ಮಧುರ ಪ್ರೀತಿಯ ‘ಕಿರುನಗೆ’: ಮದುವೆ ಮನೆಯಲ್ಲಿ ನಡೆಯುವ ಲವ್‌ಸ್ಟೋರಿಗೆ ಅಶೋಕ್ ಕಡಬ ಆ್ಯಕ್ಷನ್-ಕಟ್

ಕಿರುನಗೆ ಚಿತ್ರತಂಡ
ಕಿರುನಗೆ ಚಿತ್ರತಂಡ
Published on

ಪ್ರಮುಖ ಮುಖ್ಯಾಂಶಗಳು

  • ಅಶೋಕ ಕಡಬ ನಿರ್ದೇಶನದ ಮುಂದಿನ ಸಿನಿಮಾ ಘೋಷಣೆ
  • ಈ ಬಾರಿ ಲವ್ ಸ್ಟೋರಿ ಹೇಳಲು ಮುಂದಾದ ನಿರ್ದೇಶಕ
  • ಅನುಪಮ್ ಖೇರ್ ಸಹೋದರ ರಾಜು ಖೇರ್ ಸ್ಯಾಂಡಲ್ ವುಡ್ ಗೆ ಎಂಟ್ರಿ
ಬೆಂಗಳೂರು: ‘ನಿಂಬಿಯಾ ಬನಾದ ಮ್ಯಾಗ ಭಾಗ 1’ ಬಳಿಕ ನಿರ್ದೇಶಕ ಅಶೋಕ ಕಡಬ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ‘ಕಿರುನಗೆ’ ಎಂದು ಹೆಸರಿಡಲಾಗಿದ್ದು, ಡಾ. ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜ್ ಮತ್ತು ಹಿರಿಯ ನಿರ್ಮಾಪಕ ಗೋವಿಂದರಾಜ್ ದಂಪತಿ ಇತ್ತೀಚೆಗಷ್ಟೇ ಟೈಟಲ್ ಅನಾವರಣಗೊಳಿಸಿದರು. ಈ ಚಿತ್ರದಲ್ಲಿ ಹೆಸರಾಂತ ಬಾಲಿವುಡ್ ನಟ ಅನುಪಮ್ ಖೇರ್ ಸಹೋದರ ರಾಜು ಖೇರ್ ನಟಿಸುತ್ತಿದ್ದಾರೆ. ಶಿವರಾಜಕುಮಾರ್ ನಟಿಸಿದ್ದ ‘ಘೋಸ್ಟ್’ ಚಿತ್ರದ ಮೂಲಕ ಅನುಪಮ್ ಖೇರ್ 2023ರಲ್ಲಿ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಅವರ ಸಹೋದರ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗೆಯೇ ‘ಆಸ್ಕರ್’ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗರಡಿಯಲ್ಲಿ ಪಳಗಿರುವ ಸುಕೃತ್ ಸಂಗೀತ ಸಂಯೋಜಿಸುತ್ತಿದ್ದು, ಈ ಹಿಂದೆ ಆಲ್ಬಂ ಹಾಡುಗಳಿಗೆ ಸಂಗೀತ ನೀಡಿದ್ದ ಸುಕೃತ್ ಇದೇ ಮೊದಲ ಬಾರಿಗೆ ಸಿನಿಮಾಗೆ ಸಂಗೀತ ನೀಡುತ್ತಿರುವುದುವಿಶೇಷ. ‘ಕಿರುನಗೆ’ ಲವ್‌ಸ್ಟೋರಿಯಾಗಿದ್ದು, ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಅಶೋಕ್ ಕಡಬ, ‘ತಂದೆ-ತಾಯಿಗಾಗಿ ಮಕ್ಕಳೇ ಪ್ರೀತಿಯನ್ನು ತ್ಯಾಗ ಮಾಡುವ ಕಥಾ ಹಂದರದ ಚಿತ್ರವಿದು. ಮೊದಲರ್ಧ ಮದುವೆ ಮನೆಯಲ್ಲಿ ಕಥೆ ನಡೆಯುತ್ತದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರು, ಉಡುಪಿ, ವಿಜಯಪುರ, ಮುಂಬೈ, ಗೋವಾದಲ್ಲಿ ಶೂಟಿಂಗ್ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು. ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ವಿಜಯ್ ರಾಜ್ ಹಾಗೂ ಖುಷ್ಬೂ ನಾಯಕ- ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ, ಸುಧಾ ಬೆಳವಾಡಿ, ಸಂಗೀತಾ ಅನಿಲ್, ಮೂಗು ಸುರೇಶ್, ಮಂಜುನಾಥ್ ಹೆಗ್ಡೆ, ರಾಜು ಖೇರ್ ಕಲಾಬಳಗದಲ್ಲಿದ್ದಾರೆ. ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ, ನಾಗಾರ್ಜುನ ಶರ್ಮಾ ಸಾಹಿತ್ಯ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net