ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ಮಾಡಿ ಲಾಭ ಪಡೆಯುತ್ತಿರುವ ರೈತರು

27KSM-1A
Published on

ನಾಗೇಂದ್ರ ಕೆ. ಕಾಮಸಮುದ್ರ

ಅತ್ಯಲ್ಪ ಬಂಡವಾಳ ಮತ್ತು ನೀರು ಬಳಸಿಕೊಂಡು ಗಡಿಭಾಗದ ರೈತರು ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾಪಂನ ನರಸಿಂಹಪುರದ ಸುತ್ತಲೂ ದಟ್ಟವಾದ ಅರಣ್ಯವಿದ್ದು, ಕೇವಲ 8-10 ಕುಟುಂಬಗಳಿರುವ ಗ್ರಾಮಕ್ಕೆ ಸರ್ಕಾರಿ ಸೌಲಭ್ಯಗಳಿರಲಿ, ಜನಸಂಚಾರವೇ ವಿರಳ. ರೇಷ್ಮೆ ವಿಸ್ತರಣಾಧಿಕಾರಿ ಜೈ ಶ್ರೀನಿವಾಸಲು ಮಾರ್ಗದರ್ಶನದೊಂದಿಗೆ ಗ್ರಾಮದ ಮುನಿಲಕ್ಷ್ಮಮ್ಮ ಎಂಬುವವರು 1 ಎಕರೆ ತೋಟದಲ್ಲಿ ರೇಷ್ಮೆ ಕೃಷಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

8*3 ಅಳತೆಯ ಜೋಡಿ ಸಾಲು ಪದ್ಧತಿಯಲ್ಲಿ ಸ್ಥಳೀಯವಾಗಿ ದೊರೆಯುವ ಹೊಂಗೆ, ಬೇವು ಮತ್ತಿತರ ಗಿಡಮರಗಳ ಸೊಪ್ಪನ್ನು ಸಾಲುಗಳಲ್ಲಿ ತುಂಬಿಸಿ, ಹನಿ ನೀರಾವರಿ ಅಳವಡಿಸಿ ಸಾವಯವ ಗೊಬ್ಬರ ತಯಾರಿಸಿ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದಾರೆ.

ರೇಷ್ಮೆ ಅವಿಭಾಜ್ಯ ಅಂಗ: ಸಿಲ್ಕ್ ಮತ್ತು ಮಿಲ್ಕ್ ನಾಡು ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ತನ್ನದೇ ಮಹತ್ವ ಪಡೆದುಕೊಂಡಿದೆ. ಕಡಿಮೆ ಜಾಗ, ಅವಧಿ ಮತ್ತು ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ತಂದುಕೊಡುವುದರಿಂದ ರೇಷ್ಮೆಯು ಜಿಲ್ಲೆಯ ರೈತರ ಜೀವನದ ಅವಿಭಾಜ್ಯ ಅಂಗವಾಗಿದೆ. ಸಿ.ಎಸ್.ಆರ್. ಬೈವೋಲ್ಟಿನ್ ಸಂಕರಣ ತಳಿಗಳು ಹಾಗೂ ಕೋಲಾರ ಚಿನ್ನ ಮಿಶ್ರತಳಿ ಅಪಾರ ಜನಪ್ರಿಯತೆ ಪಡೆದಿದೆ. ಹಿಪ್ಪುನೇರಳೆ ತಳಿಗಳಲ್ಲಿ ವಿ1 ಮತ್ತು ಎಸ್-36 ತಳಿಗಳು ಹೆಚ್ಚಿನ ಇಳುವರಿ ತಂದುಕೊಡುವುದರಿಂದ ಇದೇ ತಳಿಗಳನ್ನು ನರೇಗಾ ಯೋಜನೆಯಡಿ ಜಿಲ್ಲೆಯ ರೈತರು ಸುಮಾರು 400 ಎಕರೆಯಲ್ಲಿ ಬೆಳೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಕರೊನಾದಿಂದ ಬಹಳಷ್ಟು ಜನ ಉದ್ಯೋಗ ಕಳೆದುಕೊಂಡು ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಸರ್ಕಾರವು ನರೇಗಾ ಯೋಜನೆಯಡಿ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಆದ್ದರಿಂದ, ಕಡಿಮೆ ಬಂಡವಾಳದಲ್ಲಿ ರೇಷ್ಮೆ ಕೃಷಿ ಕೈಗೊಂಡು ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಜೈ ಶ್ರೀನಿವಾಸಲು, ತಾಂತ್ರಿಕ ಸೇವಾ ಕೇಂದ್ರ ಕಾಮಸಮುದ್ರದ ರೇಷ್ಮೆ ವಿಸ್ತರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net