ಹೆಸರಾಯ್ತು ಕರ್ನಾಟಕ; ಹೀಗಿತ್ತು ನಾಮಕರಣದ ಶುಭಗಳಿಗೆ

Kannada
Published on

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಆ ಘಳಿಗೆಯೇ ರೋಮಾಂಚಕ. ನಾಮಕರಣಕ್ಕೆ ಶಾಸನಬದ್ಧ ಮಾನ್ಯತೆ ಕೊಡುವ ವೇಳೆ ಶಾಸನಸಭೆಯಲ್ಲಿ ಘಟಾನುಘಟಿಗಳಿದ್ದರು. ಆ ಕ್ಷಣಕ್ಕೆ ಸಾಕ್ಷಿಯಾದವರ ಪೈಕಿ ಕೆಲವರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಾಟಾಳ್ ನಾಗರಾಜ್ ಪ್ರಮುಖರು.

ಅಂದಿನ ಚಿತ್ರಣ... ನಾಮಕರಣ ಆದೇಶ ಜಾರಿಗೆ ಬಂದಿದ್ದು 1973ರ ನ. 1ರಂದು. ಆದರೆ, ಶಾಸನಸಭೆಯಲ್ಲಿ ನಿರ್ಣಯವಾಗಿದ್ದು ಅದಕ್ಕೂ ಒಂದು ವರ್ಷದ ಹಿಂದೆ, 1972ರ ಜು 27ರಂದು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿತ್ತು. ಚರ್ಚೆಯ ಆರಂಭದಲ್ಲಿ ಗುಬ್ಬಿ ಶಾಸಕ ಗಟ್ಟಿ ಚಂದ್ರಶೇಖರ್ ಮಾತನಾಡಿ, ‘‘ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಿಂದ ಬರೆಯತಕ್ಕಂಥ ಮಹಾಸುದಿನ. ರಾಜ್ಯದ ಭವ್ಯ ಪರಂಪರೆ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಚಿನ್ನ, ಮುತ್ತು, ರತ್ನ, ವೈಢೂರ್ಯಗಳನ್ನು ರಸ್ತೆಯಲ್ಲಿ ಹಾಕಿಕೊಂಡು ಮಾರುತ್ತಿದ್ದ ಸಂಪದ್ಭರಿತ ರಾಜ್ಯವಿದು. ಪರಕೀಯರ ದಾಳಿಗೆ ಒಳಪಟ್ಟು ಛಿದ್ರಛಿದ್ರವಾಗಿ ಅನೇಕ ರಾಜ್ಯಗಳಲ್ಲಿ ಅನಾಥರಾಗಿ ಬಹಳ ಕಾಲ ಬದುಕಿ ಈಗ್ಗೆ ಕೆಲವು ವರ್ಷಗಳ ಹಿಂದೆ ಕನ್ನಡದ ಜನತೆಯೆಲ್ಲಾ ಒಂದುಗೂಡಿದರೂ ನಮ್ಮ ಮಾತೆಯ ಹೆಸರನ್ನು ಒಕ್ಕೊರಲಿನಿಂದ ಕೂಗತಕ್ಕಂತಹ ಸುಯೋಗವು ಈಗ ಪ್ರಾಪ್ತವಾಗಿದೆ’ ಎಂದು ವರ್ಣಿಸಿದ್ದರು. ಸಿದ್ದವನಹಳ್ಳಿ ನಿಜಲಿಂಗಪ್ಪನವರಂಥ ಅತಿರಥರು ಕೂಡ ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರನ್ನು ‘ಕರ್ನಾಟಕದ ಅಭಿಮನ್ಯು’ ಎಂದು ಬಣ್ಣಿಸಿದ್ದರು. ವಾಟಾಳ್ ನಾಗರಾಜ್ ಕೂಡ ಸುದೀರ್ಘ ಭಾಷಣ ಮಾಡಿದ್ದರು. ಬಿ.ಡಿ. ಜತ್ತಿ ಪ್ರಸ್ತಾಪಿಸಿದ್ದ ಹೆಸರು, ಕೆಂಗಲ್ ಹನುಮಂತಯ್ಯನವರ ಪ್ರಯತ್ನ ಪ್ರಸ್ತಾಪಿಸಿದ್ದರಲ್ಲದೇ, ಕುವೆಂಪು ರಚಿಸಿದ ‘ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕವಿತೆಗಳನ್ನು ವಾಚಿಸಿದ್ದರು.

ಶೃಂಗೇರಿ ಶಾಸಕರಾಗಿದ್ದ ವೀರಪ್ಪಗೌಡ ಮಾತನಾಡಿ, ‘‘1956ರಲ್ಲಿ ಕರ್ನಾಟಕ ಮಾಡಿಯೇ ತೀರಬೇಕು ಎನ್ನುತ್ತಿದ್ದ ಕಾಲದಲ್ಲಿ, ಮಂತ್ರಿಯೊಬ್ಬರು ನನಗೆ ‘ನೀವು ಕರ್ನಾಟಕವನ್ನು ವಿರೋಧಿಸಬೇಕು, ಮಂಡ್ಯಕ್ಕೆ ಬರಬೇಕು, ಮೆರವಣಿಗೆ ಆಗಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಒಪ್ಪದ ನಾನು, ನನ್ನ ಹತ್ತಿರ ಬರಬೇಡಿ ಅಂತ ಹೇಳಿ ಕಳಿಸಿದ್ದೆ’ ಎಂದು ಹಳೆಯ ಘಟನೆ ನೆನಪಿಸಿಕೊಂಡರು.

ಮಲ್ಲೇಶ್ವರ ಶಾಸಕ ಎಂ.ಎಸ್. ಕೃಷ್ಣನ್, ಚಿಕ್ಕಪೇಟೆ ಶಾಸಕ ಕೆ.ಎಂ. ನಾಗಣ್ಣ, ಕೆ. ಪ್ರಭಾಕರ್, ಶಿರಹಟ್ಟಿ ಶಾಸಕ ವಿ.ವಿ. ವಾಯಿ, ಕುದೂರು ಶಾಸಕ ಬೆಟ್ಟಸ್ವಾಮಿಗೌಡ, ಸೊರಬ ಶಾಸಕ ಎಸ್. ಬಂಗಾರಪ್ಪ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ನಾಮಕರಣವಲ್ಲದೆ ಜಾತಿ, ಭಾಷೆ ಮುಂತಾದ ವಿಷಯಗಳ ಬಗ್ಗೆಯೂ ಮಾತನಾಡಿದ್ದರು. ಕೊನೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಅರಸು, ‘‘ನಿರ್ಣಯಕ್ಕೆ ಸರ್ವಾನುಮತದ ಸ್ವಾಗತ ಸಿಕ್ಕಿರುವುದು ಬಹಳ ಹೆಮ್ಮೆ, ಸಂತೋಷಪಡತಕ್ಕಂಥ ವಿಚಾರ’ ಎಂದು ಹೇಳಿ, ಕೊನೆಯಲ್ಲಿ ‘‘ಕರ್ನಾಟಕಕ್ಕೆ...’ ಎಂದು ಘೊಷಣೆ ಕೂಗಿದರು. ಇಡೀ ಸದನ ‘‘ಜಯವಾಗಲಿ’ ಎಂದು ದನಿಗೂಡಿಸಿತ್ತು. ಬಂಗಾರಪ್ಪ, ವಾಟಾಳ್ ಇದೇ ಸಂದರ್ಭದಲ್ಲಿ ಶಾಸಕರ ಮೇಲೆ ಮಲ್ಲಿಗೆ ಹೂವು ಎರಚಿ ಸಂಭ್ರಮಿಸಿದ್ದರು.

ಟೀಕೆಗೊಳಗಾಗಿದ್ದ ರಾಜಗೋಪಾಲಾಚಾರಿ!

‘ಕರ್ನಾಟಕ ಎಂಬ ಪದವೇ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಮಾತು ಸದನದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ‘ಮದ್ರಾಸಿನಲ್ಲಿ ತಮಿಳುನಾಡು ಎಂದು ಹೆಸರು ಬದಲಾವಣೆ ಮಾಡುವಾಗ ಕರ್ನಾಟಕದ ಜನತೆ ಏನೂ ಹೇಳಿರಲಿಲ್ಲ. ಆದರೆ ಕರ್ನಾಟಕ ಎಂಬ ಪದ ಗೊತ್ತಿಲ್ಲ ಎಂದು ಹೇಳಿರುವುದು ನಾಡಿನ ಜನರಿಗೆ ಮಾಡಿದ ಅವಮಾನ’ ಎಂದು ಹಲವರು ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ ಕರ್ನಾಟಕ ಪದದ ಅರ್ಥದ ಬಗ್ಗೆ ವಿವರಣೆಯನ್ನೂ ನೀಡಿದ್ದರು.

Kannada Rajyotsava

1565ರಲ್ಲಿ ಒಡೆದಿದ್ದು 1956ರಲ್ಲಿ ಒಂದಾಯಿತು!

  • ವಿಜಯನಗರ ಸಾಮ್ರಾಜ್ಯ ಪತನದ ನಂತರ ಕನ್ನಡನಾಡು ಒಡೆದುಹೋಗಿತ್ತು. 1565ರಲ್ಲಿ ಒಡೆದ ನಾಡು ಏಕೀಕರಣದ ಫಲವಾಗಿ 1956ರಲ್ಲಿ ಒಂದಾಯಿತು. 391 ವರ್ಷಗಳ ಕಾಲ ಕನ್ನಡನಾಡು ಬೇರೆ ಬೇರೆ ಪ್ರಾಂತ್ಯಗಳಲ್ಲಿತ್ತು. ಏಕೀಕರಣಕ್ಕಾಗಿ ನಡೆದ ಹೋರಾಟ ಮಾತ್ರ ಐತಿಹಾಸಿಕ.
  • ಕನ್ನಡ ಮಾತನಾಡುವ ನೀಲಗಿರಿ, ಸೇಲಂ, ಕೃಷ್ಣಗಿರಿ, ಹೊಸೂರು, ಅನಂತಪುರದ ಮಡಕಸಿರಾ, ಮುಧೋಳ, ಸೊಂಡೂರು, ರಾಮದುರ್ಗ, ಜಮಖಂಡಿ, ಕೊಲ್ಹಾಪುರ ಬೇರೆ ರಾಜ್ಯಕ್ಕೆ ಸೇರಿದ್ದವು. ಇವುಗಳನ್ನು ಕರ್ನಾಟಕಕ್ಕೆ ಸೇರಿಸಲು ದಶಕಗಳ ಕಾಲ ಹೋರಾಟ ನಡೆದಿದೆ. ಆದರೂ ಇನ್ನೂ ಕೆಲವು ಪ್ರದೇಶಗಳು ಕರ್ನಾಟಕದಿಂದ ದೂರವೇ ಉಳಿದಿವೆ.
  • ಧಾರವಾಡದ ಕನ್ನಡ ಸಾಹಿತಿಗಳ ಸಮ್ಮೇಳನ 1890ರಲ್ಲಿ ನಡೆದಾಗ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭವಾಯಿತು.
  • ಬೆನಗಲ್ ರಾಮರಾಯರು 1903ರಲ್ಲಿ ಧಾರವಾಡದಲ್ಲಿ ಏಕೀಕರಣದ ಕಲ್ಪನೆಯನ್ನು ಜನತೆಯ ಮುಂದೆ ಮಂಡಿಸಿ ಭಾಷಣ ಮಾಡಿದರು.
  • ಲಾರ್ಡ್ ಕರ್ಜನ್ 1905ರಲ್ಲಿ ಬಂಗಾಳದ ವಿಭಜನೆ ಮಾಡಲು ಯತ್ನಿಸಿದಾಗ ಬಂಗಾಳಿಗಳು ಅದನ್ನು ಪ್ರತಿಭಟಿಸಿದ್ದನ್ನೇ ಸ್ಪೂರ್ತಿಯಾಗಿ ಪಡೆದು ಆಲೂರು ವೆಂಕಟರಾಯರು 1907ರಲ್ಲಿ ವಿದ್ಯಾವರ್ಧಕ ಸಂಘದ ಮುಖಪತ್ರ ವಾಗ್ಭೂಷಣದಲ್ಲಿ ಏಕೀಕರಣದ ಅಗತ್ಯವನ್ನು ವಿವರಿಸಿದರು.
  • ಧಾರವಾಡದಲ್ಲಿ ಅದೇ ವರ್ಷ ನಡೆದ ಕನ್ನಡ ಸಾಹಿತಿಗಳ ಸಮ್ಮೇಳನದಲ್ಲಿ ಏಕೀಕರಣದ ಅಗತ್ಯ ಕುರಿತು ವ್ಯಾಪಕ ಚರ್ಚೆ.
  • ಬೆಂಗಳೂರಿನಲ್ಲಿ 1915ರಲ್ಲಿ ಮೈಸೂರು ಮಹಾರಾಜರ ಬೆಂಬಲದಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ. 1915-20ರವರೆಗೆ ಮೈಸೂರು, ಧಾರವಾಡ, ಹಾಸನ ಹೊಸಪೇಟೆಗಳಲ್ಲಿ ನಡೆದ ಪರಿಷತ್ತಿನ ಸಭೆಗಳಲ್ಲಿಯೂ ಏಕೀಕರಣದ ಚರ್ಚೆ.
  • 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ ಕಡಪ ರಾಘವೇಂದ್ರರಾವ್, ಮುದವೀಡು ಕೃಷ್ಣರಾವ್, ಗಂಗಾಧರರಾವ್ ದೇಶಪಾಂಡೆ ಸೇರಿ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲಿ ಭಾಷಾವಾರು ರಾಜ್ಯಗಳ ರಚನೆ ಬಗ್ಗೆ ಸಮಾಲೋಚನೆ.
  • 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಸಹ ಏಕೀಕರಣದ ಚರ್ಚೆ. ಇದೇ ರೀತಿಯ ಸಮ್ಮೇಳನಗಳು 1946ರವರೆಗೂ ನಡೆದವು.
  • 1937ರಲ್ಲಿ ಭಾರತದ ಎಲ್ಲಾ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷ ಈ ಏಕೀಕರಣವನ್ನು ಬೆಂಬಲಿಸಿತು.
  • 1938ರಲ್ಲಿ ಹುಟ್ಟಿದ ಮೈಸೂರು ಕಾಂಗ್ರೆಸ್ ಸಹ ಏಕೀಕರಣದ ಅಗತ್ಯತೆಯ ಪರ ನಿಲುವು ತೆಗೆದುಕೊಂಡಿತು.
  • 1938ರಲ್ಲಿ ಬೆನಗಲ್ ರಾಮರಾವ್ ಹಾಗೂ ಬಿ. ಶಿವಮೂರ್ತಿ ಶಾಸ್ತ್ರಿಗಳ ಪ್ರಯತ್ನದಿಂದ ಹೋರಾಟ ನಡೆಯಿತು.
  • 1946ರಲ್ಲಿ ಕರ್ನಾಟಕಸ್ಥರ ಮಹಾಸಭೆ ಏಕೀಕರಣವನ್ನು ಪ್ರತಿಪಾದಿಸಿತು.
  • ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅಧ್ಯಕ್ಷತೆಯ ಮೈಸೂರು ಕಾಂಗ್ರೆಸ್ ಸಭೆಯಲ್ಲೂ ಏಕೀಕರಣದ ಬಗ್ಗೆ ದನಿ
  • 1947ರಲ್ಲಿ ದಿವಾನರ ಅಧ್ಯಕ್ಷತೆಯ ಸಮ್ಮೇಳನದಿಂದ ಏಕೀಕರಣಕ್ಕೆ ಬೆಂಬಲ
  • 1953ರಲ್ಲಿ ಆಂಧ್ರಪ್ರದೇಶ ಪ್ರಾಂತ್ಯಕ್ಕೆ ಪ್ರಥಮ ಭಾಷಾವಾರು ರಾಜ್ಯದ ಸ್ಥಾನಮಾನ. ಅದೇ ವರ್ಷ ಹೈದರಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ಏಕೀಕರಣ ಸಮರ್ಥಿಸಿ ಕೆಂಗಲ್ ಹನುಮಂತಯ್ಯ ಭಾಷಣ.
  • 1953ರಲ್ಲಿ ದಾವಣಗೆರೆಯಲ್ಲಿ ಸತ್ಯಾಗ್ರಹ. ಹೀಗೆ 1953-56ರವರೆಗೂ ನಡೆದ ನಿರಂತರ ಪ್ರಯತ್ನದಿಂದಾಗಿ 1956 ನ. 1ರಂದು ವಿಶಾಲ ಮೈಸೂರು ರಾಜ್ಯದ ಉದಯ.
  • ಆದರೆ ಇವತ್ತಿಗೂ ಕಾಸರಗೋಡು, ತಾಳವಾಡಿ, ಮಡಾಕಶಿರಾ, ಜತ್ತ, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಕರ್ನಾಟಕಕ್ಕೆ ಸೇರಿಲ್ಲ.

ಕರ್ನಾಟಕ ಹೆಸರಿನ ಇತಿಹಾಸ

  • ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು 1956ರ ನ. 1ರಂದು ಮೈಸೂರು ರಾಜ್ಯ ಉದಯ. ಅಂದು ಹಂಪಿ ಹಾಗೂ ಬೆಂಗಳೂರಿನಲ್ಲಿ ಸಂಭ್ರಮಾಚರಣೆ.
  • ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು 1973ರ ನ. 1ರಂದು ನಾಮಕರಣ.
  • ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಹೆಸರು ಬದಲಾಯಿಸಲು ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿದ್ದಾಗ ತೀವ್ರ ಒತ್ತಡ ಇತ್ತು, ಆದರೆ ಹೆಸರು ಬದಲಾವಣೆಗೆ ಇಚ್ಛಾಶಕ್ತಿ ಪ್ರದರ್ಶಿಸಿದ್ದು ದೇವರಾಜ ಅರಸು.
  • 1972ರ ಜು. 18ರಂದು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ
  • 1972ರ ಜು. 27ರಂದು ವಿಧಾನ ಮಂಡಲದಲ್ಲಿ ನಿರ್ಣಯ ಅಂಗೀಕಾರ.
  • ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕೆ.ಸಿ. ಪಂತ್ ಅವರಿಂದ 1973ರ ಜು. 30ರಂದು ಲೋಕಸಭೆಯಲ್ಲಿ ಮತ್ತು ಆ. 8ರಂದು ರಾಜ್ಯಸಭೆಯಲ್ಲಿ ನಿರ್ಣಯ ಮಂಡನೆ, ನಂತರ ಅಂಗೀಕಾರ
  • 1973 ಅ. 8ರಂದು ಅಂದಿನ ರಾಷ್ಟ್ರಪತಿ ವಿವಿ ಗಿರಿ ಅವರಿಂದ ಕರ್ನಾಟಕ ಹೆಸರಿಗೆ ಒಪ್ಪಿಗೆ
  • 1973ರ ನ. 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಪಂಪಾಪತಿ ಹಾಗೂ ಭುವನೇಶ್ವರಿ ದರ್ಶನದ ನಂತರ ರಾಜ್ಯದ ನಕಾಶೆಗೆ ಪೂಜಿಸಿ ಕರ್ನಾಟಕ ಎಂದು ಅಧಿಕೃತವಾಗಿ ಮರುನಾಮಕರಣ

ಕರ್ನಾಟಕ ಹೆಸರು ಯಾರ ಸಲಹೆ?

ದೇವರಾಜ ಅರಸು ಅವರ ಆತ್ಮೀಯ ಗೆಳೆಯರಾಗಿದ್ದ ಸಾಹಿತಿ ಚದುರಂಗ ಅವರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರಿನ ಸಲಹೆ. ಆಲೂರು ವೆಂಕಟರಾಯರು ರಚಿಸಿದ ಕರ್ನಾಟಕ ಗತ ವೈಭವ ಪುಸ್ತಕದ ಶೀರ್ಷಿಕೆಯ ಕರ್ನಾಟಕ ಪದ ಸ್ಪೂರ್ತಿ.

ಕರ್ನಾಟಕ ಹೆಸರಿಗಾಗಿ ಹೋರಾಟ

17 ವರ್ಷಗಳ ಕಾಲ ಕರ್ನಾಟಕ ಹೆಸರಿಗಾಗಿ ರಾಜ್ಯದಲ್ಲಿ ಹೋರಾಟ ನಡೆಯಿತು. ಸದನದ ಹೊರಗಡೆಯ ಹೋರಾಟದ ಜತೆಗೆ ಸದನದ ಒಳಗಡೆ ಅಂದಾನಪ್ಪ ದೊಡ್ಡಮೇಟಿ ಚರ್ಚೆಗೆ ನಾಂದಿ ಹಾಡಿದರು. ವಿಧಾನಸಭೆಯಲ್ಲಿ 1956ರ ಡಿಸೆಂಬರ್​ನಲ್ಲಿ ಕರ್ನಾಟಕ ಹೆಸರಿನ ಬಗ್ಗೆ 2 ದಿನ ಚರ್ಚೆ ನಡೆದರೂ ಫಲಿತಾಂಶ ಶೂನ್ಯ. 1960ರಲ್ಲಿ ಮತ್ತೊಮ್ಮೆ ಗೊತ್ತುವಳಿ ಮಂಡನೆಯಾದರೂ ಚರ್ಚೆಗೆ ಬರಲಿಲ್ಲ. ಇದಾದ ನಂತರ ಐದಾರು ವರ್ಷಗಳ ಕಾಲ ಹತ್ತು ಹಲವು ಬಾರಿ ಸದನದಲ್ಲಿ ನಿಲುವಳಿ ಮಂಡನೆಯಾಗುತ್ತಿತ್ತಾದರೂ ನಿರ್ಣಯ ಕೈಗೊಳ್ಳುವಲ್ಲಿ ವಿಫಲ.

ಪ್ರಸ್ತಾಪವಾಗಿದ್ದ ಇತರ ಹೆಸರುಗಳು

ಮೈಸೂರು ರಾಜ್ಯವೇ ಇರಬೇಕು ಎಂಬ ವಾದವೂ ಪ್ರಬಲವಾಗಿತ್ತು. ಮೈಸೂರು ಕರ್ನಾಟಕ, ಮೈಸೂರು ಕನ್ನಡನಾಡು, ಕನ್ನಡ ನಾಡು, ಕರ್ಣಾಟಕ, ಕರ್ನಾಟಕ ಎನ್ನುವ ಹೆಸರುಗಳು ಚರ್ಚೆಗೆ ಬಂದಿದ್ದವು.

ಸಂಘಗಳ ಮೂಲಕ ಬದಲಾವಣೆ ಕಾವು

ಕವಿಗಳು, ಸಾಹಿತಿಗಳು ಕರ್ನಾಟಕ ಹೆಸರಿನ ಪರ ದನಿ ಎತ್ತುವ ಮೂಲಕ ಹೋರಾಟಕ್ಕೆ ಬೆಂಬಲ. ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಅ.ನ ಕೃಷ್ಣರಾವ್, ತಿ.ತಾ. ಶರ್ಮ, ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಸಾಹಿತಿಗಳು ಶಾಲಾ - ಕಾಲೇಜುಗಳಲ್ಲೂ ಕರ್ನಾಟಕ ಸಂಘ ಹೆಸರಿನಲ್ಲಿ ಸಂಘಗಳನ್ನು ಹುಟ್ಟುಹಾಕುವ ಮೂಲಕ ರಾಜ್ಯದ ಹೆಸರು ಬದಲಾವಣೆಯ ಕಾವು ಹೆಚ್ಚಿಸಿದ್ದರು.

ಅಂದು ಯಾರು ಏನೆಂದಿದ್ದರು?

ಮೈಸೂರಿನ ಹೆಸರನ್ನು ಕರ್ನಾಟಕ ಎಂದು ಬದಲಿಸುವುದಕ್ಕೆ ಸಾಕಷ್ಟು ಮಂದಿ ತ್ಯಾಗ ಮಾಡಿದ್ದಾರೆ. ಸ್ವಾಗತಾರ್ಹ ನಿರ್ಣಯ. ಆದರೆ ಹಲವು ಕನ್ನಡ ಪ್ರದೇಶಗಳು ಇನ್ನೂ ಹೊರಗೆ ಉಳಿದಿರುವುದು ಚಿಂತೆಯ ವಿಷಯ.

| ಎಚ್.ಡಿ. ದೇವೇಗೌಡ ಆಗಿನ ಹೊಳೆನರಸೀಪುರ ಶಾಸಕ

ರಾಜ್ಯದ ಹೆಸರು ಕರ್ನಾಟಕ ಆಗಬೇಕು ಎಂದು ಎಲ್ಲರೂ ಹೇಳುತ್ತಿರುವಾಗ ಮೈಸೂರಿನ ಚರಿತ್ರೆ ಹಾಗೂ ಕೊಡುಗೆ ಬಗ್ಗೆ ಭಾಷಣ ಮಾಡುವುದು ಅನವಶ್ಯಕ.

| ಕಾಗೋಡು ತಿಮ್ಮಪ್ಪ ಆಗಿನ ಸಾಗರ ಕ್ಷೇತ್ರದ ಶಾಸಕ

ಮೂರೂವರೆ ಕೋಟಿ ಕನ್ನಡಿಗರಿಗೆ ಸಂತೋಷದ ದಿನ. ನನಗೆ ಬಹಳ ಆನಂದವಾಗಿದೆ. ಈ ರಾಜ್ಯದ ಹೆಸರು ಬದ ಲಾವಣೆ ಮಾಡಬೇಕೆಂದು ಅನೇಕರು ಬಹಳ ಹೋರಾಟ ನಡೆಸಿದ್ದರು. ಅದರ ಫಲ ಇದು.

| ವಾಟಾಳ್ ನಾಗರಾಜ್ ಆಗಿನ ಚಾಮರಾಜಪೇಟೆ ಶಾಸಕ

1856ರಲ್ಲಿ ಕರ್ಣಾಟಕವೆಂಬ ಹೆಸರಿನ ಬಗ್ಗೆ ಚಳವಳಿ ಪ್ರಾರಂಭವಾಯಿತು. ಅದಾಗಿ 116 ವರ್ಷಗಳ ನಂತರ ಫಲ ದೊರೆತಿದೆ.

| ನಾಗಮ್ಮ ಕೇಶವಮೂರ್ತಿ ಆಗಿನ ದಾವಣಗೆರೆ ಶಾಸಕಿ

ಕರ್ನಾಟಕ ಎಂಬ ಹೆಸರು ಸೆಕ್ಯುಲರಿಸಂ ಆಧಾರದ ಮೇಲೆ ನಿಂತಿದೆ. ಈ ಹೆಸರಿನಿಂದ ರಾಜ್ಯದಲ್ಲಿ ಸೈಕಲಾಜಿಕಲ್ ಮತ್ತು ಎಮೋಷನಲ್ ಇಂಟಿಗ್ರೇಷನ್ ತರಬೇಕೆಂಬುದು ನಮ್ಮ ಉದ್ದೇಶ.

| ಎಸ್.ಎಂ. ಯಾಹ್ಯಾ ಆಗಿನ ಭಟ್ಕಳ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net