

ಮಡಿಕೇರಿ: ಕೊಡಗು ಜಿಲ್ಲೆಯ ಯೋಧರಿಗೆ ಸಹಕಾರಿಯಾಗಿದ್ದ ಮಡಿಕೇರಿಯ ‘ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್’ನ್ನು ಪುನರಾರಂಭಿಸಬೇಕೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿರುವ ಅವರು, ಭಾರತೀಯ ಸೇನೆಯಲ್ಲಿ ಕೊಡಗಿನ ಸಾವಿರಾರು ಜನ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ದುಡಿಯಲು ವಿವಿಧ ರಾಜ್ಯಗಳ ಅಸಂಖ್ಯಾತ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ಮಡಿಕೇರಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಇದ್ದಾಗ ಸೈನಿಕರು ಹಾಗೂ ಕಾರ್ಮಿಕರು ತಾವು ತೆರಳಬೇಕಾದ ಪ್ರದೇಶದ ರೈಲ್ವೆ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು. ಇದು ಹೆಚ್ಚು ಅನುಕೂಲಕರ ವ್ಯವಸ್ಥೆಯಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್‌ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದಿದ್ದಾರೆ.
ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದ ನಗರಸಭಾ ಮಳಿಗೆಯೊಂದರಲ್ಲಿ ಒಂದೂವರೆ ದಶಕಗಳ ಹಿಂದೆ ರೈಲ್ವೆ ಬುಕ್ಕಿಂಗ್ ಸೆಂಟರನ್ನು ತೆರೆಯಲಾಗಿತ್ತು. ಆದರೆ ೨೦೧೮ರ ಪ್ರಾಕೃತಿಕ ವಿಕೋಪ ಮತ್ತು ೨೦೧೯ ರಿಂದ ಸುಮಾರು ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೆ ನಡುಗಿಸಿದ ಕೋವಿಡ್ ಸೋಂಕಿನ ಸಂದರ್ಭ ಮುಚ್ಚಲ್ಪಟ್ಟ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಇದುವರೆಗೂ ತೆರೆದಿಲ್ಲ. ಆದ್ದರಿಂದ ಜಿಲ್ಲೆಯ ಜನತೆಗೆ ಅತಿ ಉಪಯುಕ್ತವಾಗಿರುವ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರನ್ನು ಮತ್ತೆ ಮಡಿಕೇರಿಯಲ್ಲಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.