ಅಕ್ರಮಕ್ಕೆ ತಾರ್ಕಿಕ ಅಂತ್ಯ ಕಾಣಿಸುವೆ: ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ ಎಚ್ಚರಿಕೆ

27-klr-2
Published on

ಕೋಲಾರ: ಅಲ್ಪಸಂಖ್ಯಾತರ ಪರ ಮೊಸಳೆ ಕಣ್ಣೀರು ಸುರಿಸಿಕೊಂಡು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುತ್ತಾ ಹೀರೋ ಆಗಲು ಹೊರಟರೆ ಜನಾಭಿಪ್ರಾಯಕ್ಕೆ ಗೌರವ ನೀಡಿದಂತೆ ಆಗುವುದಿಲ್ಲ, ನಗರಸಭೆಯಲ್ಲಿ ನಡೆದಿರುವ ಅಕ್ರಮದ ಮುಖವಾಡ ಬಯಲು ಮಾಡುವೆ ಎಂದು ಉಪಾಧ್ಯಕ್ಷ ಪ್ರವೀಣ್‌ಗೌಡ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಎಂ.ಮುಬಾರಕ್ ವಿರುದ್ಧ ಗುಡುಗಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಪದಚ್ಯುತಿಗೆ ನಡೆಯುತ್ತಿರುವ ಪ್ರಯತ್ನವನ್ನು ಪ್ರಶ್ನಿಸುವ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಎಂ.ಮುಬಾರಕ್ ವಹಿಸಿದ ಪಾತ್ರದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

ನಾನು ಉಪಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು 8 ತಿಂಗಳಾಗಿದೆ, ಸ್ಥಾನ ಬದಲಾವಣೆ ಬಗ್ಗೆ ಪಕ್ಷದ ನಾಯಕರ ಜತೆ ಎಲ್ಲೂ ಚರ್ಚೆಯಾಗದಿದ್ದರೂ ಪಿತೂರಿ ನಡೆಯುತ್ತಿದೆ. ಬಿ.ಎಂ.ಮುಬಾರಕ್ ನೇತೃತ್ವದಲ್ಲಿ ಆ. 15ರಂದು ಸದಸ್ಯರು ಸಭೆ ಸೇರಿ ಅವಿಶ್ವಾಸ ತರಲು ಮುಂದಾಗಿ ಒತ್ತಡ ಹೇರಿ ಸಹಿ ಪಡೆದಿದ್ದಾರೆಂದು ಅಪಾದಿಸಿದರು.

ಪಕ್ಷ ನಿಷ್ಠೆ ಯಾವುದು?: ನಗರಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೈ ಗೂಡದಿದ್ದಾಗ ಕಾಂಗ್ರೆಸ್‌ನಿಂದ ಅಸ್ರತ್ ನಸ್ರೀನ್ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಲು ನಿರ್ಧರಿಸಿತ್ತು. ಒಗ್ಗಟ್ಟು ಕಾಯ್ದುಕೊಳ್ಳಲು ಜೆಡಿಎಸ್ ಸದಸ್ಯರೆಲ್ಲರೂ ಪ್ರವಾಸ ತೆರಳಿದ್ದೆವು. ಕಾಂಗ್ರೆಸ್‌ನಲ್ಲಿನ ಪ್ರತಿ ಬೆಳವಣಿಗೆಗಳನ್ನು ಮುಬಾರಕ್ ನಮಗೆ ತಿಳಿಸುತ್ತಿದ್ದರು. ಅಂದರೆ ಅವರ ನಿಷ್ಠೆ ಯಾವುದು? ನನ್ನ ಏಳಿಗೆ ಸಹಿಸದೆ ಜನಾಭಿಪ್ರಾಯದ ವಿರುದ್ಧ ಸಹಿ ಸಂಗ್ರಹ ಮಾಡಿರುವುದು ಸರಿಯೇ ಎಂದರು.

ಮುಬಾರಕ್ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ, ನಾನು ರಾಜೀನಾಮೆಗೆ ಸಿದ್ಧ, ಒಟ್ಟು 35 ಸದಸ್ಯರಲ್ಲಿ 15 ಅಲ್ಪಸಂಖ್ಯಾತರು, 7 ಕುರುಬರಿದ್ದಾರೆ. ನಾನು ಶಾಸಕರಾದ ಶ್ರೀನಿವಾಸಗೌಡ, ಇಂಚರ ಗೋವಿಂದರಾಜು ಜತೆ ಚರ್ಚಿಸುತ್ತೇನೆ, ನೀವು ಎಮ್ಮೆಲ್ಸಿ ನಜೀರ್ ಅಹಮದ್, ಮಾಜಿ ಸಂಸದ ಕೆ.ಎಚ್. ಜತೆ ಮಾತನಾಡಿ. ಇನ್ನು 10 ತಿಂಗಳು ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ, ಉಳಿದ 10 ತಿಂಗಳು ಕುರುಬ ಸಮುದಾಯಕ್ಕೆ ನೀಡೋಣ. ಇದಕ್ಕೆ ಸಿದ್ಧರಿದ್ದೀರಾ ಎಂದು ಸವಾಲು ಹಾಕಿದರು.

ಹರಾಜಿಲ್ಲದೆ ವ್ಯಾಪಾರ: ಮುಬಾರಕ್ ಅಧ್ಯಕ್ಷರಾಗಿದ್ದಾಗ 2014ರಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡದೆ ವ್ಯಾಪಾರ ಕುದುರಿಸಿ ಸರ್ಕಾರಕ್ಕೆ, ನಗರಸಭೆಗೆ ಅದಾಯ ವಂಚಿಸಲಾಗಿತ್ತು. ಈಗ ಎಸ್.ಎಸ್. ಮತ್ತು ತರಕಾರಿ ಮಾರುಕಟ್ಟೆಯಲ್ಲಿನ ಮಳಿಗೆ ಬಿಟ್ಟು ಉಳಿದ್ದನ್ನು ವಿಲೇವಾರಿಗೆ ಸಭೆಯಲ್ಲಿ ಒತ್ತಾಯಿಸಿದ್ದಾಗ ನಾನು ಆಕ್ಷೇಪಿಸಿದ್ದರಿಂದ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ತಂದು ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರನ್ನು ಈ ಸ್ಥಾನಕ್ಕೆ ತರಲು ಮುಂದಾಗಿದ್ದಾರೆ ಎಂದರು.

ಬಿ.ಎಂ.ಮುಬಾರಕ್ ಜತೆಗೆ ಇಟ್ಟುಕೊಂಡು ಜೆಡಿಎಸ್‌ನ ಎಮ್ಮೆಲ್ಸಿ ಸಿ.ಆರ್.ಮನೋಹರ್ ಕಾರ್ಯಕ್ರಮ ನಡೆಸುತ್ತಿದ್ದಾರೆ, ಅವರ ಕಾರ್ಯಕ್ರಮಗಳ ಬಗ್ಗೆ ಪಕ್ಷಕ್ಕೆ, ನಮಗೆ ಮಾಹಿತಿ ಇಲ್ಲ ಎಂದರು.

ಜೆಡಿಎಸ್ ನಗರ ಅಧ್ಯಕ್ಷ, ನಗರಸಭೆ ಸದಸ್ಯ ಸುರೇಶ್‌ಬಾಬು ಮಾತನಾಡಿ, ನಗರಸಭೆಯ 8 ಜೆಡಿಎಸ್ ಸದಸ್ಯರು ಒಟ್ಟಾಗಿದ್ದೇವೆ. ಉಪಾಧ್ಯಕ್ಷರ ಪದಚ್ಯುತಿ ಕುರಿತು ಪಕ್ಷದ ವರಿಷ್ಠರು, ಶಾಸಕರು, ಜಿಲ್ಲಾ, ತಾಲೂಕು ಅಧ್ಯಕ್ಷರ ಗಮನಕ್ಕೆ ಬಂದಿಲ್ಲ. ಮಾಧ್ಯಮಗಳಲ್ಲಿನ ವರದಿ ಆಧರಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸದಂತೆ ನಾಯಕರು ಎಚ್ಚರಿಕೆ ನೀಡಿದ್ದಾರೆ ಎಂದರು. ಸದಸ್ಯ ರಾಕೇಶ್ ಹಾಜರಿದ್ದರು.

ನನಗೂ ರಾಜಕಾರಣ ಗೊತ್ತು: ಮುಬಾರಕ್ ಅವರ ಡಿಕ್ಟೇಟರ್‌ಶಿಪ್ ನಡೆಯಲ್ಲ, ಅವರ ಮುಖವಾಡ ಬಯಲು ಮಾಡುತ್ತೇನೆ, ನನಗೂ ರಾಜಕಾರಣ ಗೊತ್ತಿದೆ. ಅವರಷ್ಟು ಅನುಭವ ಇಲ್ಲದಿರಬಹುದು, ಆದರೆ ಶುದ್ಧ ಕೈ, ಬಾಯಿ ಇಟ್ಟುಕೊಂಡಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ಹಗರಣದ ಬಗ್ಗೆ ತಾರ್ಕಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದು ಪ್ರವೀಣ್‌ಗೌಡ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net