

ಕಿಕ್ಕೇರಿ: ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ ಭಾರತೀಯರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನಿ ಮೂಲದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು, ಪ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿ ಕಿಕ್ಕೇರಿಯಲ್ಲಿ ಭಜರಂಗದಳ ಮತ್ತಿತರ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ಬಸ್‌ನಿಲ್ದಾಣದಲ್ಲಿ ಶುಕ್ರವಾರ ವಿವಿಧ ಹಿಂದುಪರ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಮುಖಂಡ ಅಕ್ಷಯ್ ಮಾತನಾಡಿ, ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ತಕ್ಕ ಶಾಸ್ತಿಯಾಗಬೇಕು ಎಂದು ಆಗ್ರಹಿಸಿದರು. ಈ ಹಿಂದೆಯೂ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಹತ್ಯೆಗೈದಿದ್ದಾರೆ. ನಮ್ಮ ದೇಶದ ಗಡಿಗೆ ನುಸುಳಿ ನಡೆಸುವ ಪಾಕ್ ಮೂಲದ ಉಗ್ರರ ದಾಳಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಮುಖಂಡ ಪುನೀತ್ ಮಾತನಾಡಿ, ಭಯೋತ್ಪಾದಕರ ಗುಂಡಿಗೆ ಅಮಾಯಕ 28ಪ್ರವಾಸಿಗರು ಬಲಿಯಾಗಿದ್ದಾರೆ. ಕಾಶ್ಮೀರಕ್ಕೆ ಪ್ರವಾಸ ತೆರಳುವುದನ್ನು ನಿಲ್ಲಿಸಿದರೆ ಕಾಶ್ಮೀರದ ಆರ್ಥಿಕ ಸ್ಥಿತಿ ಕುಸಿಯಲಿದೆ. ಇಲ್ಲಿ ಅಡಗಿರುವ ಉಗ್ರರಿಗೆ, ಭಯೋತ್ಪಾದಕರಿಗೆ ಕಾಶ್ಮೀರಿ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಅಮಾಯಕ ಜೀವಗಳು ಬಲಿಯಾಗಲಿವೆ ಎಂದು ಎಚ್ಚರಿಸಿದರು. ಪೈಶಾಚಿಕ ಕೃತ್ಯ ನಡೆಸಿದ ಭಯೋತ್ಪಾದಕರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಿಂದ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಪ್ರಯಾಣಿಕರೂ ಬಸ್‌ಗಳಿಂದ ಕೆಳಗೆ ಇಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಯೋತ್ಪಾದಕರಿಗೆ ಧಿಕ್ಕಾರ ಕೂಗಿದ್ದು ಗಮನ ಸೆಳೆಯಿತು. ಮುಖಂಡರಾದ ರಾಜು, ಚರಣ್, ವರುಣ್, ಪವನ್, ಸಚಿನ್, ವಿನೋದ್, ವಿಜಿ, ಅರುಣ, ಮಹೇಂದ್ರ, ಮುರುಳಿ, ದಿನೇಶ್, ಸುಹಾಸ್ ಮತ್ತಿತರರಿದ್ದರು.