

ಗದಗ: ಈ ವರ್ಷವೂ ಕೂಡಾ ವಿಪರೀತ ಮಳೆಯಾಗುತ್ತದೆ. ಗಾಳಿ ಹಾಗೂ ಬೆಂಕಿ ಅವಘಡ ಸೇರಿದಂತೆ ಭೂಮಿ ತಲ್ಲಣಗೊಳ್ಳುತ್ತದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದರು.
ಭಾನುವಾರ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕೃತಿಗೆ ಸವಾಲಾಗಿ, ಮನುಷ್ಯ ತನ್ನ ಬುದ್ಧಿ ಶಕ್ತಿಯಿಂದ ಹೊಸ ಆವಿಷ್ಕಾರ ಮಾಡುತ್ತಾ ಬರುತ್ತಿದ್ದಾನೆ. ರೆಕ್ಕೆ ಇಲ್ಲದ ಹಕ್ಕಿಗಳು ಹಾರಾಡಿವೆ. ಎತ್ತುಗಳು ಇಲ್ಲದ ಗಳೆಯನ್ನು ಹೊಡೆದಿದ್ದಾರೆ. ಎಣ್ಣೆ ಇಲ್ಲದ ದೀಪವನ್ನು ಉರಿಸಿದ್ದಾರೆ. ಅನೇಕ ವಿಜ್ಞಾನ ಆವಿಷ್ಕಾರ ಮಾಡಿ ಮನುಷ್ಯ ಜಗತ್ತನ್ನು ತಲ್ಲಣಗೊಳಿಸಿದ್ದಾನೆ. ಮನುಷ್ಯ ಬಹಳ ಎತ್ತರಕ್ಕೆ ಜಗತ್ತಿನಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ದಾನೆ. ಇದರಲ್ಲಿ ಯಾವುದೋ ಒಂದು ಶಕ್ತಿ ಅಡಗಿದೆ. ಅದು ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತದೆ. ಅದನ್ನೇ ನಾವು ದೈವ ಶಕ್ತಿಯೆಂದು ಕರೆಯಬಹುದು. ಅಂತಹ ದೈವ ಶಕ್ತಿ ಮುನಿದರೆ ಮನುಷ್ಯನ ಯಾವ ಪ್ರಯತ್ನವು ವಿಫಲವಾಗುತ್ತವೆ ಎಂದು ಹೇಳಿದರು.
ಚಂದ್ರಯಾನವು ದೈವ ಶಕ್ತಿ ನಂಬಿಕೆ ಕೊರತೆಯಿಂದ ವಿಫಲವಾಗಿದೆ ಎನ್ನುವದು ನನ್ನ ಅಭಿಪ್ರಾಯ. ಪ್ರಕೃತಿಯ ಒಳಗುಟ್ಟನ್ನು ಭೇದಿಸುತ್ತಾ ಹೊದಂತೆ ಪ್ರಕೃತಿ ಮನುಷ್ಯನಿಗೆ ಸಹಕಾರಿಯಾಗುತ್ತೆ. ಹಾಗೇ ವಿಷಕಾರಿಯು ಆಗುತ್ತದೆ. ನೀರು, ಬೆಂಕಿ, ಗಾಳಿ, ಮನಕುಲಕ್ಕೆ ವಿನಾಶಕಾರಿಯಾಗುತ್ತಿವೆ. ಜತೆ ಹೊಸ ರೋಗಗಳು ಉತ್ಪತ್ತಿಯಾಗುತ್ತವೆ. ಮನುಷ್ಯ ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಪ್ರಕೃತಿಯನ್ನು ದುರುಪಯೋಗ ಪಡೆಸಿಕೊಂಡಿದ್ದಾನೆ ಎಂದರು.
ಈ ವರ್ಷವೂ ಕೂಡಾ ವಿಪರೀತ ಮಳೆಯಾಗುತ್ತದೆ. ಗಾಳಿ ಮತ್ತು ಬೆಂಕಿ ಅವಘಡ ಸಂಭವಿಸುತ್ತವೆ. ಭೂಮಿ ತಲ್ಲಣ್ಣಗೊಳ್ಳತ್ತದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತದೆ. ಹೀಗಾಗಿ ಮನುಷ್ಯ ಎಲ್ಲಿ ಎಡೆವಿದಾನೆ ಅಲ್ಲಿಯೇ ಸರಿ ಪಡಿಸಿಕೊಳ್ಳಬೇಕು. ಮುಂದೆ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇನ್ನೂ ಹೆಚ್ಚು ಪ್ರಕೃತಿ ದತ್ತವಾದ ರೋಗಗಳು ಆವರಿಸುತ್ತವೆ. ಮನುಷ್ಯನಿಗೆ ಮದ್ದಿಲ್ಲದ ಕಾಯಿಲೆಗಳು ಬರುತ್ತಾವೆ. ಹೀಗಾಗಿ ಭಗವಂತನ ಮೊರೆ ಹೋಗುವದು ಒಂದೇ ದಾರಿ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬಗ್ಗೆ ಭವಿಷ್ಯ ನುಡಿದ ಅವರು ಸದ್ಯ ಸರ್ಕಾರಕ್ಕೆ ಯಾವುದೇ ಭಯವಿಲ್ಲ, ಸರ್ಕಾರ ಸುಭದ್ರವಾಗಿ ಇರುತ್ತದೆ. ಮುಂದೆಯು ಸಹ ಸುಭದ್ರವಾಗಿ ಇರುತ್ತದೆ. ಯುಗಾದಿ ನಂತರ ಮತ್ತೆ ಭವಿಷ್ಯ ಹೇಳುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್)