ಹತ್ತಾರು ಸಮಸ್ಯೆಗಳ ಅಕ್ಷರ ದೇಗುಲ

PH 01
Published on

ಜಯತೀರ್ಥ ಪಾಟೀಲ ಕಲಬುರಗಿ
ವಿಳಂಬವಾದರೂ ಮುಂಗಾರು ಮಳೆ ಶುರುವಾಗಿದ್ದು, ಎಲ್ಲೆಂದರಲ್ಲಿ ನೀರೇ ನೀರು. ಆದರೆ ಜಿಲ್ಲೆಯ ಶಾಲೆಗಳ ಸ್ಥಿತಿಗತಿ ಅಯೋಮಯ. ಸೋರುತ್ತಿರುವ ತರಗತಿ ಕೋಣೆಗಳು, ಊಟ ಮಾಡಲು ಸ್ಥಳ, ಶೌಚಗೃಹವಿಲ್ಲ. ಶುದ್ಧ ಕುಡಿಯುವ ನೀರು ಮರೀಚಿಕೆ. ಕಟ್ಟಡವಿದ್ದರೂ ಇಲ್ಲದಂತಹ ಪರಿಸ್ಥಿತಿ. ಒಟ್ಟಾರೆ ಇಡೀ ಶಾಲೆ ಜಲಾವೃತ.

ಇದು ಯಾವುದೇ ಗ್ರಾಮೀಣ ಪ್ರದೇಶದ ಶಾಲೆ ಕಥೆಯಲ್ಲ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಜೇವರ್ಗಿ ಕಾಲನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸದ್ಯದ ದುಸ್ಥಿತಿ. 60 ವರ್ಷಕ್ಕೂ ಹಳೆಯದಾದ ಒಂದೇ ಕಟ್ಟಡದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಶಾಲೆ, ಪ್ರೌಢಶಾಲೆ, ಉರ್ದು ಶಾಲೆ, ಪದವಿಪೂರ್ವ ಕಾಲೇಜುಗಳಿವೆ. ಮಾದರಿ ಪ್ರಾಥಮಿಕ ಶಾಲೆ ಇದಾಗಿದ್ದು, ಶಾಸಕರು ಶಿಕ್ಷಕರು, ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸಿ ಏನುಂಟು, ಏನಿಲ್ಲ ಕೇಳಬೇಕು. ಅಷ್ಟೇ ಅಲ್ಲ ಅದನ್ನು ಒದಗಿಸಿಕೊಡಬೇಕು. ಆದರೆ ಈವರೆಗೂ ಆ ಕೆಲಸ ಆಗಿಲ್ಲ.
ಕೋಣೆಗಳ ಕೊರತೆ ಮಧ್ಯೆಯೂ ಇದ್ದ ಕೊಠಡಿಗಳು ಭಾರಿ ಪ್ರಮಾಣದಲ್ಲಿ ಸೋರುತ್ತಿವೆ. ಹೀಗಾಗಿ ಯಾವ ಕೋಣೆಯಲ್ಲಿ ಸೋರಿಕೆ ಇಲ್ಲವೋ ಆ ಕಡೆ ಮಕ್ಕಳನ್ನು ಸ್ಥಳಾಂತರಿಸಿ ಪಾಠ ಮಾಡಲಾಗುತ್ತಿದೆ. 1-4ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯೂ ಇದೆ. ಒಂದೇ ಕೋಣೆಯಲ್ಲಿ ನಾಲ್ಕೂ ತರಗತಿ ಮಕ್ಕಳಿಗೆ ಪಾಠ ಬೋಧನೆ ನಡೆದಿದ್ದು, ಪರಿಣಾಮಕಾರಿ ಶಿಕ್ಷಣ ಸಾಧ್ಯವೇ ಎಂಬ ಪ್ರಶ್ನೆ ಮೂಡದೆ ಇರದು.

ಶೌಚಗೃಹ ನೋಡಿದರೆ ಅಸಹ್ಯ ಹುಟ್ಟಿಸುವಂತಿದೆ. ಶಿಕ್ಷಕರ ಟಾಯ್ಲೆಟ್ ಸಹ ಕೊಳಕು ನಾರುತ್ತಿದ್ದು, ಈಗಲೋ ಆಗಲೋ ಕುಸಿಯುವ ಹಂತದಲ್ಲಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿಲ್ಲ. ಊಟದ ನಂತರ ಬೋರ್‌ವೆಲ್ ಶುರು ಮಾಡಿದಾಗಲೇ ನೀರು ಕುಡಿಯಬೇಕು. ಶುದ್ಧ ಕುಡಿಯುವ ನೀರಿನ ಘಟಕವಂತೂ ಇಲ್ವೇ ಇಲ್ಲ. ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಕರಿಲ್ಲದ್ದರಿಂದ ಕನ್ನಡ ಮಾಧ್ಯಮ ಶಿಕ್ಷಕರೇ ಪಾಠ ಮಾಡುತ್ತಿದ್ದಾರೆ. 7ನೇ ತರಗತಿ ಮಕ್ಕಳ ಕೋಣೆಗೆ ಕಿಟಕಿ, ವಿದ್ಯುತ್ ಸಂಪರ್ಕವಿಲ್ಲ. ಧೋ ಎಂದು ಸುರಿಯುವ ಮಳೆಯಲ್ಲಿ ಕತ್ತಲ ಕೋಣೆಯಲ್ಲಿ ಪಾಠ ಬೋಧನೆ ಮುಂದುವರಿದಿದೆ. ಮಕ್ಕಳ ಕ್ರೀಡಾ ಚಟುವಟಿಕೆಗೆ ಮೈದಾನವೂ ಇಲ್ಲ.

1-8ನೇ ತರಗತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 243 ಮಕ್ಕಳು, ಪ್ರೌಢಶಾಲೆಯಲ್ಲಿ 130, ಉರ್ದು ಪ್ರಾಥಮಿಕ ಶಾಲೆಯಲ್ಲಿ 19 ಮತ್ತು ಉರ್ದು ಪ್ರೌಢಶಾಲೆಯಲ್ಲಿ 64 ಮಕ್ಕಳು, ಪಿಯು ಕಾಲೇಜಿನಲ್ಲಿ 360 ವಿದ್ಯಾರ್ಥಿಗಳಿದ್ದಾರೆ. ಒಟ್ಟು 21 ಕೋಣೆಗಳಿದ್ದು, ಈ ಪೈಕಿ 10 ಪ್ರಾಥಮಿಕ ಶಾಲೆ, 3 ಕಾಲೇಜು, 6ರಲ್ಲಿ ಉರ್ದು ಶಾಲೆ ಇದ್ದು, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರು ಎರಡು ಕೋಣೆ ಬಳಸುತ್ತಿದ್ದಾರೆ.

ಈ ಶಾಲೆ ಮೂಲಸೌಲಭ್ಯ ಕೊರತೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಭೇಟಿ ನೀಡಿ ಏನಿದೆ, ಏನಿಲ್ಲ ಎಂಬುದನ್ನು ಖುದ್ದಾಗಿ ಪರಿಶೀಲಿಸಿ ತುರ್ತಾಗಿ ಮಾಡಬಹುದಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಕ್ಷೇತ್ರದ ಶಾಲೆಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು.
| ಅಲ್ಲಮಪ್ರಭು ಪಾಟೀಲ್, ದಕ್ಷಿಣ ಕ್ಷೇತ್ರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net