

ದೆಹಲಿ: 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬ್ರೆಜಿಲ್‌ನ ಮಾಡೆಲ್ ಫೋಟೋ ಬಳಸಿಕೊಂಡು 22 ಬಾರಿ ನಕಲಿ ಮತದಾನ ಮಾಡಲಾಗಿದೆ ಎಂದು ಆರೋಪಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ರಿಜಿಜು, ವಿಪಕ್ಷ ನಾಯಕರ ಹೇಳಿಕೆಗಳನ್ನು ರಾಜಕೀಯ ಪ್ರೇರಿತ ನಾಟಕ ಎಂದು ತಳ್ಳಿಹಾಕಿದರು.
ರಾಹುಲ್ ಗಾಂಧಿ ವಿದೇಶ ಪ್ರವಾಸಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಭಾರತದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ, ತಮ್ಮ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು. ನಾಳೆ ಬಿಹಾರದಲ್ಲಿ ಮತದಾನ ನಡೆಯಲಿದೆ, ಅಲ್ಲಿ ಕಾಂಗ್ರೆಸ್ನ ಅಸ್ತಿತ್ವವೇ ಉಳಿದಿಲ್ಲ, ಈಗ ಹರಿಯಾಣ ಸಮಸ್ಯೆಯನ್ನು ಹೊರತರುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರಾಗಿರುವವರು ಜವಾಬ್ದಾರಿಯುತವಾಗಿ ವರ್ತಿಸಬೇಕು, ಅಪ್ರಸ್ತುತ ಹೇಳಿಕೆಗಳಿಗಾಗಿ ಸಮಯ ವ್ಯರ್ಥ ಮಾಡುವ ಬದಲು ಗಂಭೀರ ಸಮಸ್ಯೆಗಳತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬೃಹತ್ ಮತದಾರರು ಸೇರಿದ್ದಾರೆ ಇದರ ಅರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡಾ 12.5 ರಷ್ಟು, ಇದರ ಉದ್ದೇಶವೇ ಮೊಸದ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಾಗಿತ್ತು ಎಂದರು.
ಹರಿಯಾಣ ಚುನಾವಣೆಯ ದಿನ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಭವಿಷ್ಯ ನುಡಿದಿದ್ದವು, ಆದರೆ ಫಲಿತಾಂಶ ಬದಲಾಗಿ ಬಿಜೆಪಿ ಗೆಲುವು ಸಾಧಿಸಿವೆ ಎಂದರು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಾಧ್ಯಮಗಳ ಮುಂದೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರುವ ವೀಡಿಯೊವನ್ನು ಸಹ ಪ್ರದರ್ಶಿಸಿದರು.
ಚುನಾವಣಾ ಆಯೋಗವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ನಕಲಿ ಮತದಾರರನ್ನು ತೆಗೆದುಹಾಕಬಹುದು. ಆದರೆ ಅವರು ಏಕೆ ಅದನ್ನು ಮಾಡುತ್ತಿಲ್ಲ? ಕಾರಣ ಸ್ಪಷ್ಟ, ಅವರು ಬಿಜೆಪಿಗೆ ಸಹಾಯ ಮಾಡುತಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಚಿತ್ರಗಳಿಗೆ ವಿಭಿನ್ನ ಹೆಸರುಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ನಿದರ್ಶನಗಳನ್ನು ತೋರಿಸಿದರು.(ಏಜೆನ್ಸೀಸ್)