ಜ್ಞಾನವು ಇನ್ನೊಂದಕ್ಕೆ ಪ್ರಮಾಣವಲ್ಲ

1-68812192e2f66
Published on
ಜ್ಞಾನವು ಸ್ವತಃ ಪ್ರಮಾಣವಾಗಿದೆ. ಇನ್ನೊಂದಕ್ಕೆ ಪ್ರಮಾಣವಲ್ಲ. ವೇದವೂ ಸ್ವತಃ ಪ್ರಮಾಣ. ತಿಳಿವಳಿಕೆಯು ವ್ಯಕ್ತಿಯ ಅಧೀನದಲ್ಲಿರುತ್ತದೆ. ಆತನು ತನ್ನ ಶ್ರದ್ಧೆಗೆ ತಕ್ಕಂತೆ ಅರಿಶಿನ, ಅಡಕೆ, ಸಗಣಿ ಇವುಗಳಲ್ಲಿ ದೇವರನ್ನು ಕಾಣಬಹುದು. ಜ್ಞಾನವು ಸ್ವಯಂ ಪ್ರಕಾಶವಾಗಿದೆ. ಇದು ಕರ್ತಾ, ಕರಣ ಕ್ರಿಯಾ ಹಾಗೂ ಫಲದ ಅಧೀನದಲ್ಲಿ ಇಲ್ಲ. ನಮ್ಮ ತಿಳಿವಳಿಕೆ ಅಥವಾ ಶ್ರದ್ಧೆ ಜ್ಞಾನವಲ್ಲ. ಪೂಜೆಯ ನಂತರ ಆತ ಅರಿಶಿನವನ್ನು ಅಡಿಕೆಯನ್ನು ತನಗಾಗಿ ಉಪಯೋಗಿಸುತ್ತಾನೆ ಅಥವಾ ಅವುಗಳಿಂದ ಸ್ವತಂತ್ರನಾಗುತ್ತಾನೆ.

ನಮ್ಮ ಶ್ರದ್ಧೆ ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಇರುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಆದರೆ ಜ್ಞಾನ ಮಾತ್ರ ಒಂದೇ. ಹಗ್ಗ ಎಂದಿಗೂ ಹಗ್ಗವಾಗಿಯೇ ಉಳಿಯುತ್ತದೆ. ಕೆಲವರು ಹಾವು ಎನ್ನಬಹುದು, ಬೇರೆ ಏನೋ ತಿಳಿಯಬಹುದು. ಪುರುಷ ಭೇದದಿಂದ ಜ್ಞಾನ ಭೇದ ಸಾಧ್ಯವಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಯಿಂದ ಜ್ಞಾನವು ನಿರ್ವಣಗೊಂಡಿಲ್ಲ. ಈಶ್ವರನೂ ಸಹ ಜ್ಞಾನವನ್ನು ನಿರ್ವಿುಸಿಲ್ಲ. ಆತನು ಸ್ವತಃ ಜ್ಞಾನಸ್ವರೂಪನು. ಈಶ್ವರನು ಜ್ಞಾನದ ಕರ್ತಾ ಎಂದರೆ ಸೃಷ್ಟಿಯಾಗುವುದಕ್ಕೂ ಮುನ್ನ ಅಜ್ಞಾನದ ಅಸ್ತಿತ್ವವನ್ನು ಒಪ್ಪಬೇಕಾಗುತ್ತದೆ.

ಆದರೆ ಜ್ಞಾನದ ಅಭಾವವನ್ನು ಯಾವುದೇ ಪ್ರಮಾಣ ಅಥವಾ ಅನುಭವದಿಂದ ಸಿದ್ಧಿಸಲು ಸಾಧ್ಯವಿಲ್ಲ. ಇದರಿಂದ ನಮಗೆ ತಿಳಿಯುವುದೇನೆಂದರೆ ಜ್ಞಾನವು ಸಾಧನ-ಸಾಧ್ಯವಲ್ಲ. ಅದು ಸಿದ್ಧವಸ್ತು. ಆದ್ದರಿಂದ ಸ್ವಯಂ ಪ್ರಕಾಶವಾಗಿದೆ. ಇದನ್ನೇ ಶಾಸ್ತ್ರದಲ್ಲಿ ತತ್ ಪದ ಎಂದು ಕರೆಯಲಾಗಿದೆ. ತಸ್ಯ ಭಾವಃ ತತ್ತ್ವಮ್ - ತತ್ತ್ವ ಎಂದರೆ ಜ್ಞಾನ, ಆತ್ಮಜ್ಞಾನ. ವೇದದ ಆದಿಭಾಗವನ್ನು ಕರ್ಮಕಾಂಡವೆಂದು ಅಂತ್ಯಭಾಗವನ್ನು ಜ್ಞಾನಕಾಂಡವೆಂದು ಕರೆಯುತ್ತಾರೆ.

ಇವುಗಳಿಗೆ ಹಲವಾರು ಪರ್ಯಾಯ ಶಬ್ದಗಳಿವೆ. ಕರ್ಮಕಾಂಡಕ್ಕೆ ವೇದ ಪೂರ್ವ, ಪ್ರವತ್ತಿ ಮಾರ್ಗ, ನಿಗಮ ಪೂರ್ವ, ಪ್ರೇಯೋಮಾರ್ಗ (ಕಠೋಪನಿಷತ್) ಧರ್ಮ- ಅರ್ಥ- ಕಾಮಗಳೆಂಬ ಮೂರು ಪುರುಷಾರ್ಥ ಹಾಗೂ ಪೂರ್ವ ಮೀಮಾಂಸ. ಜ್ಞಾನಕಾಂಡಕ್ಕೆ ವೇದಾಂತ, ನಿವೃತ್ತಿಮಾರ್ಗ, ನಿಗಮಾಂತ, ಶ್ರೇಯೋಮಾರ್ಗ (ಕಠೋಪನಿಷತ್), ಮೋಕ್ಷವೆಂಬ ನಾಲ್ಕನೇ ಪುರುಷಾರ್ಥ ಹಾಗೂ ಉತ್ತರ ಮೀಮಾಂಸ.ಈ ಜ್ಞಾನವನ್ನು ಗುರುಮುಖೇನ ಕಲಿಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net