

ಎಂಕೆ ಸ್ಟಾಲಿನ್ ಸೋಲಿಗೆ ಕಾರಣರಾಗಿದ್ದ ಶಾಸಕ ವಿಎಸ್ ಬಾಬು ನಿಧನ
ಹೃದಯಾಘಾತದಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದ ವಿಎಸ್ ಬಾಬು
ಸೆ.9ರಿಂದ ಉಸಿರಾಟದ ಸಮಸ್ಯೆಯಿಂದ ಶಾಸಕ ವಿಎಸ್ ಬಾಬು ಬಳಲುತ್ತಿದ್ದರು.
2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ, ಮಾಜಿ ಸಿಎಂ ಎಂಕೆ ಸ್ಟಾಲಿನ್ ಸೋಲಿಗೆ ಕಾರಣರಾಗಿದ್ದ,ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ವಿ. ಸುಂದರಂಪಿಳ್ಳೈ ಬಾಬು (75) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಾಸಕ ವಿಎಸ್ ಬಾಬು ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಅವರನ್ನು ಸೆ.9ರಂದು ಆಸ್ಪತ್ರಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ನ.19ರಂದು ಮಧ್ಯಾಹ್ನ 2;24ಕ್ಕೆ ಚೆನ್ನೈನ ಎಂಜಿಎಂ ಹೆಲ್ ಕೇರ್ ಸೆಂಟರ್ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಾಸಕ ವಿಎಸ್ ಬಾಬು ಅವರ ನಿಧನಕ್ಕೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಟಿವಿಕೆ ನಾಯಕರು ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಆಸ್ಪತ್ರೆಯ ಹೇಳಿಕೆಯ ಪ್ರಕಾರ, ಬಾಬು ಅವರಿಗೆ ಮಧ್ಯಾಹ್ನ 2.14 ಕ್ಕೆ ಹೃದಯಾಘಾತವಾಯಿತು ಮತ್ತು 2.24 ಕ್ಕೆ ನಿಧನರಾದರು ಎಂದು ಘೋಷಿಸಲಾಯಿತು.
ವಿಎಸ್ ಬಾಬು ಅವರು 2026ರ ತಮಿಳುನಾಡು ವಿದಾನಸಭೆ ಚುನಾವಣೆಯಲ್ಲಿ ಸ್ಟಾಲಿನ್ ಅವರ ವಿರುದ್ಧ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಮೂಲಕ ಭಾರಿ ಸುದ್ದಿಯಲ್ಲಿದ್ದರು. 2011ರಿಂದ ಸತತವಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದ ಎಂಕೆ ಸ್ಟಾಲಿನ್ ಅವರಿಗೆ 2026ರ ಎಲೆಕ್ಷನ್ನಲ್ಲಿ ಕಂಡ ಸೋಲು ಭಾರಿ ಅಘಾತವನ್ನುಂಟು ಮಾಡಿತ್ತು. 8,795 ಮತಗಳ ಅಂತರದಿಂದ ಸ್ಟಾಲಿನ್ ಅವರನ್ನು ಸೋಲಿಸಿ..ಐತಿಹಾಸಿಕ ಗೆಲುವನ್ನು ವಿ ಎಸ್ ಬಾಬು ಕಂಡುಕೊಂಡರು.
ಪುರಸೈ ಬಾಬು ಎಂದೇ ಫೇಮಸ್ ಆಗಿರುವ ಇವರು ಡಿಎಂಕೆಯಿಂದ ಟಿವಿಕೆಗೆ ಪಕ್ಷಾಂತರಗೊಂಡಿದ್ದರು. 2006ರ ಪುರಸವಾಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು.2016ರಲ್ಲಿ ಎಐಎಡಿಎಂಕೆ ಸೇರಿದರು. 2026ರಲ್ಲಿ ಟಿವಿಕೆಗೆ ಸೇರಿದ್ದರು, (ಏಜೆನ್ಸೀಸ್).