ಶಾಸಕರಿಂದ ನಾಟಕ, ಯಕ್ಷಗಾನ, ಮಿಮಿಕ್ರಿ!, ಆಟೋಟಕ್ಕೂ ತಯಾರಿ

vidhana soudha
Published on

ಬೆಂಗಳೂರು: ಹದಿನಾರನೇ ವಿಧಾನಸಭೆಯ ಅವಧಿಯಲ್ಲಿ ‘ಶಾಸಕರ ದಿನ’ ಆಯೋಜಿಸುವ ಸಂಬಂಧ ವಿಧಾಸಭೆ ಸಚಿವಾಲಯವು ತಯಾರಿ ಆರಂಭಿಸಿದೆ. ಶಾಸಕರಲ್ಲಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಯಲ್ಲಿ ಹೊಂದಿರುವ ಆಸಕ್ತಿಯ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭವಾಗಿದೆ.

ಒಂದು ಬಾರಿ ಮಾಹಿತಿ ಕೇಳಿದ್ದು, ಕೆಲವು ಶಾಸಕರು ಮಾತ್ರ ತಮ್ಮ ಆಸಕ್ತಿಯನ್ನು ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ತಿಳಿಸಲು ಅವಕಾಶ ಮಾಡಿಕೊಡಲಾಗಿದ್ದು ಜೂನ್ ಅಂತ್ಯದೊಳಗೆ ನೀಡಲು ತಿಳಿಸಲಾಗಿದೆ.

ಅಂದಹಾಗೆ ಮೂರು ಬಗೆಯ ಮಾಹಿತಿ ಕೇಳಲಾಗಿದೆ. ಹವ್ಯಾಸಗಳ ವಿವರ ಹಾಗೂ ಅನುಭವವನ್ನು ಕೇಳಲಾಗಿದೆ. ನಾಟಕ, ಯಕ್ಷಗಾನ, ಆಶುಭಾಷಣ, ಮಿಮಿಕ್ರಿ, ಏಕಪಾತ್ರಾಭಿನಯ ಮಾಡುವ ಶಾಸಕರಿದ್ದರೆ ಅವರಿಗೆ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತದೆ.

ಸಾಂಸ್ಕೃತಿಕ ಚಟುವಟಿಕಗಳ ಪೈಕಿ ಸಂಗೀತ (ಕರ್ನಾಟಕ ಶಾಸೀಯ, ಹಿಂದೂಸ್ತಾನಿ), ಜಾನಪದ ಗೀತೆ, ಭಾವಗೀತೆ, ಮತ್ತು ಚಿತ್ರಗೀತೆ ಹಾಡುವವರಿದ್ದರೆ ಮತ್ತು ನೃತ್ಯ ಮಾಡುವವರಿದ್ದರೆ ಅದರ ಮಾಹಿತಿಯನ್ನೂ ಸಹ ಬಯಸಲಾಗಿದೆ.

ಕ್ರೀಡಾಕೂಟ ಆಯೋಜಿಸುವ ಉದ್ದೇಶವಿದ್ದು, ಕಬಡ್ಡಿ, ಈಜು, ಕುಸ್ತಿ, ುಟ್‌ಬಾಲ್, ಕ್ರಿಕೆಟ್, ಕೇರಂ, ಚೆಸ್, ಬಾಸ್ಕೆಟ್ ಬಾಲ್, ಥ್ರೋಬಾಲ್, ಟೇಬಲ್ ಟೆನಿಸ್, ಬ್ಯಾಡ್‌ಮಿಂಟನ್, ವಾಲಿಬಾಲ್, ಅಥ್ಲೆಟಿಕ್ಸ್, ಹಾಕಿ, ಜಿಗಿತ, ಗುಂಡು ಎಸೆತದ ಬಗ್ಗೆ ಆಸಕ್ತಿ ಇದ್ದರೆ ತಿಳಿಸುವಂತೆ ಕೋರಲಾಗಿದೆ.

ಶಾಸಕರ ಆಸಕ್ತಿ ನೋಡಿಕೊಂಡು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ.

224 ಶಾಸಕರ ಆಸಕ್ತಿಯ ಮಾಹಿತಿ ಕ್ರೋಡೀಕರಿಸಿ ಕಾರ್ಯಕ್ರಮ ರೂಪಿಸಲಾಗುತ್ತದೆ. ವೈಯಕ್ತಿಕ ಸ್ಪರ್ಧೆ, ಗುಂಪು ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ಸಂಘಟಿಸಲಾಗುತ್ತದೆ. ಕೊನೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಹಿತಿ ಬಂದ ನಂತರ ಕಾರ್ಯಕ್ರಮದ ದಿನಾಂಕ ಹಾಗೂ ಸ್ವರೂಪ ನಿರ್ಧಾರವಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಹಲವು ಶಾಸಕರಿಗೆ ಯಕ್ಷಗಾನ, ನಾಟಕ ಮಾಡಬೇಕೆಂದಿರುತ್ತದೆ. ಒಂದೇ ರೀತಿಯ ಆಸಕ್ತಿ ಇರುವವರನ್ನು ಒಟ್ಟು ಮಾಡಿ ತಯಾರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಕೊನೆ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರಿಗೆ ಪ್ರದರ್ಶನಕ್ಕೆ ಅವಕಾಶ ಇರಲಿದೆ ಎಂದು ಹೇಳಿದರು.

ಶಾಸಕರಾಗಿದ್ದವರು ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಸೀಮಿತವಾಗಿಬಿಡುತ್ತಾರೆ, ಭಾಷಣ ಮಾಡಿ ವೇದಿಕೆ ತೆರವು ಮಾಡಬೇಕಾಗುತ್ತದೆ. ಶಾಸಕರ ದಿನ ಆಚರಣೆ ಮೂಲಕ ಶಾಸಕರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಅವರ ಅಭಿರುಚಿಯೂ ತಿಳಿಯಲಿದೆ ಎಂಬುದು ಕಾರ್ಯಕ್ರಮದ ಒಟ್ಟಾರೆ ತಿರುಳಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net