

ಶಿವಮೊಗ್ಗ: ಕೊಡಗಿನ ಬಾನೆಭೂಮಿ ಮಾದರಿಯಲ್ಲೇ ಮಲೆನಾಡು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಸೊಪ್ಪಿನಬೆಟ್ಟ ಹಾಗೂ ಕಾನೂ ಭೂಮಿಯನ್ನೂ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಆಗ್ರಹಿಸಿದರು.
ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ಕಾಯ್ದೆ 2011ರ ರೀತಿ ಬಾನೆಭೂಮಿಗೆ ಕಂದಾಯ ನಿರ್ಧರಣೆ ಹಾಗೂ ಪೂರ್ಣ ಮಾಲೀಕತ್ವ ನೀಡಲಾಗಿದೆ. ಅದೇ ರೀತಿ ಸೊಪ್ಪಿನಬೆಟ್ಟ, ಕಾನೂ ಭೂಮಿಗಳ ಸಾಗುವಳಿದಾರರಿಗೆ ಮಾಲೀಕತ್ವ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2011ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 2(20) ಹಾಗೂ ಸೆಕ್ಷನ್ 80ಕ್ಕೆ ತಿದ್ದುಪಡಿ ತಂದು ಬಾನೆಭೂಮಿಗೆ ಕಂದಾಯ ನಿರ್ಧರಣೆಗೆ ಹಾಗೂ ಮಾಲೀಕತ್ವ ಮಂಜೂರು ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಗೆ 2013ರಲ್ಲಿ ರಾಷ್ಟ್ರಪತಿಗಳ ಅಂಕಿತವೂ ದೊರಕಿದೆ. ಕರ್ನಾಟಕ ಹೈಕೋರ್ಟ್ ಕಳೆದ ಜು.25ರಂದು 2011ರ ಬಾನೆ ಭೂಮಿ ತಿದ್ದುಪಡಿಯು ಸಂವಿಧಾನಾತ್ಮಕವಾಗಿದೆ ಎಂದು ಆದೇಶಿಸಿದೆ ಎಂದರು.
ಅಲ್ಲದೆ, ಕೊಡಗಿನ ಬಾನೆ, ಸೊಪ್ಪಿನಬೆಟ್ಟ, ಕಾನೂ, ಬೆಟ್ಟ ಹಾಗೂ ಇನ್ನಿತರ ಭೂಮಿಗಳು ವಿಶೇಷ ಹಕ್ಕುಳ್ಳ ಭೂಮಿಗಳ ವರ್ಗಕ್ಕೆ ಸೇರಿವೆ. ಈ ಭೂಮಿಗಳಲ್ಲಿ ಅಡಕೆ, ಕಾಫಿ, ಏಲಕ್ಕಿ, ಮೆಣಸು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ಪ್ರದೇಶಗಳನ್ನು ಸಕ್ರಮಗೊಳಿಸಲು ಅವಕಾಶವಿದ್ದು ಈ ಕಾನೂನಿನಿಂದ ಮಲೆನಾಡಿನ ಸಾವಿರಾರು ಸಾಗುವಳಿದಾರರು ಭೂ ಮಾಲೀಕತ್ವ ಪಡೆದಿದ್ದಾರೆ. ಆದರೆ 2010ರ ಫೆ.7 ಹಾಗೂ ಮೇ 3ರಂದು ವಿಶೇಷ ಹಕ್ಕುಳ್ಳ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಎರಡು ಸುತ್ತೋಲೆ ಹೊರಡಿಸಿದ ಕಾರಣ ಮಲೆನಾಡಿನ ಸೊಪ್ಪಿನಬೆಟ್ಟ ಕಾನೂ ಭೂಮಿಗಳ ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳು ಹಾಗೂ ಮನೆಗಳ ಸಕ್ರಮ ಅರ್ಜಿಗಳು ತಿರಸ್ಕಾರಗೊಂಡು ಅರಣ್ಯ ಭೂಮಿ ಒತ್ತುವರಿದಾರರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಜತೆಗೆ ಪ್ರಕರಣ ದಾಖಲಾಗಿ, ಸಾಗುವಳಿ ಭೂಮಿ ಕಳೆದುಕೊಂಡು ನಿರ್ಗತಿಕರಾಗುವ ಆತಂಕ ಕೂಡ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕೂಡ ಸೊಪ್ಪಿನಬೆಟ್ಟ ಹಾಗೂ ಕಾನು ಭೂಮಿಗಳ ಸಾಗುವಳಿ ಹಾಗೂ ವಸತಿ ಹಕ್ಕು ಮಂಜೂರು ಮಾಡುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಪಡಿಸುವುದಾಗಿ ತಿಳಿಸಿದ್ದು ತಕ್ಷಣವೇ ಸೊಪ್ಪಿನಬೆಟ್ಟ ಮತ್ತು ಕಾನೂ ಭೂಮಿ ಸಾಗುವಳಿದಾರರಿಗೆ ಮಂಜೂರಾತಿ ನೀಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದರು. ಪ್ರಮುಖರಾದ ರಮೇಶ್ ಇಕ್ಕೇರಿ, ಡಿ.ಸಿ.ನಿರಂಜನ್, ಎಸ್.ದೇವಾನಂದ್, ನೀಲರಕೆರೆ ದಯಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.