ಶವಗಳ ಬೆತ್ತಲೆ ಚಿತ್ರ ಸೆರೆ

10mdkn1
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ


ಮೃತ ಮಹಿಳೆಯರ ಸಂಪೂರ್ಣ ಬೆತ್ತಲೆ ಚಿತ್ರ, ಹತ್ಯೆಯಾದ ವ್ಯಕ್ತಿಗಳ ಬೆತ್ತಲೆ ಚಿತ್ರ ಮೊಬೈಲ್‌ನಲ್ಲಿ ತೆಗೆದಿಟ್ಟುಕೊಳ್ಳುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ ಜಿಲ್ಲಾಸ್ಪತ್ರೆ ಶವಾಗಾರ ಸಿಬ್ಬಂದಿ ಸೈಯ್ಯದ್ ಹುಸೇನ್‌ನಿಂದ ನಡೆದಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ ಮಡಿಕೇರಿ ನಗರ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ನ.೫ ರಂದು ಲಿಖಿತ ದೂರು ನೀಡಿದ್ದಾರೆ.

ಹಿಂದೂ ಜಾಗರಣಾ ವೇದಿಕೆ ಮಡಿಕೇರಿ ತಾಲೂಕು ಅಧ್ಯಕ್ಷ ಮುಗೇರನ ಬೆಳ್ಯಪ್ಪ ನೀಡಿದ ದೂರಿನನ್ವಯ ವೈದ್ಯಕೀಯ ಕಾಲೇಜು ಮುಖ್ಯಸ್ಥ ರು ಲಿಖಿತ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಸೈಯದ್ ಹುಸೇನ್ ನಡೆಸಿರುವ ಕಾನೂನು ಬಾಹಿರ ಕೃತ್ಯದ ದಾಖಲಾತಿ ವಿಜಯವಾಣಿಗೆ ಲಭ್ಯಯವಾಗಿದೆ.

ಶವಾಗಾರದಲ್ಲಿ ಮಹಿಳೆ ಹಾಗೂ ಪುರುಷ ಶವಗಳ ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ದುರುದ್ದೇಶಪೂರ್ವಕವಾಗಿ ಹಾಗೂ ಕಾನೂನು ಬಾಹಿರವಾಗಿ ತೆಗೆದಿಟ್ಟುಕೊಳ್ಳಲಾಗಿದೆ. ಆಸ್ಪತ್ರೆಯ ಹಲವು ಮಹಿಳಾ ಸಿಬ್ಬಂದಿಯೊಂದಿಗೆ ಆಶ್ಲೀಲವಾಗಿ ಮಾತನಾಡಿರುವುದು, ಕೊಲೆ ಬೆದರಿಕೆ ಹಾಕಿರುವುದು, ಯುವತಿಯೊಂದಿಗೆ ಆಶ್ಲೀಲವಾಗಿ ಮಾತನಾಡಿರುವುದು ಹಾಗೂ ಶವಾಗಾರದಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಹ್ವಾನಿಸುತ್ತಿರುವುದು ಆತನ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ವೇಳೆ ದಾಖಲೆಗೆ ಅಗತ್ಯವಿದ್ದಲ್ಲಿ ಮಾತ್ರ ವೈದ್ಯರು ಹೊರತು ಪಡಿಸಿದ್ದಂತೆ ಬೇರೆ ಯಾರಿಗೂ ಮೃತದೇಹದ ಚಿತ್ರ ಸೆರೆಹಿಡಿಯಲು ಅವಕಾಶವಿಲ್ಲ. ಸೈಯ್ಯದ್ ತನ್ನ ಮೊಬೈಲ್‌ನಲ್ಲಿ ಶವಗಳ ಫೋಟೋ ತೆಗೆಯುವುದರ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಾನೆ.

ತನ್ನ ಕೃತ್ಯದ ಬಗ್ಗೆ ಆಸ್ಪತ್ರೆ ಒಳಗೆ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಅಕ್ಟೋಬರ್ ೨೫ ರಂದು ತನ್ನ ಹುದ್ದೆಗೆ ರಾಜೀ ನಾಮೆ ಸಲ್ಲಿಸಿದ್ದಾನೆ. ೨೬-೦೪-೨೦೨೧ ರಂದು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ. ಪ್ರಕೃತಿ ವಿಕೋಪ ಹಾಗೂ ಕೋವಿಡ್ ವೇಳೆ ಮಾಡಿದ ಒಳ್ಳೆಯ ಕೆಲಸಕ್ಕಾಗಿ ಗಣ್ಯರಿಂದ ಸನ್ಮಾನಕ್ಕೆ ಭಾಜನನಾಗಿದ್ದ. ಮಡಿಕೇರಿ ತಾಲೂಕು ವ್ಯಾಪ್ತಿಯ ಕಡಗದಾಳು ಗ್ರಾಮದ ನಿವಾಸಿಯಾಗಿರುವ ಈತ ಅವಿವಾಹಿತ.

ಒಂದು ತಿಂಗಳ ಹಿಂದೆ ದಾದಿಯೊಬ್ಬರ ಮನೆಗೆ ಮಧ್ಯರಾತ್ರಿ ತೆರಳಿದ್ದ ವೇಳೆ ಅಕ್ಕಪಕ್ಕದವರು ಈತನನ್ನು ಹಿಡಿದುಕೊಂಡಿದ್ದರು. ಪೊಲೀಸ್ ಗುಪ್ತಚಾರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ ಗಮನಕ್ಕೆ ತಂದ ವೇಳೆ ಆತನ ಮೊಬೈಲ್ ವಶ ಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಅಧಿಕಾರಿ ವಶದಲ್ಲಿದ್ದ ಮೊಬೈಲ್ ಪೊಲೀಸ್ ಅಧಿಕಾರ ವಶಕ್ಕೆ ಒಪ್ಪಿಸಲಾಗಿದೆ.

ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಬಂದ ಮೃತದೇಹಗಳ ಫೋಟೋ ತೆಗೆದಿರುವುದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಸಂಪೂರ್ಣ ಬೆತ್ತಲೆ ಚಿತ್ರವೂ ಈತನ ಮೊಬೈಲ್‌ನಲ್ಲಿದೆ. ಇದರೊಂದಿಗೆ ಸಾಕಷ್ಟು ಮಹಿಳಾ ಸಿಬ್ಬಂದಿ ಜತೆ ಮೊಬೈಲ್‌ನಲ್ಲಿ ಮಾತನಾಡಿರುವ ದಾಖಲಾತಿಯೂ ಪತ್ತೆಯಾಗಿದೆ.

ಪೊಲೀಸ್ ಅಧಿಕಾರಿ ಸೈಯದ್ ಮೊಬೈಲ್ನಲ್ಲಿದ್ದ ದಾಖಲೆಯನ್ನು ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಸೈಯದ್ ನಡೆಸಿರುವ ಕಾನೂನು ಬಾಹಿರ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವಿಜಯವಾಣಿಗೆ ದಾಖಲಾತಿ ನೀಡಿರುವ ಸತ್ಯ ಕರ್ಕೇರ ಒತ್ತಾಯಿಸಿದ್ದಾರೆ.

ಅತ್ಯಾಚಾರ ಬೆದರಿಕೆ
ಶವಾಗಾರ ಸಿಬ್ಬಂದಿ ಸೈಯ್ಯದ್ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಮಹಿಳಾ ಸಿಬ್ಬಂದಿ ಜತೆ ಮಾತುಕತೆ ನಡೆಸಿರುವ ದಾಖಲಾತಿ ಲಭ್ಯವಾಗಿದೆ. ತಾನು ಇರುವ ಸ್ಥಳಕ್ಕೆ ಮಹಿಳಾ ಸಿಬ್ಬಂದಿ ಬರುವಂತೆ ಒತ್ತಾಯಿಸುತ್ತಿದ್ದ. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಪ್ರತಿಯೊಂದು ಸಂಭಾಷಣೆ ರೆಕಾರ್ಡ್ ಆಗುತ್ತಿತ್ತು.

ಹಲವು ಮಹಿಳಾ ಸಿಬ್ಬಂದಿ ಜತೆ ಆತ್ಮೀಯವಾಗಿ ಸಂಭಾಷಣೆ ನಡೆಸುವ ಸೈಯ್ಯದ್ ನಿಮ್ಮ ಹತ್ತಿರ ಈಗ ಬರುತ್ತೇನೆ ಎನ್ನುತ್ತಾನೆ. ಏಕೆ ಬರುವು ದೆಂದು ಕೇಳಿದ್ದ ಸಂದರ್ಭ ಅತ್ಯಾಚಾರ ಮಾಡಲು ಎಂದು ಹೇಳಿಕೊಳ್ಳುತ್ತಾನೆ. ಕೆಲವು ಸಿಬ್ಬಂದಿ ಆತನೊಂದಿಗೆ ಆತ್ಮೀಯವಾಗಿ ಮಾತನಾಡು ವುದು ಹಾಗೂ ಎಲ್ಲದ್ದಕ್ಕೂ ಸಿದ್ಧ ಎಂದು ಹೇಳಿಕೊಳ್ಳುತ್ತಿರುವುದು ಕೂಡ ದಾಖಲಾಗಿದೆ.

**
ವೈಯುಕ್ತಿಕ ಕಾರಣ ನೀಡಿ ಅಕ್ಟೋಬರ್ ಮೊದಲ ವಾರ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ೪ ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಶವಾಗಾರ ಸಿಬ್ಬಂದಿಯಾಗಿದ್ದ. ಆತನ ಕೃತ್ಯದ ಬಗ್ಗೆ ಇತರೆ ಸಿಬ್ಬಂದಿ ಮೂಲಕ ಮಾಹಿತಿ ಬಂದಿದೆ. ದಾಖಲೀಕರಣಕ್ಕೆ ಅಗತ್ಯವಿದ್ದಲ್ಲಿ ಮಾತ್ರ ವೈದ್ಯರಿಗೆ ಮರಣೋತ್ತರ ಪರೀಕ್ಷೆ ಸಂದರ್ಭ ಶವದ ಚಿತ್ರ ತೆಗೆಯಲು ಅವಕಾಶವಿದೆ. ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮರಣೋತ್ತರ ಪರೀಕ್ಷೆ ಮಾಡುವ ಸಂದರ್ಭ ಮಾನವ ಹಕ್ಕು ಆಯೋಗದವರಿಗೆ ಚಿತ್ರೀಕರಣ ಮಾಡಲು ಅವಕಾಶವಿದೆ. ಇದು ಹೊರತು ಪಡಿಸಿದ್ದಂತೆ ಯಾರಿಗೂ ಅವಕಾಶವಿಲ್ಲ. ಡಾ.ಉಮೇಶ್, ಮುಖ್ಯಸ್ಥರು, ವಿಧಿ ವಿಜ್ಞಾನ ವಿಭಾಗ, ಜಿಲ್ಲಾಸ್ಪತ್ರೆ.

**
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶವಾಗಾರ ಸಿಬ್ಬಂದಿ ಸೈಯ್ಯದ್ ಬಗ್ಗೆ ಕೆಲವರು ಮೌಖಿಕವಾಗಿ ದೂರು ನೀಡಿದ್ದಾರೆ. ಪೊಲೀಸ್ ಗುಪ್ತಚಾರ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮಾಹಿತಿ ನೀಡಿದ್ಧಾರೆ. ಡಾ.ಕಳ್ಳಿಚಂಡ ಕಾರ್ಯಪ್ಪ, ಡೀನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ.

**
ಜಿಲ್ಲಾಸ್ಪತ್ರೆ ಶವಾಗಾರ ಸಿಬ್ಬಂದಿ ಮೃತದೇಹದ ಚಿತ್ರ ಸೆರೆಹಿಡಿಯುವುದರ ಮೂಲಕ ಕಾನೂನು ಬಾಹಿರ ಕೃತ್ಯ ನಡೆಸಿದ್ದಾನೆ. ಹಲವು ಮಹಿಳಾ ಸಿಬ್ಬಂದಿ ಜತೆ ದೂರವಾಣಿಯಲ್ಲಿ ಮಾತನಾಡುವ ವೇಳೆ ಅತ್ಯಾಚಾರ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಸತ್ಯ ಕರ್ಕೇರ, ಸಾಮಾಜಿಕ ಕಾರ್ಯಕರ್ತ, ಮಡಿಕೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net