

ಕೋಲಾರ: ಬಾರ್ ಸಿಬ್ಬಂದಿ ತನಗೆ ನಮಸ್ಕಾರ ಮಾಡಲಿಲ್ಲ ಎಂದು ಕುಪಿತಗೊಂಡ ಎಎಸ್ಐ, ಕುಡಿದ ಮತ್ತಿನಲ್ಲಿ ಸಿಬ್ಬಂದಿ ಮೇಲೆ ಗೂಂಡಾ ವರ್ತನೆ ಮಾಡಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಅಧಿಕಾರಿ ಗುರಿಯಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಸರ್ಕಲ್ನ ಅಶೋಕ ಬಾರ್ನಲ್ಲಿ ಸಂಭವಿಸಿದೆ.
ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದು, ಬಾರ್ ಸಿಬ್ಬಂದಿ ನಮಸ್ಕಾರ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಎಎಸ್ಐ ಅಂಗಡಿ ಮುಂದೆ ಗಲಾಟೆ ಮಾಡಿದ್ದಾರೆ. ಸಿಬ್ಬಂದಿಯೊಡನೆ ತೀವ್ರ ವಾಗ್ವಾದಕ್ಕಿಳಿದ ಅಧಿಕಾರಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಘಟನೆಯ ಬೆನ್ನಲ್ಲೇ ಎಎಸ್ಐ ಅಧಿಕಾರಿ ನಾರಾಯಣಸ್ವಾಮಿ ವಿರುದ್ಧ ಎಸ್ಪಿಗೆ ಬಾರ್ ಆಸೋಸಿಯೆಷನ್ ದೂರು ನೀಡಿದೆ. ಸಿಬ್ಬಂದಿಯೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ ಅಧಿಕಾರಿ, ಅಲ್ಲೇ ಇದ್ದ ಕಲ್ಲನ್ನು ಕೈಗೆತ್ತಿಕೊಂಡು ಎಸೆಯಲು ಕೂಡ ಯತ್ನಿಸಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.