Golf: ಕೋಲಾರ ಓಪನ್‌ನಲ್ಲಿ ಶೌರ್ಯ ಭಟ್ಟಾಚಾರ್ಯ 68 ಸ್ಕೋರ್‌ನೊಂದಿಗೆ ಮುನ್ನಡೆ

Golf: ಕೋಲಾರ ಓಪನ್‌ನಲ್ಲಿ ಶೌರ್ಯ ಭಟ್ಟಾಚಾರ್ಯ 68 ಸ್ಕೋರ್‌ನೊಂದಿಗೆ ಮುನ್ನಡೆ
Golf: ಕೋಲಾರ ಓಪನ್‌ನಲ್ಲಿ ಶೌರ್ಯ ಭಟ್ಟಾಚಾರ್ಯ 68 ಸ್ಕೋರ್‌ನೊಂದಿಗೆ ಮುನ್ನಡೆ
Published on

ಕೋಲಾರ: ಬೆಂಗಳೂರಿನ ಸಮೀಪದ ಜಿಯಾನ್ ಹಿಲ್ಸ್ ಗಾಲ್ಫ್ (Golf) ಕೌಂಟಿಯಲ್ಲಿ ನಡೆಯುತ್ತಿರುವ ₹1 ಕೋಟಿ ಮೊತ್ತದ ಕೋಲಾರ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ದೆಹಲಿಯ ಶೌರ್ಯ ಭಟ್ಟಾಚಾರ್ಯ 4-ಅಂಡರ್ 68 ಸ್ಕೋರ್ ದಾಖಲಿಸಿ ಒಂದು ಶಾಟ್ ಮುನ್ನಡೆ ಸಾಧಿಸಿದರು.

23 ವರ್ಷದ ಶೌರ್ಯ ಒಂದು ಈಗಲ್ ಹಾಗೂ ನಾಲ್ಕು ಬರ್ಡಿಗಳೊಂದಿಗೆ ಉತ್ತಮ ಆರಂಭ ಕಂಡರು. ಪಾರ್-5 ಎರಡನೇ ಹೋಲ್​ನಲ್ಲಿ ಚಿಪ್-ಇನ್ ಈಗಲ್ ದಾಖಲಿಸಿದ ಅವರು, ಮೂರನೇ ಮತ್ತು ನಾಲ್ಕನೇ ಹೋಲ್​ಗಳಲ್ಲೂ ಬರ್ಡಿ ಗಳಿಸಿ ಮೊದಲ ನಾಲ್ಕು ಹೋಲ್ಗಳಲ್ಲೇ 4-ಅಂಡರ್ ತಲುಪಿದರು. ಬಳಿಕ 11ನೇ ಮತ್ತು 13ನೇ ಹೋಲ್​ಗಳಲ್ಲಿ ಮತ್ತೆರಡು ಬರ್ಡಿ ದಾಖಲಿಸಿ ಮುನ್ನಡೆ ಕಾಯ್ದುಕೊಂಡರು.
ಕಳೆದ ವರ್ಷದ ಉದ್ಘಾಟನಾ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿದ್ದ ಶೌರ್ಯ, ಕೋರ್ಸ್ನ ಕಠಿಣತೆ ಮತ್ತು ಗಾಳಿಯ ನಡುವೆಯೂ ತಾಳ್ಮೆಯಿಂದ ಆಡಿರುವುದು ಯಶಸ್ಸಿಗೆ ಕಾರಣವಾಯಿತು ಎಂದರು.
ಗುರುಗ್ರಾಮದ ಧ್ರುವ್ ಶಿಯೋರಾನ್, ಗ್ರೇಟರ್ ನೋಯ್ಡಾದ ಅರ್ಜುನ್ ಶರ್ಮಾ ಹಾಗೂ ಬಾಂಗ್ಲಾದೇಶದ ಬಾದಲ್ ಹೊಸೈನ್ ತಲಾ 3-ಅಂಡರ್ 69 ಸ್ಕೋರ್ನೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
ಹೈದರಾಬಾದ್​ನ ಮೊಹಮ್ಮದ್ ಅಜರ್ ಮತ್ತು ಪಾಣಿಪತ್ನ ಶುಭಂ ಜಗ್ಲಾನ್ 2-ಅಂಡರ್ 70ರೊಂದಿಗೆ ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ ಕೋಲ್ಕತ್ತಾದಲ್ಲಿ ತಮ್ಮ ಮೊದಲ ವೃತ್ತಿಪರ ಪ್ರಶಸ್ತಿ ಗೆದ್ದ ಜಗ್ಲಾನ್ ಅದೇ ಆತ್ಮವಿಶ್ವಾಸದೊಂದಿಗೆ ಕೋಲಾರ ಓಪನ್​ನಲ್ಲಿ ಕಣಕ್ಕಿಳಿದಿದ್ದಾರೆ.
ಪ್ರಸ್ತುತ DP World PGTI ರ‍್ಯಾಂಕಿಂಗ್​​ನಲ್ಲಿ ಅಗ್ರಸ್ಥಾನದಲ್ಲಿರುವ ಸಪ್ತಕ್ ತಲ್ವಾರ್ 72ರ ಸಮ-ಪಾರ್ ಸ್ಕೋರ್​ನೊಂದಿಗೆ ಜಂಟಿ 11ನೇ ಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್ ಕ್ಷಿತಿಜ್ ನವೀದ್ ಕೌಲ್ 73ರ 1-ಓವರ್ ಸ್ಕೋರ್​ನೊಂದಿಗೆ ಜಂಟಿ 15ನೇ ಸ್ಥಾನದಲ್ಲಿದ್ದಾರೆ.
132 ಆಟಗಾರರ ಪೈಕಿ ಕೇವಲ 14 ಮಂದಿ ಸಮ-ಪಾರ್ ಅಥವಾ ಅದಕ್ಕಿಂತ ಉತ್ತಮ ಸ್ಕೋರ್ ದಾಖಲಿಸಿದ್ದು, ಜಿಯಾನ್ ಹಿಲ್ಸ್ ಕೋರ್ಸ್​ನ ಕಠಿಣತೆಯನ್ನು ಇದು ತೋರಿಸುತ್ತದೆ.
7,330 ಯಾರ್ಡ್ ಉದ್ದದ ಈ ಕೋರ್ಸ್ ಭಾರತದ ಅತ್ಯಂತ ಉದ್ದದ ಗಾಲ್ಫ್ ಕೋರ್ಸ್​ಗಳಲ್ಲಿ ಒಂದಾಗಿದೆ. 10 ಕೆರೆಗಳನ್ನು ಹೊಂದಿರುವ ಕೋರ್ಸ್​ನಲ್ಲಿ ನೀರಿನ ಅಡೆತಡೆಗಳು ಪ್ರಮುಖ ಸವಾಲಾಗಿದ್ದು, 13ನೇ ಹೋಲ್ನ ಐಲ್ಯಾಂಡ್ ಗ್ರೀನ್ ವಿಶೇಷ ಆಕರ್ಷಣೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net