ಫೆ.1ರಿಂದ ಕೆಎಂಎಫ್ ಚಟುವಟಿಕೆ ಸ್ಥಗಿತ?

1-6797cb25530d3
Published on

ಬೆಂಗಳೂರು: ಏಳನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ, ಸೌಲಭ್ಯಗಳು ಯಥಾವತ್ ಜಾರಿಯಾಗದಿದ್ದರೆ ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್)ದ ಚಟುವಟಿಕೆ ಗಳು ಫೆ.1ರಿಂದ ಸ್ಥಗಿತವಾಗುವ ಸಾಧ್ಯತೆಗಳಿವೆ.

ವೇತನ ಪರಿಷ್ಕರಣೆ, ಸೌಲಭ್ಯಗಳನ್ನು ಅನ್ವಯಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಕೆಎಂಎಫ್ ಹಾಗೂ ಎಲ್ಲ ಒಕ್ಕೂಟಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕ್ರೋಶ ಭರಿತರಾಗಿದ್ದಾರೆ. ಬೇಡಿಕೆ ಈಡೇರಿಸಿಕೊಳ್ಳಲು ಫೆ.1ರಿಂದ ಮುಷ್ಕರ ಹೂಡುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಕೆಎಂಎಫ್ ಅಧಿಕಾರಿಗಳ ಸಂಘ ತಿಳಿಸಿದೆ. ವೇತನ ಆಯೋಗದ ವರದಿ ಜಾರಿಗೆ ತಂದರೆ ಒಕ್ಕೂಟದ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ. ವಾರ್ಷಿಕ ಆಡಳಿತ ವೆಚ್ಚವು ನಿಯಮ ಪ್ರಕಾರ ಶೇ.3ರೊಳಗೆ ಇರುವಂತೆ ಈ ತನಕ ನೋಡಿಕೊಳ್ಳಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿದೆ.

ವಾರ್ಷಿಕ ವಹಿವಾಟು ವೃದ್ಧಿ: ಕೆಎಂಎಫ್ ಹಾಗೂ ಒಕ್ಕೂಟಗಳು ಪ್ರತಿವರ್ಷ ಶೇ.10 ವಹಿವಾಟು ವೃದ್ಧಿಸಿ, ಆಡಳಿತ ವೆಚ್ಚ ಶೇ.2ರೊಳಗೆ ಬರುವಂತೆ ಗರಿಷ್ಠ ಪ್ರಯತ್ನ ಮಾಡುತ್ತಿವೆ. ಎಲ್ಲ ಬೆಲೆಗಳು ಏರಿಕೆಯ ಕಾರಣದಿಂದಾಗಿ ವಾರ್ಷಿಕ ಆಡಳಿತ ವೆಚ್ಚವನ್ನು ಶೇ.4 ರಿಂದ 5ಕ್ಕೆ ಹೆಚ್ಚಿಸಲು ಕಳುಹಿಸಿದ ಪ್ರಸ್ತಾವನೆಗಳಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಧಿಕಾರಿಗಳ ಸಂಘ ಬೇಸರಿಸಿದೆ.

ಪರಿಷ್ಕೃತ ಶ್ರೇಣಿ, ವೇತನ, ಸೌಲಭ್ಯಗಳನ್ನು 2024ರ ಅ.1ರಿಂದ ಅನ್ವಯಿಸಿ ಜಾರಿಗೊಳಿಸಲು ಆದೇಶಿಸಲಾಗಿದೆಯಾದರೂ ತಾಂತ್ರಿಕ ಅಡಚಣೆ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಅನ್ವಯಿಸಲು ಹಿಂದೇಟು ಹಾಕುತ್ತಿದೆ. ಕಳೆದ 2-3 ತಿಂಗಳಿಂದ ಒತ್ತಾಯಿಸುತ್ತಲೇ ಬಂದರೂ ಸಹಕಾರ ಇಲಾಖೆ ಸ್ಪಂದಿಸಿಲ್ಲ. ಫೆ.1ರಿಂದ ಮುಷ್ಕರ ಹೂಡಲು ಅಧಿಕಾರಿಗಳು, ಸಿಬ್ಬಂದಿ ಒತ್ತಡ ಹೇರಿದ್ದಾರೆ. ಹಾಗಾಗಿ ಆದಷ್ಟು ಸಮಸ್ಯೆ ಬಗೆಹರಿಸಲು ಕೆಎಂಎಫ್ ಅಧಿಕಾರಿಗಳ ಸಂಘ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net