ವಿದ್ಯಾರ್ಥಿ ಹಂತದಲ್ಲೇ ಕಾನೂನಿನ ಜ್ಞಾನ ಅವಶ್ಯ

judge
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಉದ್ಘಾಟಿಸಿದರು. ಎಂ.ಎಸ್.ಸಂತೋಷ್, ಭಾರತಿ, ಬಿ.ಎಲ್.ಶಿವಲಿಂಗಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಪ್ರತಿಯೊಬ್ಬರೂ ನಿತ್ಯದ ಜೀವನಕ್ಕೆ ಅಗತ್ಯವಾದ ಕಾನೂನಿನ ಜ್ಞಾನ ಹೊಂದಬೇಕು. ವಿದ್ಯಾರ್ಥಿಗಳು ಈ ಹಂತದಲ್ಲೇ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸೇವಾ ದಿನಾಚರಣೆ ಮೂಲಕ ಜನರಿಗೆ ಕಾನೂನಿನ ಅರಿವು ಮೂಡಿಸುವ ಗುರಿ ಹೊಂದಲಾಗಿದೆ. ಕಾನೂನಿನ ಸೇವೆ ಅಗತ್ಯವಿರುವವರಿಗೆ, ಅಸಮರ್ಥರಿಗೆ ಕಾನೂನಿನ ನೆರವು ನೀಡಲು ಹಾಗೂ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪರಿಹರಿಸಲಾಗುತ್ತಿದೆ ಎಂದರು.

ಜನನ ದಿನಾಂಕವನ್ನು ಸರಿಯಾಗಿ ನೋಂದಣಿ ಮಾಡದೇ ಇದ್ದರೆ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುತ್ತದೆ. ಶಾಲಾ ಕಾಲೇಜುಗಳ ದಾಖಲಾತಿಗಳಲ್ಲಿ ಹಲವಾರು ತಪ್ಪುಗಳಿರುತ್ತವೆ. ಜಾತಿ, ಹೆಸರು, ವಿಳಾಸ ಆಧಾರದ ಮೇಲೆ ಮೀಸಲಾತಿ ಹಾಗೂ ಉದ್ಯೋಗ ದೊರೆಯುತ್ತದೆ. ಹೀಗಾಗಿ ದಾಖಲೆಗಳು ಸಮಪರ್ಕವಾಗಿರಲಿ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಪ್ರಾಚಾರ್ಯೆ ಭಾರತಿ, ಉಪನ್ಯಾಸಕ ಬಿ.ಎಲ್.ಶಿವಲಿಂಗಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net