ಕೆಎಲ್‌ಇ ಸಾಮಾಜಿಕ ಕಳಕಳಿ ಶ್ಲಾಘನೀಯ

25Manju7
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮವನ್ನು ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಡಾ.ಪ್ರಭಾಕರ ಕೋರೆ, ಮಹಾಂತೇಶ ಕೌಜಲಗಿ, ರವಿಕುಮಾರ ಗೌಡ, ಡಾ.ವಿ.ಎಸ್.ಸಾಧುನವರ ಇತರರಿದ್ದರು.
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆ ನಡೆಸುತ್ತಿರುವ ಎಲ್ಲ ಅಂಗ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿ ಹೊಂದಿದೆ. ಡಾ. ಪ್ರಭಾಕರ ಕೋರೆ ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಗ್ರಾಮದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ವಿತರಕರಿಗೆ ಡಿಪ್ಲೊಮಾ ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಕೆಎಲ್‌ಇ ಸಂಸ್ಥೆಯು ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುತ್ತಿದೆ. ಸರ್ಕಾರದಿಂದ ಆಗದಿರುವ ಕೆಲಸವನ್ನು ಕೆಎಲ್‌ಇ ಸಂಸ್ಥೆ ಮಾಡುತ್ತಿದೆ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರಿಗೆ ವೈಜ್ಞಾನಿಕ ತಂತ್ರಜ್ಞಾನ ವಿಸ್ತರಿಸುವ ಕೃಷಿ ಪರಿಕರಗಳ ವಿತರಕರಿಗೆ 48 ವಾರಗಳ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿದ್ದಾರೆ. ಅವರ ಕನಸಿನಂತೆ ತರಬೇತಿ ಪಡೆದ ವಿತರಕರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನದ ಮಾಹಿತಿ ಪಡೆದುಕೊಂಡು ರೈತರಿಗೆ ತಿಳಿಸಿದಲ್ಲಿ ಯೋಜನೆ ಸಫಲವಾಗುವುದು. ಕಾರಣ ಕೃಷಿ ಪರಿಕರ ವಿತರಕರು ತಮ್ಮಲಾಭಾಂಶಕ್ಕಿಂತ ಹೆಚ್ಚಾಗಿ ರೈತರಿಗೆ ಸಮರ್ಪಕ ತಂತ್ರಜ್ಞಾನದ ಮಾಹಿತಿ ವಿಸ್ತರಿಸಲು ಪ್ರಾಮುಖ್ಯತೆ ನೀಡಬೇಕು ಹಾಗೂ ಕೃಷಿ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ನೆರವಾಗಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಚೇರ್ಮನ್ ಬಿ.ಆರ್. ಪಾಟೀಲ, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ, ಶಾಸಕ ರವಿಕುಮಾರ ಗೌಡ, ನಿರ್ದೇಶಕ ಡಾ.ವಿ.ಎಸ್.ಸಾಧುನವರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಕುಲಪತಿ ಡಾ.ಪಿ.ಎಲ್.ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಡಾ.ಎಸ್.ಎ. ಗದ್ದನಕೇರಿ, ಡಾ.ಎಸ್.ಎನ್. ಜಾಧವ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ, ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ, ಎಸ್.ಬಿ.ಕೊಂಗವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net