'ಅರ್ಧಗಂಟೆಯಲ್ಲಿ ಮೂರು ಬಾರಿ ಕರೆ ಮಾಡಿದ್ರು, ಶವ ನೋಡಲು 3ಗಂಟೆ ಸತಾಯಿಸಿದ್ರು': ಕೋಲ್ಕತ್ತಾ ಟ್ರೈನಿ ವೈದ್ಯೆ ತಾಯಿ ಗಂಭೀರ ಆರೋಪ

medical
Published on

ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಘಟನೆ ನಡೆದು 21 ದಿನಗಳಾಗಿದ್ದು ಆಕೆಯ ಸಾವಿನ ಕುರಿತು ದೇಶದ ಹಲವೆಡೆ ಇನ್ನೂ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಆಕೆ ಸಾವಿಗೆ ಸಂಬಂಧಿಸಿದಂತೆ ಹಲವು ಭಯಾನಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಮಗಳ ಸಾವಿನ ಬಗ್ಗೆ ಆಸ್ಪತ್ರೆ ಸಿಬ್ಬಂದಿ ನಡೆದುಕೊಂಡ ರೀತಿ ಬಗ್ಗೆ ಮೃತರ ಪೋಷಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಆಗಸ್ಟ್ 9 ರಂದು ಬೆಳಗ್ಗೆ ಕೇವಲ ಅರ್ಧ ಗಂಟೆಯಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಮೂರು ಫೋನ್ ಕರೆಗಳು ಬಂದವು. ಮೊದಲ ಫೋನ್ ಕರೆಯಲ್ಲಿ ನಿಮ್ಮ ಮಗಳ ಆರೋಗ್ಯ ಸರಿಯಿಲ್ಲ, ಕೂಡಲೇ ಆಸ್ಪತ್ರೆಗೆ ಬರುವಂತೆ ಹೇಳಿದರು. ಮಗಳಿಗೆ ಏನಾಗಿದೆ ಎಂದು ಅವರನ್ನು ಕೇಳಿದಾಗ ನಾವು ವೈದ್ಯರಲ್ಲ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದರು ಎಂದು ಹೇಳಿದರು.

ಅದಾದ ಬಳಿಕ ಮತ್ತೊಂದು ಫೋನ್ ಕರೆ ಬಂದಿದ್ದು, ಮಗಳ ಆರೋಗ್ಯ ಹೇಗಿದೆ ಎಂದು ಕೇಳುವ ಮುನ್ನವೇ ಮೊದಲು ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಬರುವಂತೆ ಸೂಚಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಫೋನ್ ಕರೆ ಬಂತು, ಆಗ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ ಎಂದು ಹೇಳಿದರು. ಘಟನೆಯ ಹಿಂದಿನ ದಿನ ಅಂದರೆ ಆ. 8ರಂದು ರಾತ್ರಿ 11.30ಕ್ಕೆ ಮಗಳೊಂದಿಗೆ ಕಡೇ ಬಾರಿ ಮಾತನಾಡಿದೆವು ಎಂದು ಮೃತ ಸಂತ್ರಸ್ತೆ ತಾಯಿ ಹೇಳಿದರು.

ವೈದ್ಯೆ ಹತ್ಯೆ ನಂತರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಸಿಬ್ಬಂದಿಯ ವರ್ತನೆಯ ವಿರುದ್ಧ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ಮಗಳು ಸತ್ತ ತಕ್ಷಣ ತಮಗೆ ಮಾಹಿತಿ ನೀಡಿಲ್ಲ, ಮಗಳ ಮೃತದೇಹವನ್ನು ತಕ್ಷಣ ನೋಡುವ ಅವಕಾಶವನ್ನೂ ನೀಡಿಲ್ಲ. 3 ಗಂಟೆ ಕಾದ ನಂತರ ಶವ ನೋಡಲು ಅವಕಾಶ ನೀಡಲಾಯಿತು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net