ಕಿತ್ತೂರು ಚೆನ್ನಮ್ಮ ಸಮಾಧಿ; ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ|Kittur Chennamma

CM Siddaramaiah
Published on

ಬೆಂಗಳೂರು: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನಲ್ಲಿರುವ ಕಿತ್ತೂರು ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ(Kittur Chennamma Samadhi; Declared a national monument) ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಪ್ರಧಾನಿ ಮೋದಿ( PM Modi)ಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ವಸಾಹತುಶಾಹಿ ಆಡಳಿತದ ವಿರುದ್ಧ ಸಶಸ್ತ್ರ ಪ್ರತಿರೋಧ ಮುನ್ನಡೆಸಿದ ಮೊದಲ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಭಾರತದ ಇತಿಹಾಸದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಆಕೆಯ ಶೌರ್ಯ ಮತ್ತು ಅದಮ್ಯ ಮನೋಭಾವವು ರಾಷ್ಟ್ರದಾದ್ಯಂತ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದ್ದಾರೆ.

ಈ ಅಪ್ರತಿಮ ನಾಯಕಿಯ ಸಮಾಧಿಯು ಕೇವಲ ವಿಶ್ರಾಂತಿ ಸ್ಥಳವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಸಂಕೇತಿಸುವ ಪವಿತ್ರ ತಾಣ. ಇದು ಧೈರ್ಯ ಮತ್ತು ತ್ಯಾಗದ ದಾರಿದೀಪವಾಗಿ ನಿಂತಿದೆ. 1824 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಕ್ತಿಯನ್ನು ಧಿಕ್ಕರಿಸಿದ ಮಹಿಳೆಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ 1958 ರ ಅಡಿಯಲ್ಲಿ ಈ ತಾಣವನ್ನು ರಾಷ್ಟ್ರೀಯವಾಗಿ ಪ್ರಮುಖ ಸ್ಮಾರಕವೆಂದು ಗುರುತಿಸುವುದು ಅಗತ್ಯವೆಂದು ಪ್ರತಿಪಾದಿಸಿದ್ದಾರೆ.

ಈ ಸಮಾಧಿ ಸ್ಥಳ ಐತಿಹಾಸಿಕ ಮಹತ್ವ ಹೊಂದಿದೆ. ಆದರೂ ಇದು ಸರಿಯಾದ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಮತ್ತು ಹೊರಗಿನ ಪ್ರವಾಸಿಗರನ್ನು ಈ ಸ್ಥಳ ಸೆಳೆಯುತ್ತದೆ. ಆ ಮೂಲಕ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಜತೆಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಅದಕ್ಕಿಂತ ಮುಖ್ಯವಾಗಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚೆನ್ನಮ್ಮನ ಅಪ್ರತಿಮ ಪಾತ್ರದ ಬಗ್ಗೆ ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡಲು ಮತ್ತು ನಮ್ಮ ಸಾಮೂಹಿಕ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸಲು ಇದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.

ಈ ಪವಿತ್ರ ಸ್ಥಳವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಮೌಲ್ಯಮಾಪನ ಮಾಡುವ ಮತ್ತು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net