ಜ್ಞಾನವು ಜ್ಞಾನವನ್ನು ಆಕರ್ಷಿಸುತ್ತದೆ

drona
Published on
 ಜ್ಞಾನವು ಚೈತನ್ಯದ ಒಂದು ಗುಣಮಟ್ಟ. ಜ್ಞಾನವನ್ನು ಕೇವಲ ಸಾಧನೆಗಳಿಂದ, ಗುರುವಿನ ಕೃಪೆಯಿಂದ ಮತ್ತು ನಿಮ್ಮ ಗಮನವನ್ನು ಅದರ ಮೇಲಿಡುವುದರಿಂದ ಅಭಿವೃದ್ಧಿಗೊಳಿಸಬಹುದು. ಜ್ಞಾನವೆಂದರೆ ಎಲ್ಲಾ ಕಡೆಯಿಂದಲೂ ಮಾಹಿತಿಯನ್ನು ಪಡೆದುಕೊಳ್ಳುವುದಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಜ್ಞಾನವು ಜ್ಞಾನವನ್ನು ಆಕರ್ಷಿಸುತ್ತದೆಂಬುದಕ್ಕೂ ಮತ್ತು ಶಿಷ್ಯತನದ ಪರಮಾವಧಿಗೆ ಏಕಲವ್ಯನು ಆದರ್ಶಮಯವಾದ ಉದಾಹರಣೆೆ. ಕಾಡಿನಲ್ಲಿ ಚಿರತೆಗಳು ಜಿಂಕೆಗಳನ್ನು ಕೊಲ್ಲುತ್ತಿದ್ದರಿಂದ ಏಕಲವ್ಯನು ಧನುರ್ವಿದ್ಯೆಯನ್ನು ಕಲಿತು ಜಿಂಕೆಗಳನ್ನು ರಕ್ಷಿಸಲು ನಿರ್ಧರಿಸಿದನು. ಏಕಲವ್ಯನು ಓರ್ವ ಬಡ ಬೇಡನ ಮಗ. ಆದ್ದರಿಂದ ಧನರ್ವಿದ್ಯೆಯ ಸವೋತ್ತಮ ಗುರುವಾದ ದ್ರೋಣಾಚಾರ್ಯರ ಬಳಿಗೆ ಹೋಗಿ ತನಗೆ ಧನುರ್ವಿದ್ಯೆಯನ್ನು ಕಲಿಸಬೇಕೆಂದು ಬೇಡಿದನು. ಆದರೆ ಅವರು ಕಲಿಸಲು ನಿರಾಕರಿಸಿದರು. ಏಕೆಂದರೆ ಅಂದಿನ ಕಾಲದಲ್ಲಿ ರಾಜಕುಮಾರರ ಗುರುವು ಆ ವಿದ್ಯೆಯನ್ನು ಇತರರಿಗೆ ಬೋಧಿಸಬಾರದೆಂಬ ನಿಯಮವಿತ್ತು. ಆದರೆ ಏಕಲವ್ಯನು ತನ್ನ ಮನದಲ್ಲಿ ದ್ರೋಣಾಚಾರ್ಯರೇ ತನ್ನ ಗುರುವೆಂದು ಪರಿಗಣಿಸಿ, ಅವರ ಮೂರ್ತಿಯೊಂದನ್ನು ಮಾಡಿದನು. ಗುರುಗಳನ್ನು ಸ್ಮರಿಸುತ್ತಾ ಧನುರ್ವಿದ್ಯೆಯಲ್ಲಿ ರಾಜಕುಮಾರರಿಗಿಂತಲೂ ನಿಪುಣನಾಗಿಬಿಟ್ಟನು.

ಪ್ರಾಣಿಯ ಶಬ್ದವನ್ನು ಕೇಳಿದರೆ ಸಾಕು, ಆ ದಿಕ್ಕಿನಲ್ಲಿ ಆಪ್ರಾಣಿಯ ಮೇಲೆ ಬಾಣವನ್ನು ಬಿಡುವಷ್ಟು ಸಮರ್ಥನಾದನು. ಒಂದು ದಿನ ಅರ್ಜುನನು ಏಕಲವ್ಯನ ಕುಶಲತೆಯನ್ನು ಕಂಡು, ನಿನ್ನ ಗುರು ಯಾರು? ಎಂದು ಪ್ರಶ್ನಿಸಿದಾಗ ಏಕಲವ್ಯನು, ನನ್ನ ಗುರುವು ದ್ರೋಣಾಚಾರ್ಯರು ಎನ್ನುತ್ತಾನೆ. ಅರ್ಜುನನು ದ್ರೋೕಣಾಚಾರ್ಯರ ಬಳಿಗೆ ಹೋಗಿ, ‘ಇದೇನಿದು? ಇದು ಮೋಸವಲ್ಲವೆ? ನನಗಿಂತಲೂ ಚೆನ್ನಾಗಿ ಓರ್ವ ಬೇಡನಿಗೆ ಧನುರ್ವಿದ್ಯೆಯನ್ನು ಕಲಿಸಿ, ಅವನನ್ನು ನನಗಿಂತಲೂ ನಿಪುಣನಾಗಿ ಮಾಡಿದ್ದೀರಲ್ಲ?’ ಎಂದು ಕೂಗಾಡುತ್ತಾನೆ. ದ್ರೋಣಾಚಾರ್ಯರಿಗೆ ಇದನ್ನು ಕೇಳಿ ಆಶ್ಚರ್ಯವಾಯಿತು. ತಾನು ನೋಡೇ ಇರದ ಓರ್ವ ವಿದ್ಯಾರ್ಥಿಯು, ತಾನು ಏನನ್ನೂ ಬೋಧಿಸದೆಯೇ ಅರ್ಜುನನಿಗಿಂತಲೂ ಹೇಗೆ ನಿಪುಣನಾದ ಎಂಬ ಕುತೂಹಲದಿಂದ ಈ ಹುಡುಗನನ್ನು ನೋಡಲು ಬರುತ್ತಾರೆ. ಏಕಲವ್ಯನು ತಾನು ನಿರ್ವಿುಸಿದ ಮೂರ್ತಿಯನ್ನು ತೋರಿಸಿ, ಇವರೇ ನನ್ನ ಗುರು ಎನ್ನುತ್ತಾನೆ. ದ್ರೋಣಾಚಾರ್ಯರು, ‘ಹಾಗಿದ್ದರೆ ನನಗೆ ಗುರುದಕ್ಷಿಣೆಯಾಗಿ ನಿನ್ನ ಬಲ ಹೆಬ್ಬೆರಳನ್ನು ಕೊಡು’ ಎನ್ನುತ್ತಾರೆ. ಏಕಲವ್ಯನು ತಕ್ಷಣವೇ ತನ್ನ ಬಲ ಹೆಬ್ಬೆರಳನ್ನು ಕತ್ತರಿಸಿ ಗುರುವಿಗೆ ಅರ್ಪಿಸುತ್ತಾನೆ.

ಈ ಕಥೆಯನ್ನು ಕೇಳಿದಾಗ, ಗುರುವನ್ನು ಸ್ಮರಿಸಿಕೊಳ್ಳುತ್ತಾ ಆ ಹುಡುಗ ತಾನಾಗಿಯೇ ಕಲಿತ ವಿದ್ಯೆಯನ್ನು ಗುರುದಕ್ಷಿಣೆಯ ಮೂಲಕ ಕಿತ್ತುಕೊಂಡ ಈ ಗುರು ಎಷ್ಟು ಕ್ರೂರಿ ಎಂಬ ಒಂದು ದೃಷ್ಟಿಕೋನದಿಂದ ನೋಡಬಹುದಾದರೂ ಇದಕ್ಕೆ ಮತ್ತೊಂದು ದೃಷ್ಟಿಕೋನವೂ ಇದೆ. ಏಕಲವ್ಯನು ಅಂತಹ ಅಸಾಮಾನ್ಯವಾದ ವಿದ್ಯೆಯನ್ನು ಪಡೆದಿದ್ದರೂ ಅವನು ಓರ್ವ ಸಾಮಾನ್ಯ ಬೇಡನಾಗಿಯೇ ಜೀವಿಸಿ ಮುಗಿದು ಹೋಗುತ್ತಿದ್ದ. ಅವನ ಬಗ್ಗೆ ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಈ ಘಟನೆಯಿಂದ ಏಕಲವ್ಯನು ದೇಶದಲ್ಲೆಲ್ಲಾ ಪ್ರಸಿದ್ಧಿಯನ್ನು ಪಡೆದ. ಭಾರತದ ಒಂದು ಪುಟ್ಟ ಮಗುವಿಗೂ ಸಹ ಶಿಷ್ಯನೆಂದರೆ ಏಕಲವ್ಯ ಎಂದು ತಿಳಿದಿದೆ. ಹೀಗೆ ಏಕಲವ್ಯ ಅಮರನಾದ. ಗುರು ಭಕ್ತಿಯೆಂದರೆ ಏಕಲವ್ಯ ಎನ್ನುತ್ತಾರೆ. ಅರ್ಜುನನನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ದ್ರೋಣಾಚಾರ್ಯರ ಹಿರಿಮೆಯನ್ನು ನೋಡಿ! ತಮ್ಮ ಮೇಲೆ ದೊಡ್ಡ ಅಪವಾದವನ್ನು ತಂದುಕೊಂಡು ತಮ್ಮ ಶಿಷ್ಯನನ್ನು ಉತ್ಥಾಪಿಸಿ, ಅವನನ್ನು ಅಮರನನ್ನಾಗಿ ಮಾಡಿದರು! ಆದ್ದರಿಂದ, ಗುರುವು ತಪ್ಪಾಗಿದ್ದರೂ ನಿಮ್ಮಲ್ಲಿ ಭಕ್ತಿಯಿದ್ದರೆ ನೀವೆಂದಿಗೂ ತಪ್ಪಾಗಲು ಸಾಧ್ಯವಿಲ್ಲ. ಇಲ್ಲಿ ದ್ರೋಣರು ಏಕಲವ್ಯನನ್ನೂ ಉತ್ಥಾಪಿಸಿದರು ಮತ್ತು ತಮ್ಮ ಧರ್ಮವನ್ನೂ ಪಾಲಿಸಿದರು.

ಇದೊಂದು ಸುಂದರವಾದ ಕಥೆ. ಯಾವುದರ ಮೇಲೆ ನಮ್ಮ ಗಮನವನ್ನು ಇಡುತ್ತೇವೊ ಅದರ ಗುಣ ನಮ್ಮ ಚೈತನ್ಯದಲ್ಲಿ ಪ್ರಕಟವಾಗುತ್ತದೆ. ನಿಮ್ಮ ಜೀವಮಾನವನ್ನೆಲ್ಲ ಕೋತಿಗಳನ್ನೊ ಅಥವಾ ಕೋಳಿಗಳನ್ನೊ ನೆನಪಿಸಿಕೊಳ್ಳುತ್ತಾ ಕಳೆದರೆ! ಅಥವಾ ಸದಾ ಕೋಪಿಸಿಕೊಳ್ಳುವವರನ್ನೇ ನೆನಪಿಸಿಕೊಳ್ಳುತ್ತಲಿದ್ದರೆ ನೀವೂ ಸಹ ಕೋಪದ ಸ್ಥಿತಿಗೇ ಹೊಕ್ಕಿಬಿಡುತ್ತೀರಿ. ಮನಸ್ಸು ಯಾವುದರ ಮೇಲೆ ಹೋಗುತ್ತದೊ ಆ ಗುಣಗಳನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಜ್ಞಾನಿಗಳನ್ನು ಪ್ರಾತಃ

ಸ್ಮರಣೀಯರು ಎಂದು ಕರೆಯುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಸ್ಮರಿಸಿಕೊಳ್ಳಲು ಯಾರು ಯೋಗ್ಯರೋ ಅವರು ಪ್ರಾತಃಸ್ಮರಣ ಥಯರು. ಅವರನ್ನು ಸ್ಮರಿಸಿಕೊಂಡಾಗ ನಿಮ್ಮ ಚೈತನ್ಯ ಅವರಂತೆಯೇ ಆಗಿ, ಇಡೀ ದಿನ ಅದೇ ರೀತಿಯಾಗಿ ಕಳೆಯುತ್ತದೆ. ರಾತ್ರಿ ಮಲಗುವ ಮೊದಲು ಬೆಳಿಗ್ಗೆ ಎದ್ದ ನಂತರ ಈ ರೀತಿಯಾಗಿ ಪ್ರಾರ್ಥಿಸುವುದು ಬಹಳ ಒಳ್ಳೆಯ ಅಭ್ಯಾಸ. ಭಾವನೆಗಳು ಭಾವನೆಗಳನ್ನು ಆಕರ್ಷಿಸುವಂತಹ ಜಗತ್ತಿನಲ್ಲಿದ್ದೇವೆ. ಅದೇ ರೀತಿಯಾಗಿ ಜ್ಞಾನವು ಜ್ಞಾನವನ್ನು ಆಕರ್ಷಿಸುತ್ತದೆ. ಹೀಗಾಗದಿದ್ದರೆ ಕಾರಣವೇನು ಎಂದು ಆಲೋ ಚಿಸಬೇಕಾಗುತ್ತದೆ. ಇದಕ್ಕೆ ಕಾಲವೂ ಒಂದು ಕಾರಣವಾಗಿರಬಹುದು. ಇಂದಿನಿಂದ ನೀವು ನಡೆದಾಡುವಾಗ ನಿಮ್ಮೊಳಗೆ ಒಂದು ವಜ್ರವಿದೆ, ಒಂದು ಮಾಣಿಕ್ಯವಿದೆಯೆಂದು ಅಂದುಕೊಳ್ಳಿ. ಜೀವನದಲ್ಲಿ ಅತ್ಯುತ್ತಮವಾದುದನ್ನು ಪಡೆದಿರುವಿರಿ ಎಂಬ ದೃಢ ವಿಶ್ವಾಸದಿಂದ ಜೀವಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net