

| ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ, ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ
ಶ್ರೀವಸಿಷ್ಠರು ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನ ಮುಂದಿನ ಜನ್ಮದ ಕಥೆಯನ್ನು ಹೇಳುತ್ತಿದ್ದಾರೆ. ವಿದೂರಥ ಎಂಬುದಾಗಿ ಈಗ ಅವನ ಹೆಸರು. ಅವನ ರಾಜಧಾನಿಯ ಸಮೀಪದಲ್ಲಿ ಘೊರ ಸಂಗ್ರಾಮ ನಡೆಯುತ್ತಿದೆ. ಜಗತ್ತು ಪರಮಾರ್ಥ ಸತ್ಯವಲ್ಲ, ಪರಬ್ರಹ್ಮದ ತೋರಿಕೆ ಎಂಬುದಾಗಿ ತೋರಿಸಿಕೊಡುವುದೇ ಶ್ರೀ ವಸಿಷ್ಠರ ಉಪದೇಶದ ಮುಖ್ಯ ಉದ್ದೇಶ. ಈ ಕಥೆಯ ಉದ್ದೇಶವೂ ಅದುವೇ ಆಗಿದೆ. ಇಷ್ಟೇ ಆಗಿದ್ದರೆ ಯುದ್ಧದ ವರ್ಣನೆ ಇಷ್ಟೊಂದು ದೀರ್ಘ ಏಕೆ? ಎಂಬ ಪ್ರಶ್ನೆ ಬರುತ್ತದೆ.
ಈ ಜಗತ್ತಿನಲ್ಲಿ ದೀರ್ಘಕಾಲದವರೆಗೆ ಜರುಗುವ ಅನೇಕ ಘಟನೆಗಳಿವೆ. ನೂರಾರು ವರ್ಷಗಳವರೆಗೆ, ಅಷ್ಟೇ ಏಕೆ! ಸಾವಿರಾರು ವರ್ಷಗಳ ವರೆಗೆ ದೀರ್ಘಕಾಲ ನಡೆಯುವ ಪ್ರಕ್ರಿಯೆಗಳೂ ಈ ಸೃಷ್ಟಿಯಲ್ಲಿವೆ. ಅವುಗಳ ಎದುರಿನಲ್ಲಿ ಈ ಯುದ್ಧ ಅಷ್ಟೊಂದು ದೀರ್ಘವಲ್ಲ. ಈ ಯುದ್ಧ ಅನೇಕ ದಿನಗಳವರೆಗೆ ನಡೆದಿರಬಹುದು ಎಂದಿಟ್ಟುಕೊಳ್ಳೋಣ. ದೀರ್ಘಕಾಲ ಪರ್ಯಂತ ಇರುವ ವಸ್ತುಗಳು ಅಥವಾ ದೀರ್ಘಕಾಲ ನಡೆಯುತ್ತಿರುವ ಪ್ರಕ್ರಿಯೆಗಳು ಅವು ದೀರ್ಘಕಾಲಿಕ ಆದುದರಿಂದಲೇ ಶಾಶ್ವತ ಸತ್ಯವೆಂಬ ಭಾವನೆ ಬರುತ್ತದೆ. ಆದರೆ ದೀರ್ಘಕಾಲಿಕವೆಂದ ಮಾತ್ರಕ್ಕೆ ಪರಮಾರ್ಥ ಸತ್ಯವಾಗಿರಬೇಕಿಲ್ಲ ಎಂಬುದನ್ನು ಸೂಚಿಸುವುದೇ ದೀರ್ಘವಾದ ವರ್ಣನೆಯ ಉದ್ದೇಶ.
ಯುದ್ಧರಂಗದಲ್ಲಿ ದ್ವಂದ್ವಯುದ್ಧ ನಡೆಯುತ್ತಿದೆ. ಶ್ರೀ ವಸಿಷ್ಠರು ಇದೀಗ ಅಲ್ಲಿರುವ ಎರಡೂ ಪಕ್ಷಗಳ ರಾಜರು ಯಾರು? ಯಾವ ದೇಶದಿಂದ ಬಂದವರು? ಎಂಬುದಾಗಿ ಪಟ್ಟಿಮಾಡಿ ಹೇಳುತ್ತಿದ್ದಾರೆ. ಮೊದಲು ಲೀಲಾಪತಿ, ಅಂದರೆ ವಿದೂರಥನ ಬೆಂಬಲಿಗರ ಪಟ್ಟಿ ಬಂದಿದೆ. ಇದು ಮುಗಿದ ನಂತರ ಮುಂದೆ ಸಿಂಧುರಾಜನ ಬೆಂಬಲಿಗರ ಪಟ್ಟಿ ಬರಲಿದೆ. ಭಾರತದ ಮಧ್ಯದಲ್ಲಿ ನಿಂತು ನೋಡಿದರೆ, ಅಲ್ಲಿಂದ ಪೂರ್ವಾದಿ ದಿಕ್ಕುಗಳಲ್ಲಿರುವ ರಾಜರ ಅಥವಾ ರಾಜ್ಯಗಳ ಪಟ್ಟಿಗಳನ್ನು ಕ್ರಮವಾಗಿ ಕೊಡುತ್ತಿದ್ದಾರೆ. ಈಗ ಪೂರ್ವ ಮತ್ತು ಆಗ್ನೇಯ ದಿಕ್ಕುಗಳಲ್ಲಿರುವ ರಾಜ್ಯಗಳ ಯಾದಿಯನ್ನು ಕೊಟ್ಟಿದ್ದಾರೆ. ದಕ್ಷಿಣ ದಿಕ್ಕಿನಲ್ಲಿರುವ ರಾಜ್ಯಗಳ ಪಟ್ಟಿಯನ್ನು ಇದೀಗ ಕೊಡುತ್ತಿದ್ದಾರೆ.
‘ಶ್ರೀರಾಮ! ಲೀಲಾಪತಿಯಾಗಿರುವ ವಿದೂರಥನ ಪಕ್ಷದಲ್ಲಿರುವ ದಕ್ಷಿಣ ದಿಕ್ಕಿನ ರಾಜ್ಯಗಳ ಮತ್ತು ರಾಜರ ಪಟ್ಟಿಯನ್ನು ಈಗ ಹೇಳುತ್ತಿದ್ದೇವೆ. ವಿಂಧ್ಯ, ಕುಸುಮಾಪೀಡ, ಮಹೇಂದ್ರ, ದರ್ದುರ, ಮಲಯ, ಸೂರ್ಯವಂತ ಎಂಬ ಆರು ಪರ್ವತರಾಜ್ಯಗಳ ಸೈನಿಕರಿದ್ದರು. ಹಾಗೆಯೇ ಅವಂತಿ, ಶಾಂಬವತೀ, ದಶಪೂರ, ಕಥಾಚಕ್ರ, ರೇಷಿಕ, ಆತುರಕಚ್ಛಪ, ವನವಾಸ, ಉಪಗಿರಿ, ಭದ್ರಗಿರಿ, ನಾಗರ, ದಂಡಕ, ಗಣರಾಷ್ಟ್ರ, ನೃರಾಷ್ಟ್ರ, ಸಾಹ, ಶೈವ, ಆರ್ಷ್ಯಮೂಕ (ಋಷ್ಯಮೂಕ), ಕಕೋಟ, ವನಬಿಂಬಲ ಈ ದೇಶಗಳ ರಾಜರುಗಳು ಇದ್ದರು.’
‘ಹಾಗೆಯೇ ಪಂಪ ಪ್ರದೇಶದ ನಿವಾಸಿಗಳು, ಕೈರಕ, ಕರ್ಕವೀರಕ, ಸ್ವೈರಿಕ, ಯಾಸಿಕ, ಧರ್ಮಪತ್ತನ, ಪಂಜಿಕ, ಕಾಶಿಕ, ತೃಷ್ಣಖಲ್ಲೂಲ, ಯಾದ, ತಾಮ್ರಪರ್ಣ, ಗೋನರ್ದ, ಕನಕ ಮತ್ತು ದೀನಪತ್ತನ ಎಂಬ ಹೆಸರಿನ ರಾಜ್ಯದ ರಾಜರಿದ್ದರು. ತಾಮ್ರೀಕ, ದಂಭರಾಕೀರ್ಣ, ಸಹಕಾರ, ಐಣಕ, ವೈತುಂಡಕ, ತುಂಬವನ, ಅಲಾಜಿನ ಮತ್ತು ದ್ವೀಪಕರ್ಣಿಕ ಎಂಬ ದೇಶಗಳ ರಾಜರು ಇದ್ದರು.’
‘ಅಂತೆಯೇ ಕರ್ಣಿಕಾಭ, ಶಿಬಿ, ಕೊಂಕಣ, ಚಿತ್ರಕೂಟಕ, ಕರ್ಣಾಟ, ಮಂಟ, ವಟಕ, ಮಹಾಕಟಕಿಕ, ಆಂಧ್ರ, ಕೋಲಗಿರಿ, ಆವಂತಿಕ, ವಿಚೇರಿಕ, ಚಂಡಾಯತ್ತ, ದೇವನಕ, ಕ್ರೌಂಚ, ವಾಹ, ಶಿಲಾಕ್ಷಾರೋದ, ಭೋನಂದ, ಮರ್ದನ, ಮಲಯ, ಚಿತ್ರಕೂಟ ಶಿಖರ ನಿವಾಸಿಗಳು ಮತ್ತು ಲಂಕಾನಿವಾಸಿಗಳಾದ ರಾಕ್ಷಸರು ಇವರೆಲ್ಲರೂ ದಕ್ಷಿಣ ದಿಕ್ಕಿನಿಂದ ವಿದೂರ ಥನ ಬೆಂಬಲಿಗರು’. ‘ವಿದೂರಥನಿಗೆ ನಿಋತಿ ದಿಕ್ಕಿನಿಂದ ಸಹಾಯಕ್ಕಾಗಿ ಹೋದ ರಾಜ್ಯಗಳೆಂದರೆ, ಮಹಾರಾಜ್ಯ, ಸುರಾಷ್ಟ್ರ, ಸಿಂಧು, ಸೌವೀರ, ಶೂದ್ರ, ಆಭೀರ, ದ್ರವಿಡ, ಕೀಕಟ, ಸಿದ್ಧಖಂಡ, ಕಾಲಿರುಹ ಈ ದೇಶಗಳ
ರಾಜರುಗಳು, ಅಲ್ಲದೇ ಹೇಮಗಿರಿ, ರೈವತಕ, ಜಯಕಚ್ಛ ಮತ್ತು ಮಯವರ ಎಂಬ ಪರ್ವತಗಳ ನಿವಾಸಿಗಳಿದ್ದರು. ಈ ಮಯವರ ಎಂಬ ಪರ್ವತದಲ್ಲಿ ಯವನರು ವಾಸಿಸುತ್ತಾರೆ. ಅಲ್ಲದೇ ಬಾಹ್ಲೀಕ, ಮಾರ್ಗಣ, ಅವಂತ, ಧೂಮ್ರ, ತುಂಬಕ, ಲಾಜಗಣ ಎಂಬ ದೇಶದವರು ಮತ್ತು ಅಲ್ಲಿಯ ಪರ್ವತವಾಸಿಗಳು, ಅಬ್ಧಿತೋಕ ಮತ್ತು ನಿಯುತ ಎಂಬ ದೇಶಗಳ ರಾಜರು ವಿದೂರಥನ ಕಡೆಗೆ ಇದ್ದ ಜನರು. ನಿಋತಿ ದಿಕ್ಕಿನಿಂದ ಬಂದ ಹತ್ತೊಂಭತ್ತು ದೇಶಗಳ ಮತ್ತು ನಾಲ್ಕು ಪರ್ವತಗಳ ಜನರು ಅವನ ಪಕ್ಷದಲ್ಲಿದ್ದರು’.
‘ಇನ್ನು ಅವನ ವಿರುದ್ಧ ಪಕ್ಷವಾಗಿರುವ ಸಿಂಧುರಾಜನ ಕಡೆ ಇರುವ ದೇಶಗಳನ್ನು ಹೇಳುತ್ತೇನೆ ಕೇಳು! ಪಶ್ಚಿಮ ದಿಕ್ಕಿನಲ್ಲಿ ಎತ್ತರದ ದೊಡ್ಡ ಪರ್ವತಗಳಿವೆ. ಅವುಗಳ ಹೆಸರುಗಳು ಮಣಿಮಂತ, ಕುರಾರ್ಪಣ, ವನ, ಅರ್ಕಹ, ಮೇಘಭವ, ಚಕ್ರವಂತ, ಅಸ್ತಪರ್ವತ. ಅಲ್ಲಿಯ ಜನರ ಹೆಸರು ‘ಪಂಚಜನ’ ಎಂಬುದಾಗಿ. ಅವರು ಕಾಶ ಮತ್ತು ಬ್ರಾಹ್ಮಣರಿಗೆ ಕಡುವಿರೋಧಿಗಳು. ಇವರೆಲ್ಲರೂ ಸಿಂಧುರಾಜನ ಕಡೆ ಇದ್ದಾರೆ. ಅಲ್ಲದೇ ಭಾರಕ್ಷತಥ, ಪಾರಕ, ಶಾಂತಿಕ, ಶೈಬ್ಯಾರ, ಮರಕಾಯಾಚ್ಛ, ಗುಹುತ್ವ, ನಿಯಮ, ಹೈಹಯ, ಸುಹ್ಯಗಾಯಗಾಯ, ತಾಜಿಕ, ಹೂಣಕ - ಈ ದೇಶಗಳ ರಾಜರು ಮತ್ತು ಸೈನಿಕರು ಅವನ ಕಡೆ ಇದ್ದಾರೆ.ಇನ್ನೂ ಅನೇಕರಿದ್ದಾರೆ. ಇಲ್ಲಿ ಎರಡು ಸೇನೆಗಳಲ್ಲಿರುವ ರಾಜ್ಯಗಳ ಹೆಸರು, ಪರ್ವತಗಳ ಹೆಸರು ಮತ್ತು ಜನಾಂಗಗಳ ಹೆಸರುಗಳು ಇತಿಹಾಸದಲ್ಲಿ ಬೇರೆ ಬೇರೆ ಕಡೆಗಳಲ್ಲಿಯೂ ಬಂದಿವೆ.
ಆದರೆ ಇಲ್ಲಿ ಬಂದಿರುವ ಹೆಸರುಗಳ ಸಂಖ್ಯೆ ತುಂಬಾ ದೊಡ್ಡದಿದೆ. ಬಹುಶಃ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭರತಖಂಡದ ರಾಜ್ಯಗಳ ಹೆಸರುಗಳು ಒಟ್ಟಿಗೆ ಬೇರೆ ಕಡೆ ಸಿಗಲಾರವು. ಈ ಹೆಸರುಗಳಲ್ಲಿ ಕೆಲವು ಇಂದಿಗೂ ಉಳಿದುಕೊಂಡಿರುವುದು ಗಮನಾರ್ಹ.
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)