ವಿದ್ಯೆ ಎಂದೂ ಕದಿಯಲಾಗದ ಸಂಪತ್ತು: ಕೆ.ಆರ್.ಸುಜಾತಾ

sogane centrol jail programme
ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಜಿಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ ಉದ್ಘಾಟಿಸಿದರು. ಬಿ.ಆರ್.ಬಸವರಾಜಪ್ಪ, ಡಾ. ಆರ್.ಅನಿತಾ, ಎಚ್.ಎಸ್.ಪಾಟೀಲ್, ತಾರಾ, ಕೆ.ಆರ್.ಉಮಾಮಹೇಶ್, ಜಿ.ಬಿ.ಜಯಪ್ಪ, ಶಿವಾನಂದ ಆರ್. ಶಿವಾಪುರ, ಜಿ.ಎಂ.ಮಹೇಶ್, ಗೋಪಾಲಕೃಷ್ಣ, ಎಸ್.ಎನ್.ಲೀಲಾ ಇದ್ದರು.
Published on

ಶಿವಮೊಗ್ಗ: ವಿದ್ಯೆ ಎಂಬುದು ಎಂದೂ ಕದಿಯಲಾಗದ ಸಂಪತ್ತು. ಶಿಕ್ಷಣ ಕಲಿಕೆಯಿಂದ ಜೀವನದಲ್ಲಿ ಬದಲಾವಣೆ ಮತ್ತು ಪರಿವರ್ತನೆ ತರಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ ಹೇಳಿದರು.

ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ ಮತ್ತು ಕೇಂದ್ರ ಕಾರಾಗೃಹದ ಆಶ್ರಯದಲ್ಲಿ 57ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಭ್ಯಾಸ ಇಲ್ಲದಿದ್ದರೆ ಸಮಾಜದಲ್ಲಿ ನೋವು, ಅವಮಾನ ಅನುಭವಿಸಬೇಕಾಗುತ್ತದೆ. ಅಕ್ಷರಜ್ಞಾನ ಪಡೆದು ಸಾಕ್ಷರರಾಗುವುದರಿಂದ ಕೌಶಲ ಬೆಳವಣಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು.
ವಿದ್ಯೆ ಕಲಿಕೆಗೆ ಯಾವುದೇ ವಯೋಮಾನಗಳಿಲ್ಲ. ವಿದ್ಯೆಯನ್ನು ವರ್ಧಿಸಬಹುದು ಮತ್ತು ಹಂಚಬಹುದು. ವಿದ್ಯೆಯಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬಹುದು. ಇಂದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಶಿಕ್ಷಣ ಅಗತ್ಯವಾಗಿದೆ. ಅಕ್ಷರಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಬೇರೆ ಯಾವುದೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಬಂಧಿವಾಸಿಗಳಿಗೆ ಸಾಕ್ಷರತಾ ಪ್ರಮಾಣವಚನ ಬೋಧಿಸಿ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ (ಅಭಿವೃದ್ಧಿ) ಹಾಗೂ ಪ್ರಾಚಾರ್ಯ ಬಿ.ಆರ್.ಬಸವರಾಜಪ್ಪ, ಓದು-ಬರಹವಿಲ್ಲದಿದ್ದರೆ ವ್ಯವಹಾರ ಜ್ಞಾನ ಲಭಿಸುವುದಿಲ್ಲ. ಅನಕ್ಷರತೆಯಿಂದ ಜೀವನದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತಮ ಜ್ಞಾನವನ್ನು ಪಡೆಯಲು ಶಿಕ್ಷಣ ಕಲಿಕೆ ಅತ್ಯಗತ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ, ಇಂದು ಶಿಕ್ಷಣವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣವನ್ನು ಕಲಿತು ಸಾಕ್ಷರರಾಗಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕೇ ಹೊರತು ಕೆಟ್ಟ ಕೆಲಸಗಳನ್ನು ಹಾಗೂ ಅಪರಾಧಗಳನ್ನು ಮಾಡಬಾರದು. ಅದರಿಂದ ಕಲಿತ ವಿದ್ಯೆಗೂ ಅಗೌರವವನ್ನು ನೀಡಿದಂತಾಗುತ್ತದೆ. ಆದ್ದರಿಂದ ಶಿಕ್ಷಣದಿಂದ ಉತ್ತಮ ಸಮಾಜವನ್ನು ರೂಪಿಸುವ ಹಾಗೂ ಸಾಕ್ಷರ ನಾಡನ್ನು ನಿರ್ಮಾಣ ಮಾಡುವ ಗುರಿ ನಮ್ಮದಾಗಬೇಕು ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಕ್ರಮ ಸಂಯೋಜಕ ಎಚ್.ಎಸ್.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಬಂಧಿವಾಸಿಗಳು ಪ್ರದರ್ಶಿಸಿದ ಸಾಕ್ಷರತೆಯ ಮಹತ್ವವನ್ನು ಸಾರುವ ಕಿರು ಪ್ರಹಸನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಅವರು ಕೇಂದ್ರ ಕಾರಾಗೃಹದ ಪ್ರಸಕ್ತ ಸಾಲಿನ ಸಾಕ್ಷರತಾ ಕಲಿಕಾರ್ಥಿಗಳಿಗೆ ಕಲಿಕೋಪಕರಣಗಳನ್ನು ವಿತರಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ ತಾರಾ, ಡಯಟ್‌ನ ಹಿರಿಯ ಉಪನ್ಯಾಸಕ ಕೆ.ಆರ್.ಉಮಾಮಹೇಶ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಬಿ.ಜಯಪ್ಪ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಆರ್. ಶಿವಾಪುರ, ಜೈಲರ್‌ಗಳಾದ ಜಿ.ಎಂ.ಮಹೇಶ್, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಎಸ್.ಎನ್.ಲೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net