

ಕೊಳ್ಳೇಗಾಲ: ಕಾವೇರಿ ಪ್ರವಾಹದಿಂದ ನದಿ ಪಾತ್ರದ ಗ್ರಾಮಗಳಿಗೆ ನೀರಿನ ದಿಗ್ಬಂಧನವಾಗಿದ್ದು ಜನ-ಜಾನುವಾರುಗಳ ಬದುಕು ಅಸ್ತವ್ಯಸ್ತವಾಗಿದೆ. ತಾಲೂಕಿನ ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರವನ್ನು ಪ್ರವಾಹ ಸುತ್ತುವರಿದಿದೆ. ಮುಳ್ಳೂರು ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಕಳೆದ 3 ದಿನಗಳಿಂದ ಅಧಿಕ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿಬಿಡಲಾಗಿದೆ. ಗುರುವಾರ 2.20 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿರುವ ಪರಿಣಾಮ ಕಾವೇರಿಯಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನೀರು ಆವರಿಸಿದ ಪರಿಣಾಮ ದಾಸನಪುರ, ಹಳೇ ಹಂಪಾಪುರ, ಹಳೇ ಅಣಗಳ್ಳಿ ದ್ವೀಪ ಗ್ರಾಮಗಳಾಗಿ ಮಾರ್ಪಟ್ಟಿವೆ.
ಕಾಳಜಿ ಕೇಂದ್ರಕ್ಕೆ ಸ್ಥಳಾಂತರ: ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಂಗಳವಾರ ಸಂಜೆ ನದಿ ಪಾತ್ರದ ಗ್ರಾಮಗಳಿಗೆ ದೌಡಾಯಿಸಿ ಜನರಿಗೆ ಗ್ರಾಮಗಳನ್ನು ತೊರೆಯುವಂತೆ ಮನವಿ ಮಾಡಿತ್ತು. ಆದರೆ, ಜನರು ಅಧಿಕಾರಿಗಳ ಮನವಿಯನ್ನು ಲೆಕ್ಕಿಸದೆ ಸತಾಯಿಸಿದ್ದರು, ಅಂದು 20 ಜನರನ್ನು ಮಾತ್ರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಾಧ್ಯವಾಗಿತ್ತು. ಬುಧವಾರ ಸಂಜೆಯವರೆಗೆ 180 ಜನರನ್ನು ಕರೆತರಲಾಗಿತ್ತು. ಆದರೆ, ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವುದಿಂದ ಪ್ರವಾಹ ತೀವ್ರತೆ ಹೆಚ್ಚಾಗಲಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಬಂದ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ದಾಸನಪುರ, ಹಳೇಅಣಗಳ್ಳಿ ಗ್ರಾಮದ ಜನರನ್ನು ಕಾಳಜಿ ಕೇಂದ್ರಕ್ಕೆ ಮನವೊಲಿಸಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮುಂಜಾನೆ 4 ಗಂಟೆಯಲ್ಲಿ ಕಾವೇರಿ ಪ್ರವಾಹ ಹೆಚ್ಚಾಗಿ ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ ಗ್ರಾಮವನ್ನು ನೀರು ಸುತ್ತುವರಿದಿದೆ.
ಊರಿಂದ ಹೊರಗೆ ಜಾನುವಾರುಗಳ ಸ್ಥಳಾಂತರ: ಗ್ರಾಮವನ್ನೇ ಪ್ರವಾಹ ಸುತ್ತುವರಿದ ಕಾರಣ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಲು ಊರಿಂದ ಹೊರಗೆ ಸ್ಥಳಾಂತರ ಮಾಡಿದ್ದಾರೆ. ರಸ್ತೆಯಲ್ಲಿ ಕಟ್ಟಿ ಹಾಕಿ ರೈತರು ಮೇವು ನೀಡುತ್ತಿದ್ದಾರೆ.
ಮೇವಿನ ಕೊರತೆ: ಈಗಾಗಲೇ ಕೊಳ್ಳೇಗಾಲ ಪಟ್ಟಣದ ಕೃಷಿ ಮಾರುಕಟ್ಟೆಗೆ ಹಾಗೂ ಉಪ್ಪಾರ ಮೋಳೆ ಸಮೀಪದ ಹಣ್ಣು ಮಾಗಿಸುವ ಘಟಕಕ್ಕೆ ಮೇಕೆ, ಕುರಿ, ದನ, ಕರುಗಳನ್ನು ಪಶು ಇಲಾಖೆ ಅಧಿಕಾರಿಗಳು ಸ್ಥಳಾಂತರ ಮಾಡಿ ಪಾಲನೆ ಮಾಡುತ್ತಿದ್ದಾರೆ. ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿಯ ಕೆಲವು ರೈತರು ಕೃಷಿ ಮಾರುಕಟ್ಟೆಯಲ್ಲಿರುವ ಕಾಳಜಿ ಕೇಂದ್ರ ದೂರುವಾದ ಕಾರಣ ಊರಿನ ಹೊರಗೆ ಕಟ್ಟಿಕೊಂಡು ಮೇವು ನೀಡುತ್ತಿದ್ದಾರೆ.
ಇತ್ತ ಪಶು ಇಲಾಖೆ ಕಡೆಯಿಂದ ಮೇವು ಒದಗಿಸಲಾಗಿದೆ. ಆದರೆ, ರೈತರು ದನ-ಕರುಗಳಿಗೆ ಮೇವು ಸಾಕಾಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ದನ, ಕರುಗಳ ಕಾಯ್ದುಕೊಂಡ ನಮಗೂ ಊಟವಿಲ್ಲ ಎಂದು ಹಳೇಅಣಗಳ್ಳಿ ರೈತ ಗಿರೀಶ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳ ಬಳಿ ಕಷ್ಟ ಹೇಳಿಕೊಂಡರು. ಸ್ಥಳದಲ್ಲಿದ್ದ ತಹಸೀಲ್ದಾರ್ ಮಂಜುಳಾ ಕೂಡಲೇ ಊಟದ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಸಮರ್ಪಕ ಮೇವಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿ ತಿಂಡಿ, ಊಟ, ಹೊದಿಕೆ, ಟವಲ್ ಇನ್ನಿತರ ಉಪಚಾರ ಮಾಡಲಾಗುತ್ತಿದೆ. ಮುಳ್ಳೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆಗೆದು 150ಕ್ಕೂ ಹೆಚ್ಚು ಜನರಿಗೆ ವಸತಿ, ಹೊದಿಕೆ, ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೆ, ಹಳೇ ಹಂಪಾಪುರ ಗ್ರಾಮದೊಳಗೆ ನೀರು ನುಗ್ಗದ ಪರಿಣಾಮ ಜನರು ಮನೆಯಲ್ಲೇ ವಾಸವಿದ್ದಾರೆ. ಗ್ರಾಮದಲ್ಲಿ ಬಹುತೇಕರು ಬಡವರಿದ್ದು ಊಟಕ್ಕೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ನಮ್ಮ ಗ್ರಾಮದಲ್ಲೂ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಮೂಕ ಪ್ರಾಣಿಗಳ ರೋದನೆ:
ಸತ್ತೇಗಾಲ ಹ್ಯಾಡ್‌ಪೋಸ್ಟ್ ಸಮೀಪ ಹಾದು ಹೋಗಿರುವ ಬೈಪಾಸ್ ರಸ್ತೆ ನೂತನ ಸೇತುವೆ ಬಳಿ ಮೇವು ಮೇಯಲು ತೆರಳಿದ್ದ ದನ ಕರುಗಳನ್ನು ಪ್ರವಾಹದಲ್ಲಿ ಸಿಲುಕಿದ್ದವು. ನೀರು ಸುತ್ತಲೂ ಸುತ್ತುವರಿದ ಪರಿಣಾಮ ಹೊರಬರಲು ಸಾಧ್ಯವಾಗದೆ ಮೂಕ ಪ್ರಾಣಿಗಳು ಪರಿತಪಿಸಬೇಕಾಯಿತು. ತಾಲೂಕಿನ ಪಶು ಸಂಗೋಪನ ಇಲಾಖೆ ಆಡಳಿತ ವ್ಯೆದ್ಯಾಧಿಕಾರಿ ಮುತ್ತರಾಜ್ ಅವರ ಗಮನಕ್ಕೆ ತಂದರೂ ಅವರು, ಇದನ್ನು ಪಶು ವ್ಯೆದ್ದಾಧಿಕಾರಿ ಶಿವಕುಮಾರ್ ಅವರಿಗೆ ತಿಳಿಸಿ ಎಂದು ಜಾರಿಕೊಂಡರು. ಈ ಬಗ್ಗೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಸಂಜೆ 4 ಗಂಟೆಯಾದರೂ ಯಾವುದೇ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಪಶು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ನಂತರ, ಈ ವಿಚಾರವಾಗಿ ವಿಜಯವಾಣಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಗಮನ ಸೆಳೆದಾಗ ತಕ್ಷಣ ಸ್ಪದಿಸಿದ ಡಿಸಿ, ಈ ಬಗ್ಗೆ ಗಮನಹರಿಸುವಂತೆ ಎಸಿ ಮಹೇಶ್, ತಹಸೀಲ್ದಾರ್ ಮಂಜುಳಾ ಅವರಿಗೆ ಸೂಚನೆ ನೀಡಿದರು. ನಂತರ ಸ್ಥಳಕ್ಕೆ ತೆರಳಿದ ಪಶು ವ್ಯೆದ್ಯಾಧಿಕಾರಿ ಶಿವಕುಮಾರ್ ನೀರಿನಲ್ಲಿ ಸುಮಾರು 30 ದನ, ಕರುಗಳು ಸಿಲುಕಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು.
ಸತ್ತೇಗಾಲ ಬೈಪಾಸ್ ಸೇತುವೆ ಸಮೀಪ ಪ್ರವಾಹದಲ್ಲಿ ಸಿಲುಕಿರುವ ದನ, ಕರುಗಳು ಎತ್ತರ ಸ್ಥಳದಲ್ಲಿರುವ ಮಾಹಿತಿ ಅಗ್ನಿಶಾಮಕ ದಳದ ಅಧಿಕಾರಿಗಳಿಂದ ತಿಳಿದುಬಂದಿದೆ. ಆದ್ದರಿಂದ ಜಾನುವಾರುಗಳಿಗೆ ಸದ್ಯಕ್ಕೆ ಆಪಾಯವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನೀರು ರಭಸವಾಗಿ ಹರಿಯುತ್ತಿರುವುದರಿಂದ ಜಾನುವಾರುಗಳ ರಕ್ಷಣೆಗೆ ಹೋದವರೆ ಕೊಚ್ಚಿ ಹೋಗಬಹುದು. ಶುಕ್ರವಾರ ನೀರು ಬಿಡುವ ಪ್ರಮಾಣ ತಗ್ಗಲಿದ್ದು, ಆ ವೇಳೆ ರಕ್ಷಣೆ ಕಾರ್ಯ ಮಾಡಲಾಗುತ್ತದೆ. ಅಲ್ಲಿಯವರೆಗೂ ಜಾನುವಾರುಗಳ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ