ಉದಯನಿಧಿ ಬಂಧನ ವಿಚಾರ; ರೀಲ್ಸ್ ಕ್ರಿಯೇಟರ್, ನಕಲಿ ಸಿಎಂ ಎಂದು ಸಿಜೋಸೆಫ್ ವಿಜಯ್ ವಿರುದ್ಧ ಮಾಜಿ ಸಿಎಂ ಎಂಕೆ ಸ್ಟಾಲಿನ್ ವಾಗ್ದಾಳಿ..Udhayanidhi

 Stalin big attack on Vijay over Udhayanidhis arrest
Stalin big attack on Vijay over Udhayanidhis arrest
Published on

ಪ್ರಮುಖ ಮುಖ್ಯಾಂಶಗಳು

  • ರೀಲ್ಸ್ ಕ್ರಿಯೇಟರ್ ಮತ್ತು ನಕಲಿ ಸಿಎಂ ಎಂದು ಸಿ.ಜೋಸೆಫ್ ವಿಜಯ್ ವಿರುದ್ಧ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ವಾಗ್ದಾಳಿ.
  • ರಾಜ್ಯ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು ವಿಧಾನಸಭೆಯಿಂದ ಹೊರಗಿಡುವ ಪ್ರಯತ್ನವಾಗಿದೆ.
  • ಅಹಂಕಾರವು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ನಿರಂತರ ಅಹಂಕಾರವು ಅದನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದ ಸ್ಟಾಲಿನ್
ಚೆನ್ನೈ: ನಟಿ ತ್ರಿಷಾ ಉದ್ದೇಶಿಸಿ ಅಸಭ್ಯ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಂಧನ ಮತ್ತು ಕೋರ್ಟ್ ಜಾಮೀನು ಬಳಿಕ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ರೀಲ್ಸ್ ಕ್ರಿಯೇಟರ್ ಮತ್ತು ನಕಲಿ ಸಿಎಂ ಎಂದು ಸಿ.ಜೋಸೆಫ್ ವಿಜಯ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿ ಮಾತನಾಡಿರುವ ಅವರು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಆಡಳಿತರೂಢ ಟಿವಿಕೆ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದ ಹಿನ್ನೆಲೆ ಗಮನವನ್ನು ಬೇರೆಡೆಗೆ ಸೆಳೆಯಲು ಉದಯನಿಧಿ ಅವರನ್ನು ಬಂಧಿಸಿದೆ ಎಂದು ಕಿಡಿಕಾರಿದ್ದಾರೆ.

ಸ್ಟಾಲಿನ್​ ಏನಂದ್ರು?

ರಾಜ್ಯ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು ವಿರೋಧ ಪಕ್ಷದ ನಾಯಕನನ್ನು ಬಂಧಿಸಿರುವುದು ವಿಧಾನಸಭೆಯಿಂದ ಹೊರಗಿಡುವ ಪ್ರಯತ್ನವಾಗಿದೆ ಎಂದ ಅವರು, ಒಬ್ಬ ಅಸಮರ್ಥ ನಕಲಿ ಮುಖ್ಯಮಂತ್ರಿ ಕಾವೇರಿ ನೀರನ್ನು ತರಲು ಸಾಧ್ಯವಿಲ್ಲ, ಮೇಕೆದಾಟು ಅಣೆಕಟ್ಟನ್ನು ನಿಲ್ಲಿಸಲು ಮಾತನಾಡಲು ಸಹ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಸಂಕಷ್ಟದಲ್ಲಿದ್ದಾಗ, ಟಿವಿಕೆ ಸರ್ಕಾರವು ವಿಜಯ್ ಅವರ ಚಿತ್ರ ಜನ ನಾಯಗನ್​ಗೆ ಸಂಬಂಧಿಸಿದ ಟೀಕೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ತಮಿಳುನಾಡಿನಲ್ಲಿ ಜೋಕರ್ ಸಚಿವ ಸಂಪುಟ ಅಧಿಕಾರಕ್ಕೆ ಬಂದಿದೆ ಎಂದು ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.

ಅಹಂಕಾರವು ವಿನಾಶಕ್ಕೆ ದಾರಿ

ಅಹಂಕಾರವು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ನಿರಂತರ ಅಹಂಕಾರವು ಅದನ್ನು ಮತ್ತಷ್ಟು ವೇಗಗೊಳಿಸುತ್ತದೆ. ಸಿ ಜೋಸೆಫ್​ ವಿಜಯ್​ ಅವರು ಒಬ್ಬ ಅಸಮರ್ಥ ಸಿಎಂ ಹಾಗೂ ಡಮ್ಮಿ ಎಂದು ಮಗ ಉದಯನಿಧಿ ಸ್ಟಾಲಿನ್​ ಬಂಧನದ ನಂತರ ತಮಿಳುನಾಡು ಹಾಲಿ ಸಿಎಂ ಸಿ ಜೋಸೆಫ್​ ವಿಜಯ್​ ಅವರಿಗೆ ಮಾಜಿ ಸಿಎಂ ಎಂಕೆ ಸ್ಟಾಲಿನ್​ ಲೇವಡಿ ಮಾಡಿದರು.

ಏನಿದು ಘಟನೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ನಂತರವೂ ಸಹ ಕರ್ನಾಟಕದಿಂದ ಕಾವೇರಿ ನೀರು ತಮಿಳುನಾಡಿಗೆ ಹರಿಸಿಲ್ಲ ಎನ್ನುವ ವಿಚಾರವಾಗಿ ತಂಜಾವೂರಿನಲ್ಲಿ ಡಿಎಂಕೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ತ್ರಿಷಾ ಅವರ ವಿರುದ್ಧ ಕೊಳಕಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ಟಿವಿಕೆ ಮಹಿಳಾ ಆಯೋಗ ಪೊಲೀಸರಿಗೆ ಉದಯನಿಧಿ ಸ್ಟಾಲಿನ್​ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದರು.

ವಿಚಾರಣೆ ನಡೆಸಿ, ಜಾಮೀನು ಕೊಡಿ

ದೂರಿನ ಆಧಾರ ಮೇಲೆ ಇಂದು (ಆ.4) ಮುಂಜಾನೆ 11 ಗಂಟಗೆ ಸರಿಯಾಗಿ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್​ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ಬಂಧನ ವಿರೋಧಿಸಿ ಮದ್ರಾಸ್​ ಹೈ ಕೋರ್ಟ್​ಗೆ ಡಿಎಂಕೆ ಅರ್ಜಿ ಸಲ್ಲಿಸಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿಕೆ ಇಳಂತಿರೈಯನ್​​. ಪೊಲೀಸರು ನಡೆಸುವ ವಿಚಾರಣೆಗೆ ಸರಿಯಾಗಿ ಸಹಕರಿಸಬೇಕು. ಆ ನಂತರ ಉದಯನಿಧಿ ಸ್ಟಾಲಿನ್​ ಅವರಿಗೆ ಜಾಮೀನು ನೀಡುವಂತೆ ಪೊ;ಲೀಸರಿಗೆ ನೀರ್ದೇಶನ ಕೊಟ್ಟಿದೆ.

ಇನ್ನೂ ಡಿಎಂಕೆ ನಾಯಕರು ಮಾತನಾಡಿದ್ದು, ಕಾವೇರಿ ನೀರು ಹರಿಸಲು ಪ್ರಶ್ನಿಸುವಂತೆ ಹೋರಾಟ ಮಾಡಿದ ಪ್ರತಿಭಟನಾಕಾರರನ್ನು ಹತ್ತಿಕ್ಕಲು ವಿಜಯ್ ಸರ್ಕಾರ ಈ ಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು, ರೈತರು ಹಾಗೂ ಮಕ್ಕಳ ಬಾಯನ್ನು ಮುಚ್ಚಿಸಲು ಬಂಧನದಂತಹ ಪ್ರಯತ್ನವನ್ನು ಟಿವಿಕೆ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net