ಕ್ರೀಡೆಗೆ ಕೊಡವರ ಕೊಡುಗೆ ಅಪಾರ

6 gkp 03.
ಗೋಣಿಕೊಪ್ಪಲುವಿನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಚೆಕ್ಕೇರ ಕ್ರಿಕೆಟ್ ನಮ್ಮೆಗೆ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ತೀತಿರ ರೋಷನ್ ಅಪ್ಪಚ್ಚು, ಕೀತಿಯಂಡ ಕಾರ್ಸನ್ ಕಾರ್ಯಪ್ಪ ಇದ್ದರು.
Published on

ಗೋಣಿಕೊಪ್ಪಲು : ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದೊಂದಿಗೆ 23 ನೇ ವರ್ಷದ ಪ್ರತಿಷ್ಠಿತ ಚೆಕ್ಕೇರ ಕ್ರಿಕೆಟ್ ನಮ್ಮೆಗೆ ಭಾನುವಾರ ವಿದ್ಯುಕ್ತ ಚಾಲನೆ ನೀಡಲಾಯಿತು.

ಮುಂಜಾನೆ 9 ಗಂಟೆಗೆ ಸ್ಥಳೀಯ ಮಹಾದೇವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಚೆಕ್ಕೇರ ಕುಟುಂಬಸ್ಥರು ನಂತರ ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಮೈದಾನ ಪ್ರವೇಶ ಮಾಡಿದರು. ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಪುರುಷರು ಹಾಗೂ ಮಹಿಳೆಯರು ಕೊಡವ ವಾಲಗದೊಂದಿಗೆ ಹೆಜ್ಜೆ ಹಾಕುತ್ತಾ ಸ್ಥಳೀಯ ಪ್ರೌಢಶಾಲಾ ಮೈದಾನಕ್ಕೆ ಆಗಮಿಸಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಜ್ಯೋತಿ ಬೆಳಗಿಸಿ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಿದರು. ಚೆಕ್ಕೇರ ಕುಟುಂಬಸ್ಥರ ಹಾಗೂ ಕ್ರಿಕೆಟ್ ಅಕಾಡೆಮಿ ಧ್ವಜವನ್ನು ಗಣ್ಯರು ಹಾರಿಸಿದರು. ನಂತರ ಸಾಂಪ್ರದಾಯಿಕವಾಗಿ ಕುಶಾಲತೋಪುಗಳನ್ನು ಒಂದು ಸುತ್ತು ಹಾರಿಸಲಾಯಿತು. ಈ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಸಂಪ್ರದಾಯದ ಭಾಗವಾಗಿ ಹಾಕಿ, ಕ್ರಿಕೆಟ್ ಮತ್ತು ಇತರ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಗೆ ಕೊಡವರ ಕೊಡುಗೆ ಅಪಾರ. ಕೊಡವ ಜನಾಂಗ ಬಿಟ್ಟು ಇತಿಹಾಸ ಬರೆಯಲು ಸಾಧ್ಯವಿಲ್ಲ ಎಂದರು.

ಮೈದಾನದ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಈ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಲಾಗಿದೆ. ಮಕ್ಕಳಿಗೆ ಪ್ರೊತ್ಸಾಹ ಸಿಗುವಂತಾಗಬೇಕು, ಸಮಾಜಕ್ಕೆ ಚೆಕ್ಕೇರ ಕುಟುಂಬಸ್ಥರ ಕೊಡುಗೆ ಅಪಾರ ಎಂದ ಅವರು, ಚೆಕ್ಕೇರ ಮೋಟಯ್ಯನವರು ನ್ಯಾಯಾಂಗ ವ್ಯವಸ್ಥೆಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದರು. ಪ್ರತಿ ಕೊಡವ ಹಾಗೂ ಜಮ್ಮ ಹಿಡುವಳಿದಾರರು ಮರೆಯಲಾಗದ ವಿಷಯವೆಂದರೆ ಚೆಕ್ಕೇರ ಪೂವಯ್ಯ ನೀಡಿರುವ ತೀರ್ಪು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಲ್ಲದಿದ್ದರೆ ಒಂದಿಂಚು ಜಾಗ ಕೂಡ ನಮಗೆ ಸಿಗುತ್ತಿರಲಿಲ್ಲ. ಅಂತಹ ಕೊಡುಗೆ ನೀಡಿದ ಮಹನೀಯರು ಚೆಕ್ಕೇರ ಕುಟುಂಬಸ್ಥರಲ್ಲಿ ಇದ್ದರು ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಆಯೋಜನೆ ಮಾಡುವ ಮೂಲಕ ಚೆಕ್ಕೇರ ಕುಟುಂಬ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಸೇನೆ ಹಾಗೂ ಕ್ರೀಡೆಯಲ್ಲಿ ಕೊಡಗಿಗೆ ವಿಶೇಷ ಗೌರವವಿದೆ. ಇದರಿಂದಾಗಿ ಮತ್ತಷ್ಟು ಪ್ರತಿಭೆಗಳು ಹೊರ ಹೊಮ್ಮಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ಮಾತನಾಡಿ, 8 ಬಾರಿ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದೇವೆ. ಹಾಕಿ ನಮ್ಮೆ ನಡೆಸಿ ಯಶಸ್ವಿಯಾಗಿದ್ದೆವು. ಆ ಒಂದು ಧೈರ್ಯದಿಂದ ಕ್ರಿಕೆಟ್ ನಮ್ಮೆ ಗೆ ಯೋಜನೆ ರೂಪಿಸಲಾಯಿತು. ಅಂಜಿಕೇರಿ ಮಕ್ಕಳು ಇದಕ್ಕೆ ಬೆಂಬಲವಾಗಿ ನಿಂತರು. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅತೀ ಹೆಚ್ಚು ಅನುದಾನ ನೀಡುವ ಮೂಲಕ ಸಹಕಾರ ನೀಡಿದರು. ಕಲೆ,ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಕ್ರಿಕೆಟ್ ನಮ್ಮೆ ಆಯೋಜನೆ ಮಾಡಿದ್ದೇವೆ. 281 ತಂಡಗಳು ಹಾಗೂ 64 ಮಹಿಳಾ ತಂಡಗಳು ನೋಂದಣಿ ಮಾಡಿಕೊಂಡಿವೆ. 42 ದಿನಗಳ ಕಾಲ ಈ ಪಂದ್ಯಾವಳಿ ನಡೆಯಲಿದೆ ಎಂದರು.

ವೇದಿಕೆಯಲ್ಲಿಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಕಾರ್ಯದರ್ಶಿ ಚೇರಂಡ ಕಿಸನ್, ಒಲಂಪಿಯನ್ ಬಾಳೆಯಡ ಸುಬ್ರಹ್ಮಣಿ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಹುದಿಕೇರಿ ಗ್ರಾ.ಪಂ.ಅಧ್ಯಕ್ಷರಾದ ಕುಪ್ಪಣಮಾಡ ನವ್ಯಾ ಕಾವೇರಮ್ಮ, ಜನತಾ ಪ್ರೌಢಶಾಲಾ ಅಧ್ಯಕ್ಷ ಮಂಡಂಗಡ ಅಶೋಕ್, ಚೆಕ್ಕೇರ ಕುಟುಂಬದ ಹಿರಿಯರಾದ ಚೆಕ್ಕೇರ ವಾಸು ಕುಟ್ಟಪ್ಪ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಮಧ್ಯಾಹ್ನ ಕೊಡವ ಹಾಗೂ ಅಮ್ಮಕೊಡವ ಕುಟುಂಬಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು,. ಚೆಕ್ಕೇರ ಕುಟುಂಬದ ಕ್ರಿಕೆಟ್ ಬಗ್ಗೆ ಕಬ್ಬಚ್ಚೀರ ರಶ್ಮಿ ಹಾಗೂ ಬಿದ್ದಂಡ ನಾಣಯ್ಯ ಖ್ಯಾತ ಗಾಯಕ ಚೆಕ್ಕೇರ ಪಂಚಮ್ ಹಾಗೂ ಮುಕ್ಕಾಟಿರ ಮೌನಿ ನಾಣಯ್ಯ ಕ್ರಿಕೆಟ್ ಬಗ್ಗೆ ರಚಿಸಿದ ಗೀತೆಯನ್ನು ಪ್ರಸ್ತುತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net