

ನವದೆಹಲಿ: ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪಾಲಕರು ತಮ್ಮ ಸೊಸೆ ಸ್ಮೃತಿ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸೊಸೆ ಮನೆಯನ್ನು ತೊರೆದಿದ್ದಾರೆ ಮತ್ತು ಮಗನಿಗೆ ಕೇಂದ್ರ ಸರ್ಕಾರ ನೀಡಿದ ಕೀರ್ತಿಚಕ್ರವನ್ನು ಸ್ಪರ್ಶಿಸಲು ಬಿಡಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಮತ್ತು ಮಂಜು ಸಿಂಗ್ ದೂರಿದ್ದಾರೆ.
ಮಗನಿಗೆ ಸರ್ಕಾರ ಕೊಟ್ಟ ಕೀರ್ತಿಚಕ್ರದೊಂದಿಗೆ ಸೊಸೆ ಮನೆ ಬಿಟ್ಟು ಹೋಗಿದ್ದಾಳೆ. ಕೀರ್ತಿಚಕ್ರವನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅಂಶುಮಾನ್ ಅವರ ಚಿತ್ರಗಳು, ಆಲ್ಬಂ ಮತ್ತು ಬಟ್ಟೆಗಳನ್ನು ಸೊಸೆ ತೆಗೆದುಕೊಂಡು ಹೋಗಿದ್ದಾಳೆ. ಮನೆಯ ಗೋಡೆಯ ಮೇಲೆ ನೇತಾಡುವ ಚಿತ್ರ ಮಾತ್ರ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಂಶುಮಾನ್ ಸಿಂಗ್ ಪಾಲಕರು ಹೇಳಿಕೊಂಡಿದ್ದಾರೆ.
ಹುತಾತ್ಮರಾದ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಹಣಕಾಸಿನ ನೆರವು ನೀಡುವ ಭಾರತೀಯ ಸೇನೆಯ (ಎನ್‌ಒಕೆ) ನಿಯಮಗಳಲ್ಲಿ ನಾವು ಬದಲಾವಣೆಯನ್ನು ಬಯಸುತ್ತೇವೆ. ಎನ್‌ಒಕೆ ಮಾನದಂಡ ಸರಿಯಿಲ್ಲ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೂ ಮಾತನಾಡಿದ್ದೇವೆ. ಅಂಶುಮಾನ್ ಅವರ ಪತ್ನಿ ಈಗ ನಮ್ಮೊಂದಿಗೆ ವಾಸಿಸುತ್ತಿಲ್ಲ. ಮದುವೆಯಾಗಿ ಐದು ತಿಂಗಳಾಗಿದೆ, ಮಗುವಿಲ್ಲ. ಭುಜದ ಮೇಲೆ ಹಾರವನ್ನು ನೇತುಹಾಕಿರುವ ಮಗನ ಫೋಟೋ ಮಾತ್ರ ನಮ್ಮ ಬಳಿ ಇದೆ. ಅದಕ್ಕಾಗಿಯೇ ನಾವು ಎನ್‌ಒಕೆ ಮಾನದಂಡವನ್ನು ಬದಲಾಯಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಹುತಾತ್ಮರ ಪತ್ನಿ ಕುಟುಂಬದಲ್ಲಿ ಉಳಿದಿದ್ದಾರೆಯೇ ಎಂಬ ನಿಟ್ಟಿನಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇತರ ಪೋಷಕರಿಗೆ ತೊಂದರೆಯಾಗದಂತೆ ಸರ್ಕಾರ ಎನ್‌ಒಕೆ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಮಂಜು ಸಿಂಗ್ ಆಗ್ರಹಿಸಿದರು.
ಅಂದಹಾಗೆ ಕಳೆದ ವರ್ಷ ಸಿಯಾಚಿನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜನರನ್ನು ರಕ್ಷಿಸುವ ಯತ್ನದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ವೀರಮರಣ ಹೊಂದಿದ್ದರು. ಮರಣೋತ್ತರ ಗೌರವವಾಗಿ ಘೋಷಿಸಲಾದ ಕೀರ್ತಿ ಚಕ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಂಶುಮಾನ್ ಸಿಂಗ್ ತಾಯಿ ಮತ್ತು ಪತ್ನಿ ಸ್ಮೃತಿ ಸಿಂಗ್ ಇದೇ ತಿಂಗಳಲು 5 ರಂದು ಸ್ವೀಕರಿಸಿದರು. (ಏಜೆನ್ಸೀಸ್)