ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ: ಹೃದಯಾಘಾತದಿಂದ ಮಲಗಿದ ಸ್ಥಿತಿಯಲ್ಲೇ ಶಿವೈಕ್ಯ

Kolada Mata
Published on

ಬೆಂಗಳೂರು: ಕೊಳದ ಮಠದ ಶ್ರೀ ಡಾ. ಶಾಂತವೀರ ಸ್ವಾಮೀಜಿ (80) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ರಾತ್ರಿ ವೇಳೆಗೆ ಮಠದ ಆವರಣದಲ್ಲಿಯೇ ವೀರಶೈವ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮುರುಘಾ ಶ್ರೀಗಳು ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳು ನೆರವೇರಿದವು. ಶುಕ್ರವಾರ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದ ಶ್ರೀಗಳು, ಆರೋಗ್ಯವಾಗಿಯೇ ಇದ್ದರು. ರಾತ್ರಿ 11 ಗಂಟೆವರೆಗೂ ಚೆನ್ನಾಗಿಯೇ ಮಾತನಾಡುತ್ತಿದ್ದರು. ಶನಿವಾರ ಬೆಳಗ್ಗೆ ನೋಡಿದಾಗ ಅವರ ಉಸಿರಾಟ ನಿಂತಿತ್ತು. ಪರೀಕ್ಷೆ ನಡೆಸಿದ ವೈದ್ಯರು ಹೃದಯಾಘಾತ ಆಗಿರುವುದಾಗಿ ಹೇಳಿದರು ಎಂದು ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಹರ್ಷ ತಿಳಿಸಿದರು.

ಶ್ರೀಗಳ ಆಪ್ತ ಸಹಾಯಕ ವೆಂಕಟಪ್ಪ ಮಾತನಾಡಿ, ಕಳೆದ 43 ವರ್ಷಗಳಿಂದ ನಾನು ಮತ್ತು ನನ್ನ ಕುಟುಂಬ ಶ್ರೀಗಳ ಜತೆಯಲ್ಲೇ ಇದ್ದೆವು. ನಮಗೆ ಆಸರೆ ನೀಡಿರುವ ದೇವರು ಅವರು. ಈಗ ಶ್ರೀಗಳು ಇಲ್ಲದೆ ಬಡವಾಗಿದ್ದೇನೆ. ಸಾವಿರಾರು ಜನರಿಗೆ ಅನ್ನದಾತರಾಗಿದ್ದ ಶ್ರೀಗಳಿಗೆ ಪ್ರತಿನಿತ್ಯ ನಾನು ಅಡುಗೆ ಮಾಡಿ ಬಡಿಸುತ್ತಿದ್ದೆ ಎಂದು ಕಣ್ಣೀರಾಕಿದರು. ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆವರೆಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಗಣ್ಯರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು.

ಮುಖ್ಯಮಂತ್ರಿ ಸಂತಾಪ: ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಧರ್ಮಜಾಗೃತಿ, ಸಮಾಜ ಸುಧಾರಣೆಯಲ್ಲಿ ನಿರತರಾಗಿದ್ದ ಸ್ವಾಮಿಗಳು ಬಸವ ತತ್ವಗಳ ಅನುಷ್ಠಾನಕ್ಕೆ ಶ್ರಮಿಸಿದ್ದರು. ಅವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಭಕ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರಿದ್ದಾರೆ.

ಸಂತಾಪ: ಶ್ರೀಗಳ ಅಗಲಿಕೆಗೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮುರುಘಾಮಠದ ಶ್ರೀಗಳು ಸೇರಿ ವಿವಿಧ ಮಠಾಧೀಶರು ಸಂತಾಪ ಸೂಚಿಸಿದ್ದಾರೆ. ಸಚಿವ ವಿ. ಸೋಮಣ್ಣ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿ ಸೇರಿ ವಿವಿಧ ಪಕ್ಷಗಳ ರಾಜಕೀಯ ಗಣ್ಯರು ಹಾಗೂ ಪ್ರಮುಖರು ಕಂಬನಿ ಮಿಡಿದಿದ್ದಾರೆ.

ಶ್ರೀ ಶಾಂತವೀರ ಮಹಾಸ್ವಾಮೀಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ದೇವರು ಭಕ್ತರಿಗೆ ನೀಡಲಿ. | ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ ಶ್ರೀ ಶಾಂತವೀರ ಮಹಾಸ್ವಾಮೀಜಿ ಧರ್ಮಪ್ರಸಾರ, ಸಾಮಾಜಿಕ ಕಾಳಜಿ ಮತ್ತು ಜನಜಾಗೃತಿಯಲ್ಲಿ ಸದಾ ಮುಂದಿರುತ್ತಿದ್ದರು. ಅದರಲ್ಲಿಯೇ ತೊಡಗಿಸಿಕೊಂಡಿದ್ದ ಸಮಾಜದ ಹಿರಿಯ ಶ್ರೀಗಳನ್ನು ಕಳೆದುಕೊಂಡು ನಾವೆಲ್ಲ ಬಡವಾಗಿದ್ದೇವೆ. | ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ ಕೊಳದ ಮಠದ ಶ್ರೀಗಳು ಸಾಮಾಜಿಕ, ಧಾರ್ವಿುಕ ಸುಧಾರಣೆಗೆ ಶ್ರಮಿಸಿದ್ದರು. ಶ್ರೀಗಳ ನಿಧನದಿಂದ ನಾಡು ಬಡವಾಗಿದೆ. ಶ್ರೀಗಳ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ದೇವರು ಮಠದ ಭಕ್ತರಿಗೆ ನೀಡಲಿ. ಸ್ವಾಮೀಜಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಕೊಳದ ಮಠದ ಶ್ರೀಗಳು ಸಮಾಜ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ನಾಡಿನ ಬಹುದೊಡ್ಡ ಸ್ವಾಮೀಜಿಯಾಗಿದ್ದರು. ಅವರ ನಿಧನ ನಾಡಿಗೆ ಆದ ನಷ್ಟ. | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

60 ವರ್ಷ ಪೀಠಾಧ್ಯಕ್ಷರು: ಲಿಂಗಾಯತ ವಿರಕ್ತ ಪರಂಪರೆಯನ್ನು ಹೊಂದಿದ ಕೊಳದ ಮಠಕ್ಕೆ ಶ್ರೀ ಡಾ. ಶಾಂತವೀರ ಸ್ವಾಮೀಜಿ ಅವರು, ಚಿತ್ರದುರ್ಗದ ಮುರುಘಾಮಠದ ಮುರುಘರಾಜೇಂದ್ರ ಜಗದ್ಗುರುಗಳಿಂದ ಪಟ್ಟಾಭಿಷಿಕ್ತರಾಗಿದ್ದರು. ಕಳೆದ 60 ವರ್ಷಗಳಿಂದ ಪೀಠಾಧ್ಯಕ್ಷರಾಗಿದ್ದ ಶ್ರೀಗಳು ತಮ್ಮ ಜಾತ್ಯಾತೀತ ನಿಲುವಿನಿಂದ ಅಪಾರ ಭಕ್ತರ ಸಮೂಹವನ್ನು ಹೊಂದಿದ್ದರು. ಆಗಮಿಕ ಮತ್ತು ಅರ್ಚಕರ ಸಂಘದ ಗೌರವ ಅಧ್ಯಕ್ಷ, ಅಖಿಲ ಕರ್ನಾಟಕ ಬೇಡ ಜಂಗಮ ಸಂಸ್ಥೆಯ ಅಧ್ಯಕ್ಷ, ಅಖಿಲ ಭಾರತ ಸಂಸ್ಕೃತ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಶ್ರೀಗಳು, ಕೊಳದ ಮಠದ ಮಹಾಸಂಸ್ಥಾನದ ಮೂಲಕ ವಿವಿಧ ಧಾರ್ವಿುಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದರು. ಬಸವಣ್ಣನ ತತ್ವಗಳ ಅನುಷ್ಠಾನಕ್ಕಾಗಿ ಶ್ರಮಿಸಿದ್ದರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀಗಳು, ಧಾರ್ವಿುಕ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ವಿಚಾರದಲ್ಲಿ ಸದಾ ಮುನ್ನೆಲೆಯಲ್ಲಿರುತ್ತಿದ್ದರು. ಕಳೆದ 8-10 ತಿಂಗಳ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವಂತೆ ಆಗ್ರಹಿಸಿದ್ದರು. ಮುಜರಾಯಿ ಇಲಾಖೆ ದೇವಾಲಯದ ಅರ್ಚಕರಿಗೆ ತಸ್ತೀಕ್ ಹೆಚ್ಚಳ ಸೇರಿ ವಿವಿಧ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net