ವೈದ್ಯಕೀಯ ತಂತ್ರಜ್ಞಾನ ಸ್ಟಾರ್ಟ್​ಅಪ್​ಗೆ ಕೆಎಲ್​ಇ ವೇದಿಕೆ: ಮೆಡಿಕಲ್ ಕ್ಷೇತ್ರದಲ್ಲಿ ಮಹೋನ್ನತ ಹೆಜ್ಜೆ

kl
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ವೈದ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಪರಿಣತರನ್ನು ಒಂದೆಡೆ ಸೇರಿಸಿ, ವೈದ್ಯಕೀಯ ಕ್ಷೇತ್ರದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು, ವೈದ್ಯಕೀಯ ತಂತ್ರಜ್ಞಾನ ಸ್ಟಾರ್ಟ್​ಅಪ್​ಗಳಿಗೆ ಪ್ರೋತ್ಸಾಹ, ಸಹಾಯ, ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಎಲ್​ಇ ಸಂಸ್ಥೆಯು ‘ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರ’ ಸ್ಥಾಪಿಸಿದೆ.

ಕೆಎಲ್​ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಈ ಕೇಂದ್ರ ಆರಂಭಿಸಿದೆ. ಇದು ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಸುಧಾರಿಸಲು, ಸಂಶೋಧನೆ ಆಧಾರಿತ ತಂತ್ರಜ್ಞಾನ, ವೈದ್ಯಕೀಯ ಸಲಕರಣೆಗಳ ಅಭಿವೃದ್ಧಿ, ಹೊಸ ಆವಿಷ್ಕಾರಕ್ಕೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಸಹಕಾರಿಯಾಗಲಿದೆ.

ರೋಗಿಗಳು, ವೈದ್ಯಕೀಯ ಸಿಬ್ಬಂದಿ ಜೀವನ ಸುಧಾರಿಸುವ ನಿಟ್ಟಿನಲ್ಲಿ ನಾವಿನ್ಯಭರಿತ ಉತ್ಪನ್ನ ಹಾಗೂ ಸೇವೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹೊಸದಾಗಿ ಪ್ರಾರಂಭಿಸುವ ವೈದ್ಯಕೀಯ ತಂತ್ರಜ್ಞಾನ ಸ್ಟಾರ್ಟ್ ಅಪ್​ಗಳಿಗೆ ಧನಸಹಾಯ ಹಾಗೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಕಾಹೆರ್ (ಕೆಎಲ್​ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಸರ್ಚ್) ಈ ಕೇಂದ್ರ ಪ್ರಾರಂಭಿಸಿದೆ.

ಈಗಾಗಲೇ ಜೆಎನ್​ಎಂಸಿ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿರುವ ಅಡ್ವಾನ್ಸಡ್ ಸಿಮುಲೇಶನ್ ಸೆಂಟರ್ ಆಂಡ್ ಕ್ಲಿನಿಕಲ್ ಸ್ಕಿಲ್ ಲ್ಯಾಬ್ ಮತ್ತು ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಸೆಂಟರ್ ವಿಶೇಷ ಮತ್ತು ಬಹುಪಯೋಗಿ ಕೇಂದ್ರಗಳು. ಕಲಿಕೆ ಮತ್ತು ಸೇವೆ ಹೊರತಾಗಿಯೂ ಮೆಡಿಕಲ್ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಹೆಚ್ಚಬೇಕು. ಸ್ವತಃ ಸಾರ್ವಜನಿಕರು ತುರ್ತು ಪರಿಸ್ಥಿತಿಗಳಲ್ಲಿ ಜೀವರಕ್ಷಣೆಗೆ ಮುಂದಾಗಬೇಕು ಎನ್ನುವ ಉದ್ದೇಶದಿಂದ ತೆರೆದ ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರದಿಂದ 2023ರಲ್ಲಿ 10 ಸಾವಿರ ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದೆ. ಅಲ್ಲದೆ, ಐಐಟಿ ಸಹಯೋಗದಲ್ಲಿ ಸ್ಥಾಪಿಸಿರುವ ಅಡ್ವಾನ್ಸ್​ಡ್ ಸಿಮುಲೇಶನ್ ಸೆಂಟರ್ ಆಂಡ್ ಕ್ಲಿನಿಕಲ್ ಸ್ಕಿಲ್ ಲ್ಯಾಬ್ ಮೂಲಕ ಹೊಸ ತಂತ್ರಜ್ಞಾನ ಮತ್ತು ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸುವ ಕೆಲಸ ಆರಂಭಗೊಂಡಿದೆ. ಏನೇನು ಪ್ರಯೋಜನ?: ವೈದ್ಯಕೀಯ ಸಲಕರಣೆ ಉದ್ಯಮದಲ್ಲಿ ಬದಲಾವಣೆ ತರುವಲ್ಲಿ ಕಾಹೆರ್​ನ ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ. ವೈದ್ಯಕೀಯ ತಂತ್ರಜ್ಞಾನ ಒಳಗೊಂಡಿರುವ ಸ್ಟಾರ್ಟ್​ಅಪ್​ಗಳಿಗೆ ಶೈಕ್ಷಣಿಕ ಸಂಪನ್ಮೂಲ, ಅಗತ್ಯ ಮಾಹಿತಿ, ಮಾರ್ಗದರ್ಶನ, ನೆಟ್​ವರ್ಕಿಂಗ್, ಪರಿಣತಿ ಮತ್ತು ಅನುಭವಿ ವೃತ್ತಿಪರರಿಂದ ಸಹಕಾರ ಸಿಗಲಿದೆ. ಕೆಐಐಸಿ ನಿಧಿ ಸಂಗ್ರಹ, ಸಾಮಾಜಿಕ ಜವಾಬ್ದಾರಿ ಸೇರಿ ಅನೇಕ ರೀತಿ ಬೆಂಬಲ ಒದಗಿಸಲಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆ ಬದಲಾವಣೆಗೆ ಅನುಗುಣವಾಗಿ ಮೆಡ್-ಟೆಕ್ ಸ್ಟಾರ್ಟ್​ಅಪ್​ಗಳಿಗೆ ಸಂಪನ್ಮೂಲ ಕಲ್ಪಿಸುವ ಜತೆ ಹೊಸ ಮೆಡ್​ಟೆಕ್ ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕರಣಗೊಳಿಸಿ, ಉದ್ಯೋಗ ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜಿಸಲಿದೆ.

ಉದ್ದಿಮೆ ಸ್ಥಾಪನೆಗೆ ಅವಕಾಶ: ವೈದ್ಯಕೀಯ ಸಲಕರಣೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು, ವೈದ್ಯಕೀಯ ತಂತ್ರಜ್ಞಾನ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಲು ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರ ವೇದಿಕೆ ಕಲ್ಪಿಸಲಿದೆ. ಆರೋಗ್ಯ ಕ್ಷೇತ್ರದಲ್ಲಿ ಕಾಪೋರೇಟ್​ಗಳಿಗೆ ಹೂಡಿಕೆ ಮತ್ತು ಅನುದಾನದ ಅವಕಾಶ ಕಲ್ಪಿಸಲಿದೆ. ಸರ್ಕಾರಿ ಅನುದಾನಗಳ ಅತ್ಯುತ್ತಮ ಬಳಕೆ ಜತೆಗೆ ಬೆಳಗಾವಿಯಂತಹ ನಗರಗಳಲ್ಲಿ ಸ್ಟಾರ್ಟ್ ಅಪ್​ಗಳಿಗೆ ನಾವೀನ್ಯ ಮತ್ತು ಹೂಡಿಕೆ ಆಕರ್ಷಿಸಲು ಸಹಾಯ ಮಾಡಲಿದೆ. ಹೊಸ ಉತ್ಪನ್ನಗಳು, ಸೇವೆಗಳು, ಮಾರುಕಟ್ಟೆಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ. ಸುಧಾರಿತ ಆರೋಗ್ಯ ಮತ್ತು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದಾಗಿದೆ.

ಇಂದು ಮೆಡ್​ಟೆಕ್ ಹ್ಯಾಕಥಾನ್ : ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರ ಉದ್ಘಾಟನೆ ನಿಮಿತ್ತ ಆ.30ರಂದು ಬೆಳಗ್ಗೆ 9.45ಕ್ಕೆ ಕೆಎಲ್​ಇ ಶತಮಾನೋತ್ಸವ ಸಭಾಂಗಣದಲ್ಲಿ ‘ಮೆಡ್​ಟೆಕ್ ಹ್ಯಾಕಥಾನ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ 200ಕ್ಕೂ ಅಧಿಕ ಸಂಶೋಧಕರು, ವಿಜ್ಞಾನಿಗಳು, ಕೆಎಲ್​ಇ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಧಾರವಾಡ ಎಸ್​ಡಿಎಂ, ವಿಜಯಪುರ ಬಿಎಲ್​ಡಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪೇಟೆಂಟ್ ಪಡೆದಿರುವ ಸಂಶೋಧಕರು ಉತ್ಪನ್ನವನ್ನು ಪ್ರದರ್ಶಿಸಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಅದರಲ್ಲಿ ಹತ್ತು ಸಂಶೋಧನೆಗಳನ್ನು ಆಯ್ಕೆ ಮಾಡಿ, ಅತ್ಯುತ್ತಮವಾದ ಮೂರಕ್ಕೆ ನಗದು ಬಹುಮಾನ ನೀಡಲಾಗುತ್ತಿದೆ. ಹೊಸ ಆವಿಷ್ಕಾರಗಳು, ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ ಕಲ್ಪಿಸಲಿದೆ. ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್​ಗೆ ಆರ್ಥಿಕ ಬೆಂಬಲ, ಪ್ರೋತ್ಸಾಹ, ಯುವ ಸಂಶೋಧಕರಿಗೆ ವೇದಿಕೆಯಾಗಲಿದೆ ಎಂದು ಕಾಹೆರ್ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಹೆರ್ ನಿರ್ವಿುಸಿರುವ ‘ಇನ್​ಕ್ಯುಬೇಷನ್ ಆಂಡ್ ಇನ್ನೋವೇಶನ್ ಕೇಂದ್ರ’ ಮತ್ತು ‘ಅಡ್ವಾನ್ಸಡ್ ಸಿಮುಲೇಶನ್ ಸೆಂಟರ್ ಆಂಡ್ ಕ್ಲಿನಿಕಲ್ ಸ್ಕಿಲ್ ಲ್ಯಾಬ್’ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನ ಮತ್ತು ಸಾಧನ, ಸಲಕರಣೆಗಳ ಉತ್ಪಾದನೆಗೆ ಮುನ್ನುಡಿ ಬರೆಯಲಿದೆ. ಈಗಾಗಲೇ ಹಲವು ಪ್ರಯೋಗ ಜಾರಿಯಲ್ಲಿವೆ. ಭಾರತೀಯ ವೈದ್ಯಕೀಯ ಕ್ಷೇತ್ರವನ್ನು ಈ ಕೇಂದ್ರ ಇನ್ನಷ್ಟು ಸ್ವಾವಲಂಬಿ ಯನ್ನಾಗಿಸಲಿದೆ. ಈ ವಿಷಯವಾಗಿ ಪ್ರತಿಭಾವಂತರನ್ನು ಪೋ›ತ್ಸಾಹಿಸುವ ಉದ್ದೇಶವಾಗಿ ’ಮೆಡ್​ಟೆಕ್ ಹ್ಯಾಕಥಾನ್’ ಆಯೋಜಿಸಲಾಗಿದೆ. ದೇಶದ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.

| ಡಾ.ಪ್ರಭಾಕರ ಕೋರೆ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net