

ಸಪ್ತರ್ಷಿಗಳೆಂದೇ ಖ್ಯಾತಿ ಪಡೆದರೂ ಅವರನ್ನು ‘ಸಪ್ತಶರಣ’ರೆಂದೇ ಗುರುತಿಸಬೇಕು. ಸಮಾಜಕ್ಕಾಗಿ ಜೀವ ಸವೆಸಿ ಶರಣ ಸದೃಶ ಬದುಕಿಗೆ ಸಾಕ್ಷಿಯಾದವರು. ಹುಚ್ಚಯ್ಯ ಫಕೀರಯ್ಯ ಕಟ್ಟೀಮನಿ, ಮಹಾರುದ್ರಪ್ಪ ರೇವಪ್ಪ ಸಾಖರೆ, ಶಿವಲಿಂಗಪ್ಪ ಶಿವಯೋಗೆಪ್ಪ ಬಸವನಾಳ, ಬಸವಂತ ಬಾಳಪ್ಪ ಮಮದಾಪುರ, ಬಸಪ್ಪ ಸಿದ್ಧಲಿಂಗಪ್ಪ ಹಂಚಿನಾಳ, ಪಂಡಿತಪ್ಪ ರಾಮಪ್ಪ ಚಿಕ್ಕೋಡಿ ಹಾಗೂ ಸರದಾರ ವೀರನಗೌಡ ಪಾಟೀಲರು ಲಿಂಗಾಯತ-ವೀರಶೈವರೇ ಆಗಿದ್ದರೂ ವಿಭಿನ್ನ ಪಂಗಡಗಳಿಗೆ ಸೇರಿದವರಾಗಿದ್ದರು.
ಕಟ್ಟೀಮನಿಯವರು ಜಂಗಮರು, ಸಾಖರೆಯವರು, ಬಸವನಾಳರು, ಹಂಚಿನಾಳರು ಬಣಜಿಗರು, ಮಮದಾಪುರರು ಹೂಗಾರರು, ಪಂಡಿತಪ್ಪ ಚಿಕ್ಕೋಡಿಯವರು ನೇಕಾರರು, ವೀರನಗೌಡರು ರೆಡ್ಡಿ ಲಿಂಗಾಯತರಾಗಿದ್ದರು. ಸಂಸ್ಥಾಪಕರಲ್ಲಿ ಅರಟಾಳ ರುದ್ರಗೌಡರು ಪಂಚಮಸಾಲಿ, ವಿ.ಜಿ. ನಾಯಿಕ ಬಹದ್ದೂರ ದೇಸಾಯರು (ಚಚಡಿ) ಪಂಚಮಸಾಲಿ ಹಾಗೂ ಶ್ರೀಮಂತ ವೈಜಪ್ಪ ಆನಿಗೋಳರು ಗಾಣಿಗ ಉಪಪಂಗಡದವರಾಗಿದ್ದರು. ಅವರೆಲ್ಲ ಜಾತ್ಯತೀತ ಮನೋಧರ್ಮದವರಾಗಿದ್ದು, ಗುಣಕ್ಕೆ ಗೌರವ ನೀಡಿ ಅರ್ಹತೆಗಳನ್ನು ಪುರಸ್ಕರಿಸುತ್ತಿದ್ದರು. ಅವರಲ್ಲಿ ತರತಮ ಭಾವಗಳಿರಲಿಲ್ಲ. ವೀರಶೈವರು-ಲಿಂಗಾಯತರು ಒಂದೇ. ಅವರು ಬೇರೆ ಎಂಬ ಭೇದಭಾವವಿಲ್ಲದೆ ಸಮಾಜಕ್ಕಾಗಿ ಶ್ರಮಿಸಿದರು.
ವೀರಶೈವ-ಲಿಂಗಾಯತರಲ್ಲಿ ಹಿಂದುಳಿದ ಪಂಗಡಗಳೆನಿಸಿದ್ದ ನೇಕಾರರು, ಹೂಗಾರರು, ಗಾಣಿಗರು, ರೆಡ್ಡಿ ಲಿಂಗಾಯತರು, ಕುಡುವಕ್ಕಲಿಗರಿಗೂ ಆಡಳಿತ ಮಂಡಳಿಗಳಲ್ಲಿ ಪ್ರಾತಿನಿಧ್ಯ ಒದಗಿಸಿದ್ದರು. ಲಿಂಗಾಯತರ ಸಮಗ್ರತೆಯನ್ನು ಕಾಪಾಡಿಕೊಂಡು ಹೋಗಲು ಶ್ರಮಿಸಿದರು. ಇವರೆಲ್ಲ ಒಂದೇ ಕಡೆ ವಾಸಿಸುತ್ತ ಅಲ್ಪ ಸಂಬಳದಲ್ಲಿ ತೃಪ್ತಿ ಕಾಣುವವರಾಗಿದ್ದರು. ಪಂಡಿತಪ್ಪ ಚಿಕ್ಕೋಡಿಯವರ ಪತ್ನಿ ಗೌರಮ್ಮ ಇವರೆಲ್ಲರಿಗೆ ರೊಟ್ಟಿ-ಖಾರಬ್ಯಾಳಿ ತಯಾರಿಸಿ ಹೊಟ್ಟೆತುಂಬ ಬಡಿಸುತ್ತ ಅನ್ನಪೂರ್ಣೆ ಎನಿಸಿದ್ದರು.
ಸಮಾಜ ಸೇವೆ ಜತೆ ಪ್ರತಿಷ್ಠಿತ ಹುದ್ದೆಗಳು: ಕೆಎಲ್ಇ ಸಂಸ್ಥಾಪಕರು ಪ್ರತಿಭಾಸಂಪನ್ನರು, ಉದಾತ್ತ ಮನದವರು ಆಗಿದ್ದರು. ಸಮಾಜ ಅವರಿಗೆ ಮಹೋನ್ನತ ಸ್ಥಾನಮಾನ ನೀಡಿ ಗೌರವಿಸಿತು. ರಾವಬಹಾದ್ದೂರ್ ಗಿಲಗಂಚಿ ಗುರುಸಿದ್ದಪ್ಪನವರು ಹಾಗೂ ರಾವಬಹಾದ್ದೂರ್ ಅರಟಾಳ ರುದ್ರಗೌಡರ ದೂರದೃಷ್ಟಿ ಹಾಗೂ ಪರಿಶ್ರಮಗಳ ಫಲವನ್ನು ಇಂದು ಲಿಂಗಾಯತ ಸಮಾಜ ಅನುಭವಿಸುತ್ತಿದೆ. ಅರಟಾಳ ರುದ್ರಗೌಡರು ಹಾಗೂ ಗಿಲಗಂಚಿ ಗುರುಸಿದ್ದಪ್ಪನವರು ಬ್ರಿಟಿಷ್ ಆಡಳಿತದಲ್ಲಿ ಡೆಪ್ಯುಟಿ ಕಲೆಕ್ಟರ್ ಹುದ್ದೆಗಳನ್ನು ಅಲಂಕರಿಸಿದ್ದರು. ಇವರಲ್ಲಿ ಗಿಲಗಂಚಿ ಗುರುಸಿದ್ದಪ್ಪನವರು ನೇಕಾರ ಸಮುದಾಯದವರಾಗಿದ್ದರು. ವಂಟಮುರಿ ಸಂಸ್ಥಾನ ಹಾಗೂ ಸಿರಸಂಗಿ ಸಂಸ್ಥಾನದ ದೊರೆಗಳಾಗಿದ್ದ ರಾಜಾ ಲಖಮಗೌಡರು ಹಾಗೂ ಸಿರಸಂಗಿ ಲಿಂಗರಾಜರು ಪ್ರಥಮ ದರ್ಜೆ ನ್ಯಾಯಾಧೀಶರಾಗಿ ಕೀರ್ತಿ ಪಡೆದರು. ಸಿರಸಂಗಿ ಲಿಂಗರಾಜರು ಕುಡು ಒಕ್ಕಲಿಗರಾಗಿದ್ದರು. ರಾಜಾ ಲಖಮಗೌಡರು 1886ರಲ್ಲಿ ಇಂಗ್ಲೆಂಡಿಗೆ ಹೋಗಿ ಬಾರ್ ಅಟ್ ಲಾ ಪರೀಕ್ಷೆ ಪಾಸಾಗಿ 1888ರಲ್ಲಿ ಸ್ವದೇಶಕ್ಕೆ ಮರಳಿದರು. ದಿವಾನ ಬಹದ್ದೂರ ಮೆಣಸಿನಕಾಯಿ ಶಾಂತವೀರಪ್ಪನವರು ಕಂದಾಯ ಇಲಾಖೆಯಲ್ಲಿ ಕಾರಕೂನರಾಗಿ ಸೇವೆ ಪ್ರಾರಂಭಿಸಿ ಡಿಡಿಸಿ ಹುದ್ದೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದರು. ರಾವಬಹದ್ದೂರ್ ವೈಜಪ್ಪ ಅನಿಗೋಳ ಅವರೂ ಬೆಳಗಾವಿ ಜಿಲ್ಲೆಯ ಗೌರವ ನ್ಯಾಯಾಧೀಶರಾಗಿ ನೇಮಕಾತಿ ಹೊಂದಿದ್ದರು.
ಆಜೀವ ಸದಸ್ಯರಲ್ಲಿ ಒಬ್ಬರಾಗಿದ್ದ ಪಂಡಿತಪ್ಪ ಚಿಕ್ಕೋಡಿಯವರು ಮುಂಬಯಿ ಪ್ರಾಂತದ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯರಾಗಿ 14 ವರ್ಷಗಳ ಕಾಲ ಅಪೂರ್ವ ಸೇವೆ ಸಲ್ಲಿಸಿದ್ದರು. ಬೆಳಗಾವಿ ಜಿಲ್ಲಾ ಲೋಕಲ್ ಬೋರ್ಡ್ ಅಧ್ಯಕ್ಷರಾಗಿ, ಬೆಳಗಾವಿ ನಗರಸಭೆ ಸದಸ್ಯರಾಗಿ ಜನೋಪಯೋಗಿ ಕಾರ್ಯಗಳನ್ನು ಮಾಡಿದರು. ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ರಾವಬಹಾದ್ದೂರ್ ಎಸ್.ಎನ್. ಅಂಗಡಿಯವರೂ ಮುಂಬಯಿ ಪ್ರಾಂತದ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಜಿಲ್ಲಾ ಲೋಕಲ್ ಬೋರ್ಡ್ ಅಧ್ಯಕ್ಷರಾಗಿ ಜನಪ್ರಿಯರಾಗಿದ್ದರು. ಬಿ.ಬಿ. ಮಮದಾಪುರ ಮಾಸ್ತರರು 1927-30ರವರೆಗೆ ಜಿಲ್ಲಾ ಸ್ಕೂಲ್ ಬೋರ್ಡ್ ಚೇರ್ಮನ್ರಾಗಿದ್ದರಲ್ಲದೆ, 1936ರಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಚೇರ್ಮನ್ರಾಗಿದ್ದರು. 1958-63 ರವರೆಗೆ ಮೈಸೂರು ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಸಂಸ್ಥಾಪಕ ಆಜೀವ ಸದಸ್ಯರಾಗಿದ್ದ ಡಾ. ಎಚ್.ಎಫ್. ಕಟ್ಟಿಮನಿಯವರು ಮೈಸೂರು ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿ ಮೂರು ಅವಧಿಗಳ ಕಾಲ ಸೇವೆಗೈದರು. ಕೆಲವು ಕಾಲ ವಿಧಾನ ಪರಿಷತ್ತಿನ ಡೆಪ್ಯುಟಿ ಚೇರ್ಮನ್ರಾಗಿಯೂ ಕಾರ್ಯನಿರ್ವಹಿಸಿದರು. ಮತ್ತೊಬ್ಬ ಸಂಸ್ಥಾಪಕ ಆಜೀವ ಸದಸ್ಯರಾಗಿದ್ದ ಸರದಾರ ವೀರನಗೌಡರು ಧಾರವಾಡ ಲೋಕಲ್ ಬೋರ್ಡ್ ಅಧ್ಯಕ್ಷರಾಗಿ, ಮುಂಬಯಿ ಪ್ರಾಂತದ ಶಾಸನಸಭೆಯ ಸದಸ್ಯರಾಗಿದ್ದರು. ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಮುಂಬಯಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು.
ಲಿಂಗೈಕ್ಯ ಎಂ.ಪಿ. ಪಾಟೀಲರೂ ಕೃಷಿ ಮಂತ್ರಿಗಳಾಗಿ ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಬರಲು ಕಾರಣವಾದರು. ಕೆಎಲ್ಇ ಉಪಾಧ್ಯಕ್ಷರಾಗಿದ್ದ ದಿವಂಗತ ಸಿ.ಸಿ. ಹುಲಕೋಟಿಯವರು 1917ರಲ್ಲಿ ಧಾರವಾಡ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದರು. 1920ರಲ್ಲಿ ನಡೆದ ಚುನಾವಣೆಯಲ್ಲಿ ಎಂಎಲ್ಸಿ ಆಗಿ ಆಯ್ಕೆಯಾದರು. 1921ರಲ್ಲಿ ಧಾರವಾಡ ನಗರಸಭೆ ಅಧ್ಯಕ್ಷರಾದರು. 1924ರಲ್ಲಿ ಏಕಕಾಲಕ್ಕೆ ಧಾರವಾಡ ನಗರಸಭೆ ಅಧ್ಯಕ್ಷರೂ ಹಾಗೂ ಡಿ.ಎಲ್.ಬಿ. ಅಧ್ಯಕ್ಷರೂ ಆಗಿದ್ದರು. ಸರ್ಕಾರ 1928ರಲ್ಲಿ ಉಪನ್ಯಾಯಾಧೀಶರಾಗಿ ನೇಮಿಸಿತು. ಮುಂಬಯಿ ಪ್ರಾಂತದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ನ್ಯಾಯಾಧೀಶರೆಂದು ದುಡಿದ ಹುಲಕೋಟಿಯವರು ನಿವೃತ್ತರಾದ ಮೇಲೆ ಮುಂಬಯಿ ಪಬ್ಲಿಕ್ ಸರ್ವಿಸ್ ಕಮಿಷನ್ನ ಸದಸ್ಯರಾದರು. ಅವರ ಸಾಮರ್ಥ್ಯ ಕಂಡು ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಉಪ-ಕುಲಪತಿಗಳನ್ನಾಗಿ ನೇಮಿಸಲಾಯಿತು. ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾಗಿದ್ದ ಎಚ್.ವಿ. ಕೌಜಲಗಿಯವರು ಸವದತ್ತಿ ನಗರಸಭೆ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಜಿಲ್ಲಾ ಲೋಕಲ್ ಬೋರ್ಡ್ ಅಧ್ಯಕ್ಷ ಹಾಗೂ ಕೆಎಲ್ಇ ಕಾರ್ಯಾಧ್ಯಕ್ಷರಾಗಿದ್ದ ಆರ್.ಎಸ್. ಮಹಾಂತಶೆಟ್ಟಿಯವರೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಸಭಾಪತಿಗಳಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಆಡಳಿತ ಮಂಡಳಿ ಸದಸ್ಯರಾಗಿದ್ದ ದಿ. ಸಿ.ಎಲ್. ಪಟ್ಟಣಶೆಟ್ಟಿಯವರು ವಿಧಾನಸಭೆ ಸದಸ್ಯರಾಗಿದ್ದರು.
ಹೀಗೆ ಅನೇಕ ಮಹನೀಯರು ಕೆಎಲ್ಇ ಸಂಸ್ಥೆಯ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿ, ಸಾರ್ವಜನಿಕ ಕ್ಷೇತ್ರದಲ್ಲಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾನಾದರೂ ಕೆಎಲ್ಇ ಸರ್ಪ¤ಗಳ ಪುಣ್ಯದ ಫಲವಾಗಿ ಮೂರು ಸಲ ರಾಜ್ಯಸಭೆ, ಒಮ್ಮೆ ವಿಧಾನ ಪರಿಷತ್ ಸದಸ್ಯನಾದೆ. 1984ರಿಂದಲೂ ಕೆಎಲ್ಇ ಆಡಳಿತ ಮಂಡಳಿ ಸದಸ್ಯನಾಗಿ, 41 ವರ್ಷಗಳಿಂದ ಕಾರ್ಯಾಧ್ಯಕ್ಷನಾಗಿದ್ದೇನೆ. ನಾನು ಏನಾದರೂ ಸಾಧನೆ ಮಾಡಿದ್ದರೆ ಅದರ ಶ್ರೇಯಸ್ಸು ಕೆಎಲ್ಇ ಪದಾಧಿಕಾರಿಗಳಿಗೆ, ನಿರ್ದೇಶಕರಿಗೆ ಸಲ್ಲುತ್ತದೆ. ಇದೇ ನವೆಂಬರ್ 13ರಂದು ಕೆಎಲ್ಇ ಸಂಸ್ಥಾಪನಾ ದಿನಾಚರಣೆ. ಸರ್ಪ¤ಗಳು ಕಟ್ಟಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. 316ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ದೇಶ-ವಿದೇಶದ 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 18,000 ಸಿಬ್ಬಂದಿ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಇಂದು ಕೆಎಲ್ಇ ಸಂಸ್ಥೆಯು ಜಾಗತಿಕವಾಗಿ ವಿಸ್ತರಿಸಿದ್ದರೆ ಅಲ್ಲಿ ಸರ್ಪ¤ಗಳ ತ್ಯಾಗವೇ ಮೌಲಿಕವೆನಿಸಿದೆ. ಇಂತಹ ಸಂಸ್ಥೆಯಲ್ಲಿ ಕಲಿಯುವುದು-ದುಡಿಯುವುದು ಹೆಮ್ಮೆ. ರಾಷ್ಟ್ರ ನಿರ್ವಣದಲ್ಲಿ ಸಂಸ್ಥೆಯು ಶಿಕ್ಷಣ-ಆರೋಗ್ಯ-ಸಂಶೋಧನೆ ಕ್ಷೇತಗಳಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿದೆ. ಸರ್ಪ¤ಗಳು ಕಂಡ ಕನಸು ಸಾಕಾರಗೊಳ್ಳುತ್ತಿದೆ. ಅವರ ನೆನಪೇ ನನಗೆ ದಾರಿದೀಪ.