ್ಯವಸ್ಥೆಯಿಲ್ಲದ್ದರಿಂದ ಜನರು ಬಹಿರ್ದೆಸೆಗೆ ತೆರಳಬೇಕಾಯಿತು. ಸ್ನಾನಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಭಕ್ತರು ತೊಂಬೆಗಳ ಬಳಿ ಸ್ನಾನ ಮಾಡಬೇಕಾಯಿತು. ಮಹಿಳಾ ಭಕ್ತರಿಗೆ ಅಗತ್ಯವಿರುವ ಸೌಕರ್ಯಗಳು ಸಮರ್ಪಕವಾಗಿರಲಿಲ್ಲ. ದೇವಾಲಯ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿತ್ತು. ರಾಶಿ ರಾಶಿ ಕಸ ಕಂಡು ಬಂದಿತು.

ಶಿಶು ಆರೈಕೆಗೆ ಕೊಠಡಿಯಿಲ್ಲ:
ಜಾತ್ರೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಆದರೆ ಮಹಿಳೆಯರಿಗೆ ಅಗತ್ಯವಿರುವ ಸಮರ್ಪಕ ಸೌಕರ್ಯವಿಲ್ಲ. ತಾಯಂದಿರು ಮಕ್ಕಳಿಗೆ ಹಾಲುಣಿಸಲು ಶಿಶು ಆರೈಕೆ ಕೊಠಡಿಯಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಜಾತ್ರೆಯಲ್ಲಿ ಮಹಿಳೆಯೊಬ್ಬರು ತನ್ನ ಮಗುವಿಗೆ ಹಾಲುಣಿಸಲು ಪೊಲೀಸ್ ಉಪಠಾಣೆಯನ್ನು ಆಶ್ರಯಿಸಿದ ದೃಶ್ಯ ಕಂಡುಬಂತು.

ಈ ಜಾತ್ರೆ 2-3 ದಶಕದ್ದಲ್ಲ. ನಮ್ಮ ಪೂರ್ವಿಕರು ಆಚರಣೆ ಮಾಡುತ್ತಿದ್ದ ಜಾತ್ರೆ, ನಾವು ಕಾನೂನಿಗೆ ಬೆಲೆ ಕೊಡುತ್ತೇವೆ. ಆದರೆ ಪ್ರಾಣಿ ಬಲಿ ನಿಷೇಧದ ಹೆಸರಿನಲ್ಲಿ ಆಹಾರ ಹಕ್ಕನ್ನು ಕಸಿಯುವುದು ಸರಿಯಲ್ಲ. ಕುರಿ, ಕೋಳಿ ಮಾಂಸ ಅಂಗಡಿಗಳಿಗಿಲ್ಲದ ನಿಷೇಧ ಜಾತ್ರೆಯಲ್ಲಿ ಭೇದ-ಭಾವ ಮರೆತು ಸಹಪಂಕ್ತಿ ಭೋಜನ ಮಾಡುವವರ ಮೇಲೆ ಏಕೆ.ರಾಚಣ್ಣ, ಗುಂಡ್ಲುಪೇಟೆ, ಭಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net